Ind vs SL ಅಕ್ಷರ್ ಪಟೇಲ್‌ಗೆ ಕೊನೆಯ ಓವರ್‌ ನೀಡಿದ್ದೇಕೆ..? ನಾಯಕ ಹಾರ್ದಿಕ್ ಪಾಂಡ್ಯ ಅಚ್ಚರಿಯ ಪ್ರತಿಕ್ರಿಯೆ..!

First Published Jan 4, 2023, 3:24 PM IST

ಮುಂಬೈ(ಜ.04): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿನ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ 2 ರನ್‌ ರೋಚಕ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಶ್ರೀಲಂಕಾ ಪಂದ್ಯ ಗೆಲ್ಲಲು ಕೊನೆಯ ಓವರ್‌ನಲ್ಲಿ 13 ರನ್‌ಗಳು ಅಗತ್ಯವಿದ್ದಾಗ ಟೀಂ ಇಂಡಿಯಾ ನಾಯಕ ಹಾರ್ದಿಕ್‌ ಪಾಂಡ್ಯ, ಅಕ್ಷರ್ ಪಟೇಲ್‌ ಕೈಗೆ ಬೌಲಿಂಗ್ ನೀಡಿ ಅಚ್ಚರಿ ಮೂಡಿಸಿದರು. ಪಂದ್ಯ ಮುಕ್ತಾಯದ ಬಳಿಕ ಅಕ್ಷರ್‌ಗೆ ಕೊನೆಯ ಓವರ್‌ ಬೌಲಿಂಗ್ ನೀಡಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
 

ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, 2023ರ ವರ್ಷವನ್ನು ಗೆಲುವಿನೊಂದಿಗೆ ಸ್ವಾಗತಿಸಿದೆ. ಕ್ರಿಕೆಟ್‌ ಅಭಿಮಾನಿಗಳು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 2 ರನ್ ರೋಚಕ ಜಯ ಸಾಧಿಸಿ ಶುಭಾರಂಭ ಮಾಡಿದೆ. 
 

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ದೀಪಕ್ ಹೂಡಾ ಬಾರಿಸಿದ ಅಜೇಯ 41 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. 

ಇನ್ನು ಗುರಿ ಬೆನ್ನತ್ತಿದ ಲಂಕಾ ತಂಡವು, ಶಿವಂ ಮಾವಿ ಹಾಗೂ ಉಮ್ರಾನ್ ಮಲಿಕ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಒಂದು ಹಂತದಲ್ಲಿ ಲಂಕಾ ತಂಡವು 68 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ಇನ್ನು ಇದಾದ ಬಳಿಕ ನಾಯಕ ದಶುನ್ ಶನಕಾ(45), ವನಿಂದು ಹಸರಂಗ(21) ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಕೊನೆಯಲ್ಲಿ ಚಮಿಕಾ ಕರುಣರತ್ನೆ ಚುರುಕಿನ ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಹುಟ್ಟಿಸಿದ್ದರು.
 

ಕೊನೆ ಓವರಲ್ಲಿ ಲಂಕಾ ಗೆಲ್ಲಲು 13 ರನ್‌ ಬೇಕಿತ್ತು. ಮೊದಲ ಎಸೆತವನ್ನು ವೈಡ್‌ ಹಾಕಿದ್ದಲ್ಲದೇ 3ನೇ ಎಸೆತದಲ್ಲಿ ಸಿಕ್ಸರ್‌ ಸಹ ನೀಡಿದ ಅಕ್ಷರ್‌, ಕೊನೆ 3 ಎಸೆತಗಳಲ್ಲಿ ಕೇವಲ 2 ರನ್‌ ನೀಡಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು.
 

ಇನ್ನು ಪಂದ್ಯ ಮುಕ್ತಾಯದ ಬಳಿಕ, ಕೊನೆಯ ಓವರ್‌ ಅನ್ನು ಅಕ್ಷರ್ ಪಟೇಲ್‌ಗೆ ನೀಡಿದ್ದೇಕೆ ಎನ್ನುವ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಉತ್ತರ ನೀಡಿದ್ದು, ನಾವು ಪಂದ್ಯವನ್ನು ಸೋತಿದ್ದರೂ ಅಷ್ಟೇನೂ ಯೋಚಿಸುತ್ತಿರಲಿಲ್ಲ. ಯಾಕೆಂದರೇ ಬೇರೆ ಬೇರೆ ಕ್ಲಿಷ್ಟಕರ ಸನ್ನಿವೇಶವನ್ನು ಹೇಗೆ ಎದುರಿಸಬೇಕು ಎನ್ನುವುದರ ಅರಿವು ಮೂಡಿಸಬೇಕಿತ್ತು. ಯಾಕೆಂದರೇ ಈ ರೀತಿ ಮಾಡುವುದರಿಂದ ದೊಡ್ಡ ಪಂದ್ಯಗಳನ್ನಾಡುವಾಗ ಇದು ನೆರವಿಗೆ ಬರುತ್ತದೆ. 
 

ದ್ವಿಪಕ್ಷೀಯ ಸರಣಿಯಲ್ಲಿ ನಾವು ಚೆನ್ನಾಗಿಯೇ ಆಡುತ್ತಾ ಬಂದಿದ್ದೇವೆ. ನಾವು ನಮ್ಮ ಮೇಲೆ ಸವಾಲುಗಳನ್ನು ಹಾಕಿಕೊಂಡು ಮುನ್ನಡೆಯುತ್ತಿದ್ದೇವೆ. ಆ ಕಾರಣಕ್ಕಾಗಿಯೇ ಕೊನೆಯ ಓವರ್‌ ಅಕ್ಷರ್ ಪಟೇಲ್‌ಗೆ ನೀಡಿದ್ದು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

click me!