ಐಪಿಎಲ್ ಮೆಗಾ ಹರಾಜಿನಲ್ಲಿ ಈ ಬಿಗ್ ಸ್ಟಾರ್ಸ್‌ ಹೆಸರು ನಾಪತ್ತೆ! ಈ ಪಟ್ಟಿಯಲ್ಲಿದ್ದಾರೆ ಏಕೈಕ RCB ಆಟಗಾರ

First Published | Nov 17, 2024, 3:21 PM IST

ಬೆಂಗಳೂರು: 2025ರ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಇದೀಗ ಬಿಸಿಸಿಐ 2025ರ ಐಪಿಎಲ್ ಹರಾಜಿನಲ್ಲಿರುವ ಆಟಗಾರರ ಹೆಸರನ್ನು ಶಾರ್ಟ್‌ ಲಿಸ್ಟ್ ಮಾಡಿದೆ. ಆದರೆ ಈ ಹರಾಜಿನಲ್ಲಿ ಪ್ರಮುಖ ಸ್ಟಾರ್ ಆಟಗಾರರ ಹೆಸರು ಇಲ್ಲದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
 

ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಇದೀಗ 2025ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅಂತಿಮ ಆಟಗಾರರ ಪಟ್ಟಿಯನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಐಪಿಎಲ್ ಮೆಗಾ ಹರಾಜಿಗೆ ಮೊದಲಿಗೆ ಒಟ್ಟು 574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರು.

ಇದೀಗ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇದೇ ನವೆಂಬರ್ 24-25ರಂದು ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಅಂತಿಮವಾಗಿ 574 ಆಟಗಾರರು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಈ ಪೈಕಿ ಗರಿಷ್ಠ 204 ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಲು ಅವಕಾಶವಿದೆ.

Tap to resize

ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ಹಾಗೂ ಮೊಹಮ್ಮದ್ ಶಮಿ ಅವರಂತಹ ಟೀಂ ಇಂಡಿಯಾ ಆಟಗಾರರು ಮರ್ಕ್ಯೂ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದು, ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಮೂಡಿಸಿದ್ದಾರೆ.

ಆದರೆ, ಈ ಬಾರಿಯ ಮೆಗಾ ಹರಾಜಿನಲ್ಲಿ ಕೆಲವು ಸ್ಟಾರ್ ಆಟಗಾರರು ಪಾಲ್ಗೊಳ್ಳದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಯಾವ ಆಟಗಾರರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವುದನ್ನು ನೋಡೋಣ ಬನ್ನಿ.

1. ಬೆನ್ ಸ್ಟೋಕ್ಸ್:

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್‌, 2023ರಲ್ಲಿ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಾಣಿಸಿಕೊಂಡಿದ್ದರು. ಇದಾದ ಬಳಿಕ 2024ರ ಐಪಿಎಲ್‌ನಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್, ಇದೀಗ ಮತ್ತೊಮ್ಮೆ 2025ರ ಐಪಿಎಲ್‌ ಹರಾಜಿನಿಂದಲೂ ಹೊರಗುಳಿದಿದ್ದಾರೆ.

2. ಜೋಫ್ರಾ ಆರ್ಚರ್:

ಇಂಗ್ಲೆಂಡ್ ಮಾರಕ ವೇಗಿ ಜೋಫ್ರಾ ಆರ್ಚರ್ ಕೂಡಾ ಈ ಬಾರಿ ಅಚ್ಚರಿಯ ರೀತಿಯಲ್ಲಿ ಐಪಿಎಲ್ ಹರಾಜಿನಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ. ಪದೇ ಪದೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರ್ಚರ್, ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡವನ್ನು ಕೂಡಿಕೊಂಡಿದ್ದಾರೆ. 2023ರಲ್ಲಿ ಆರ್ಚರ್ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

3. ಕ್ಯಾಮರೋನ್ ಗ್ರೀನ್:

ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಕೂಡಾ ಈ ಬಾರಿಯ ಐಪಿಎಲ್ ಹರಾಜಿನಿಂದ ಹೊರಗುಳಿದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ 6 ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಗ್ರೀನ್ ಹೊರಗುಳಿದಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗ್ರೀನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.

4. ಕ್ರೀಸ್ ವೋಕ್ಸ್:

ಇಂಗ್ಲೆಂಡ್ ಬೌಲಿಂಗ್ ಆಲ್ರೌಂಡರ್ ಕ್ರಿಸ್ ವೋಕ್ಸ್, ಟಿ20 ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಆಟಗಾರ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ವೋಕ್ಸ್‌ ಅವರನ್ನು ಪಂಜಾಬ್ ಕಿಂಗ್ಸ್‌ ತಂಡವು ಖರೀದಿಸಿತ್ತು. ಆದರೆ ವೋಕ್ಸ್ ಪಂಜಾಬ್ ಪರ ಒಂದೇ ಒಂದು ಪಂದ್ಯ ಆಡಿರಲಿಲ್ಲ. ಇದೀಗ ವೋಕ್ಸ್, 2025ರ ಐಪಿಎಲ್‌ಗೆ ತಮ್ಮ ಹೆಸರು ರಿಜಿಸ್ಟರ್ ಮಾಡಿಸಿಲ್ಲ.

5. ಶಿಖರ್ ಧವನ್:

ಗಬ್ಬರ್‌ ಸಿಂಗ್ ಖ್ಯಾತಿಯ ಶಿಖರ್ ಧವನ್‌, ಐಪಿಎಲ್‌ನಲ್ಲಿ ತನ್ನದೇ ಆದ ಹೆಜ್ಜೆಗುರುತನ್ನು ಮೂಡಿಸಿರುವ ಎಡಗೈ ಬ್ಯಾಟರ್. ಕಳೆದ ಆಗಸ್ಟ್‌ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ಈ ಬಾರಿಯ ಹರಾಜಿನಲ್ಲಿ ಧವನ್ ತಮ್ಮ ಹೆಸರನ್ನು ನೋಂದಾಯಿಸಿಲ್ಲ.

Latest Videos

click me!