Pat Cummins: ಮಗುವನ್ನು ಕೈಗಿತ್ತು ಆ ಬಳಿಕ ಹಸೆಮಣೆ ಏರಿದ ಆಸ್ಟ್ರೇಲಿಯಾ ನಾಯಕ..!

First Published | Aug 1, 2022, 5:55 PM IST

ಸಿಡ್ನಿ: ಮದುವೆ ಮಾಡಿಕೊಂಡು ದಾಂಪತ್ಯ ಜೀವನ ನಡೆಸುವುದು ಇಲ್ಲಿಯ ಸಂಪ್ರದಾಯ. ಆದರೆ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ತಮ್ಮ ಬಹುಕಾಲದ ಗೆಳತಿಯೊಂದಿಗೆ ಸಾಕಷ್ಟು ವರ್ಷಗಳಿಂದ ಡೇಟಿಂಗ್‌ ನಡೆಸಿ, ಕೊನೆಗೆ ಕೈಗೊಂದು ಮಗುವನ್ನು ನೀಡಿ, ಇದೀಗ ಮಗುವಿಗೆ ವರ್ಷ ತುಂಬಿದ ಬಳಿಕ ಗೆಳತಿ ಬೆಕೆ ಬೋಸ್ಟನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೊನೆಗೂ ತಮ್ಮ ಬಹುಕಾಲದ ಗೆಳತಿ ಬೆಕೆ ಬೋಸ್ಟನ್‌ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಕುರಿತಂತೆ ಕಮಿನ್ಸ್‌ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಸಂತಸದ ಅಲೆಯಲ್ಲಿ ತೇಲುತ್ತಿರುವಂತೆ ಈ ಜೋಡಿ ಕಂಡು ಬಂದಿದೆ.

ಮದುವೆಯ ಕಾರ್ಯಕ್ರಮದಲ್ಲಿ 29 ವರ್ಷದ ಪ್ಯಾಟ್ ಕಮಿನ್ಸ್‌, ಕಪ್ಪು ಬಣ್ಣದ ಸೂಟ್ ಹಾಗೂ ಬೋಟೈ ಧರಿಸಿದ್ದಾರೆ. ಇನ್ನು ಕಮಿನ್ಸ್‌ ಪತ್ನಿ ಬೆಕೆ ಬೋಸ್ಟನ್‌ ಬಿಳಿ ಬಣ್ಣದ ಗೌನ್ ತೊಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್‌ನ ಚೇಟೂ ಡು ಸೊಲೈಲ್ ಎಂಬಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Tap to resize

ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್‌, ಕಳೆದ ವರ್ಷವಷ್ಟೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದರು. ಟಿಮ್‌ ಪೈನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕಮಿನ್ಸ್‌ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ತಾವು ಹಂಚಿಕೊಂಡಿರುವ ಫೋಟೋದ ಜತೆ ''ಈಗಷ್ಟೇ ಮದುವೆಯಾಗಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.

2013ರಲ್ಲಿ ಪ್ಯಾಟ್ ಕಮಿನ್ಸ್‌ ಹಾಗೂ ಬೆಕೆ ಬೋಸ್ಟನ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಇದಾದ ಬಳಿಕ ಕೆಲ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ 2020ರ ಫೆಬ್ರವರಿಯಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದರು.

ಇದಾದ ಬಳಿಕ ಪ್ಯಾಟ್ ಕಮಿನ್ಸ್‌, 2021ರ ಮೇ ತಿಂಗಳಿನಲ್ಲಿ ತಾವು ಸದ್ಯದಲ್ಲಿಯೇ ತಂದೆಯಾಗುತ್ತಿರುವುದಾಗಿ ಖುಷಿಯನ್ನು ಹಂಚಿಕೊಂಡಿದ್ದರು. ಇದಾಗಿ ಕೆಲವೇ ತಿಂಗಳ ಬಳಿಕ ಅಕ್ಟೋಬರ್‌ನಲ್ಲಿ ಬೆಕೆ ಬೋಸ್ಟನ್‌ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಆಲ್ಬಿ ಬೋಸ್ಟನ್‌ ಕಮಿನ್ಸ್ ಎಂದು ಹೆಸರಿಡಲಾಗಿದೆ. 

ಪ್ಯಾಟ್ ಕಮಿನ್ಸ್‌ ತಾವು ಮದುವೆಯಾಗಿರುವ ವಿಚಾರವನ್ನು ಜಗತ್ತಿಗೆ ಅನಾವರಣ ಮಾಡುತ್ತಿದ್ದಂತೆಯೇ ಡೇವಿಡ್ ವಾರ್ನರ್, ಬ್ರೆಟ್‌ ಲೀ ಸೇರಿದಂತೆ ಹಲವು ಆಸ್ಟ್ರೇಲಿಯಾ ಕ್ರಿಕೆಟಿಗರು ಹಾಗೂ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಇನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಕೂಡಾ ವೇಗದ ಬೌಲರ್‌ಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದೆ. 2019ರಿಂದೀಚೆಗೆ ಐಪಿಎಲ್‌ನಲ್ಲಿ ಪ್ಯಾಟ್‌ ಕಮಿನ್ಸ್‌ ಕೋಲ್ಕತಾ ನೈಟ್ ರೈಡರ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

Latest Videos

click me!