2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಇದೇ ಮೊದಲ ಬಾರಿಗೆ ಎನ್ನುವಂತೆ ವಿದೇಶದಲ್ಲಿ ನಡೆಯುವ ಸಾಧ್ಯತೆಯಿದೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜಿಗೆ ದುಬೈ ಸಾಕ್ಷಿಯಾಗುವ ಸಾಧ್ಯತೆಯಿದೆ.
2024ರ ಐಪಿಎಲ್ ಆಟಗಾರರ ಹರಾಜು ಮುಂಬರುವ ಡಿಸೆಂಬರ್ 15ರಿಂದ 19ರೊಳಗಾಗಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೂ ಮುನ್ನ ಡಿಸೆಂಬರ್ 09ರಂದು ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ನಡೆಯಲಿದೆ.
ಈ ಕುರಿತಂತೆ ಐಪಿಎಲ್ ಆಡಳಿತ ಮಂಡಳಿಯು ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲವಾದರೂ, Cricbuzz ವೆಬ್‌ಸೈಟ್ ತನ್ನ ಬಲ್ಲಮೂಲಗಳನ್ನು ಆಧರಿಸಿ, ಡಿಸೆಂಬರ್ 18 ಅಥವಾ 19ರಂದು ದುಬೈನಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ ಎಂದು ವರದಿ ಮಾಡಿದೆ.
ಕಳೆದ ಬಾರಿಯ ಐಪಿಎಲ್ ಆಟಗಾರರ ಹರಾಜು ಇಸ್ತಾಂಬುಲ್‌ನಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿತ್ತು ಎಂದೆಲ್ಲಾ ವರದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಐಪಿಎಲ್ ಆಟಗಾರರ ಹರಾಜು ಕೊಚ್ಚಿಯಲ್ಲಿ ಆಯೋಜನೆಗೊಂಡಿತ್ತು.
ಇನ್ನು ಇದೀಗ 2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಐಪಿಎಲ್ ಗವರ್ನಿಂಗ್ ಕಮಿಟಿಯು ಫ್ರಾಂಚೈಸಿಗಳಿಗೆ ಆಟಗಾರರ ಟ್ರೇಡಿಂಗ್‌ಗೆ ಅವಕಾಶ ಕಲ್ಪಿಸಿದೆಯಾದರೂ, ಇದುವರೆಗೂ ಯಾವ ಫ್ರಾಂಚೈಸಿಯು ಆಟಗಾರರ ಟ್ರೇಡ್ ಮಾಡಿಲ್ಲ.
2024ರಲ್ಲಿ ಲೋಕಸಭಾ ಚುನಾವಣೆ ಇರುವುದರ ಹೊರತಾಗಿಯೂ ಮುಂಬರುವ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸುವುದಾಗಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮುಖ್ಯಸ್ಥ ಅರುಣ್ ಧುಮಾಲ್ ತಿಳಿಸಿದ್ದಾರೆ