ಟೀಂ ಇಂಡಿಯಾ ಎದುರಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಬಿಗ್ ಶಾಕ್‌; ಮೂವರು ಸ್ಟಾರ್ ಆಟಗಾರರು ಭಾರತ ಪ್ರವಾಸದಿಂದ ಔಟ್..!

First Published Sep 14, 2022, 1:51 PM IST

ಮೆಲ್ಬೊರ್ನ್‌: ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಆಸ್ಟ್ರೇಲಿಯಾ ತಂಡವು, ಭಾರತಕ್ಕೆ ಬಂದಿಳಿಯಲಿದ್ದು, ಇದಕ್ಕೂ ಮುನ್ನವೇ ಕಾಂಗರೂ ಪಡೆಗೆ ಬಿಗ್ ಶಾಕ್ ಎದುರಾಗಿದೆ. ಆಸ್ಟ್ರೇಲಿಯಾ ತಂಡದ ಮೂವರು ಸ್ಟಾರ್ ಕ್ರಿಕೆಟಿಗರು ಭಾರತ ಎದುರಿನ ಚುಟುಕು ಕ್ರಿಕೆಟ್ ಸರಣಿಯಿಂದ ಹೊರಬಿದ್ದಿದ್ದಾರೆ.

ಮುಂಬರುವ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಪೂರ್ವಭಾವಿ ತಯಾರಿಯ ಭಾಗವಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಂಡಿದೆ. 

ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವು, ಚುಟುಕು ವಿಶ್ವಕಪ್ ಟೂರ್ನಿಗೂ ಮುನ್ನ ಅತ್ಯುತ್ತಮ ಆಡುವ ಹನ್ನೊಂದರ ಬಳಗ ಪಕ್ಕಾ ಮಾಡಿಕೊಳ್ಳಲು ಭಾರತ ಎದುರಿನ ಸರಣಿಯನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿತ್ತು.

ಆದರೆ ಇದೀಗ ಸೆಪ್ಟೆಂಬರ್ 20ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಗೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಟಗಾರರಾದ ಮಿಚೆಲ್ ಸ್ಟಾರ್ಕ್‌, ಮಿಚೆಲ್ ಮಾರ್ಶ್‌ ಹಾಗೂ ಮಾರ್ಕಸ್ ಸ್ಟೋನಿಸ್‌ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿಕೊಂಡ ತಂಡವನ್ನೇ, ಭಾರತ ಎದುರಿನ ಸರಣಿಗೂ ಆಯ್ಕೆ ಮಾಡಿಕೊಂಡಿತ್ತು. ಆದರೆ ಇದೀಗ ಆಸೀಸ್‌ನ ಮೂವರು ತಾರಾ ಆಟಗಾರರು ಫಿಟ್ನೆಸ್ ಸಮಸ್ಯೆಯಿಂದ ಹೊರಬಿದ್ದಿದ್ದಾರೆ.

ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್‌, ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆಲ್ರೌಂಡರ್‌ ಮಿಚೆಲ್ ಮಾರ್ಶ್‌ ಪಾದದ ಗಾಯದ ಸಮಸ್ಯೆ ಹಾಗೂ ಮಾರ್ಕಸ್ ಸ್ಟೋನಿಸ್ ಸೈಡ್ ಸ್ಟ್ರೈನ್‌ ನೋವಿನಿಂದ ಬಳಲುತ್ತಿದ್ದಾರೆ.

ಈ ಮೂವರು ಆಟಗಾರರ ಬದಲಿಗೆ ವೇಗಿ ನೇಥನ್ ಎಲ್ಲೀಸ್, ಆಲ್ರೌಂಡರ್‌ಗಳಾದ ಡೇನಿಯಲ್ ಸ್ಯಾಮ್ಸ್‌ ಹಾಗೂ ಶಾನ್ ಅಬ್ಬೋಟ್ ಅವರನ್ನು ಭಾರತ ಎದುರಿನ ಸರಣಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ಭಾರತ ಎದುರಿನ ಸರಣಿಯಿಂದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಹೊರಗುಳಿದಿದ್ದರು. ಇದೀಗ ಸ್ಟಾರ್ಕ್, ಸ್ಟೋನಿಸ್ ಹಾಗೂ ಮಾರ್ಶ್‌ ಕೂಡಾ ತಂಡದಿಂದ ಹೊರಗುಳಿದಿದ್ದು, ಕಾಂಗರೂಗಳ ಪಡೆಗೆ ದೊಡ್ಡ ಹಿನ್ನಡೆಯನ್ನುಂಟಾಗುವ ಸಾಧ್ಯತೆಯಿದೆ. 

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಸೆಪ್ಟೆಂಬರ್ 23ಕ್ಕೆ ನಾಗ್ಪುರ, ಸೆಪ್ಟೆಂಬರ್ 25ಕ್ಕೆ ಹೈದರಾಬಾದ್‌ನಲ್ಲಿ ಪಂದ್ಯ ನಡೆಯಲಿವೆ.

ಭಾರತ ಪ್ರವಾಸಕ್ಕೆ ಪರಿಷ್ಕೃತ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹೀಗಿದೆ ನೋಡಿ

ಆ್ಯರೋನ್ ಫಿಂಚ್(ನಾಯಕ), ಜೋಶ್ ಇಂಗ್ಲಿಶ್, ಸ್ಟೀವ್ ಸ್ಮಿತ್, ಆಸ್ಟನ್ ಏಗರ್, ಶಾನ್ ಅಬ್ಬೋಟ್, ಟಿಮ್ ಡೇವಿಡ್, ಪ್ಯಾಟ್ ಕಮಿನ್ಸ್‌, ನೇಥನ್ ಎಲ್ಲೀಸ್, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್‌, ಮ್ಯಾಥ್ಯೂ ವೇಡ್, ಆಡಂ ಜಂಪಾ.

click me!