Ashes Test: ನಾಲ್ಕನೇ ದಿನದಾಟದಲ್ಲಿ ಅಪರೂಪದ ದಾಖಲೆ ಬರೆದ ರೂಟ್‌, ಲಯನ್..!

First Published Dec 11, 2021, 1:31 PM IST

ಬೆಂಗಳೂರು: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್‌ ಸರಣಿಯ (Ashes Test Series) ಮೊದಲ ಟೆಸ್ಟ್‌ ಪಂದ್ಯವು ನಾಲ್ಕೇ ದಿನಕ್ಕೆ ಮುಕ್ತಾಯವಾಗಿದ್ದು, ಆತಿಥೇಯ ಆಸ್ಟ್ರೇಲಿಯಾ ತಂಡವು (Australia Cricket Team) 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಯನ್‌ (Nathan Lyon), ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌ (Joe Root) ಹಾಗೂ ಆಸ್ಟ್ರೇಲಿಯಾದ ನೂತನ ಟೆಸ್ಟ್‌ ನಾಯಕ ಪ್ಯಾಟ್‌ ಕಮಿನ್ಸ್‌ (Pat Cummins) ಅಪರೂಪದ ದಾಖಲೆ ನಿರ್ಮಿಸಿದೆ. ಅಷ್ಟಕ್ಕೂ ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.

2021-22ನೇ ಸಾಲಿನ ಆ್ಯಷಸ್‌ ಸರಣಿಯ ಮೊದಲ ಪಂದ್ಯಕ್ಕೆ ಬ್ರಿಸ್ಬೇನ್‌ನ ಗಾಬಾ ಮೈದಾನ ಆತಿಥ್ಯವನ್ನು ವಹಿಸಿತ್ತು. ಆಲ್ರೌಂಡ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.
 

ಆ್ಯಷಸ್‌ ಸರಣಿಯ ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಅನುಭವಿ ಆಫ್‌ ಸ್ಪಿನ್ನರ್‌ ನೇಥನ್ ಲಯನ್‌, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ತಂಡದ ನೂತನ ನಾಯಕ ಪ್ಯಾಟ್ ಕಮಿನ್ಸ್‌ ಅಪರೂಪದ ದಾಖಲೆ ಬರೆದಿದ್ದಾರೆ.

400 ವಿಕೆಟ್‌ಗಳ ಕ್ಲಬ್‌ ಸೇರಿದ ನೇಥನ್ ಲಯನ್‌: ಆಸೀಸ್ ಅನುಭವಿ ಸ್ಪಿನ್ನರ್ ನೇಥನ್ ಲಯನ್‌ ಎರಡನೇ ಇನಿಂಗ್ಸ್‌ನ ನಾಲ್ಕನೇ ದಿನದಾಟದಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.

ಇದಷ್ಟೇ ಅಲ್ಲದೇ ಡೇವಿಡ್ ಮಲಾನ್ ಅವರ ವಿಕೆಟ್‌ ಕಬಳಿಸುವ ಮೂಲಕ ಶೇನ್‌ ವಾರ್ನ್‌, ಗ್ಲೆನ್ ಮೆಗ್ರಾತ್ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಕಬಳಿಸಿದ ಆಸ್ಟ್ರೇಲಿಯಾದ ಮೂರನೇ ಹಾಗೂ ಒಟ್ಟಾರೆ 17ನೇ ಬೌಲರ್‌ ಎನ್ನುವ ಕೀರ್ತಿಗೆ ನೇಥನ್ ಲಯನ್ ಭಾಜನರಾದರು.

ಇದಷ್ಟೇ ಅಲ್ಲದೇ ಮುತ್ತಯ್ಯ ಮುರುಳೀಧರನ್‌(800), ರವಿಚಂದ್ರನ್ ಅಶ್ವಿನ್(427), ಹರ್ಭಜನ್ ಸಿಂಗ್(417) ಬಳಿಕ ಅತಿಹೆಚ್ಚು ಟೆಸ್ಟ್‌ ವಿಕೆಟ್‌ ಕಬಳಿಸಿದ ನಾಲ್ಕನೇ ಆಫ್‌ ಸ್ಪಿನ್ನರ್ ಎನ್ನುವ ಕೀರ್ತಿಗೂ ಲಯನ್ ಭಾಜನರಾಗಿದ್ದಾರೆ.

ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ಜೋ ರೂಟ್

ಗಾಬಾ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲಿನ ಭೀತಿಗೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದು, ಜೋ ರೂಟ್ ಹಾಗೂ ಡೇವಿಡ್ ಮಲಾನ್ ಜೋಡಿಯ ಜತೆಯಾಟ. ಮಲಾನ್ ಜತೆಗೂಡಿ ರೂಟ್ ಎರಡನೇ ಇನಿಂಗ್ಸ್‌ನಲ್ಲಿ 162 ರನ್‌ಗಳ ಜತೆಯಾಟವಾಡಿತು. 
 

ಟೆಸ್ಟ್‌ ವೃತ್ತಿ ಜೀವನದ ಉನ್ನತ ಫಾರ್ಮ್‌ನಲ್ಲಿರುವ ಜೋ ರೂಟ್ 2021ರ ಕ್ಯಾಲೆಂಡರ್‌ ವರ್ಷದಲ್ಲಿ ಇದುವರೆಗೂ 1,544 ರನ್ ಬಾರಿಸಿದ್ದು, ವರ್ಷವೊಂದರಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜತೆ ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
 

ಇನ್ನು ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ರೇಮ್ ಸ್ಮಿತ್ ಹೆಸರಿನಲ್ಲಿದೆ. ಸ್ಮಿತ್ ವರ್ಷವೊಂದರಲ್ಲಿ 1,656 ರನ್ ಬಾರಿಸಿದ್ದರು. ಇನ್ನು ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಕ್ಯಾಲೆಂಡರ್ ವರ್ಷದಲ್ಲಿ 1,595 ರನ್ ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. 

ಆಸ್ಟ್ರೇಲಿಯಾದ ವಿಕೆಟ್‌ ಕೀಪರ್ ಅಲೆಕ್ಸ್‌ ಕ್ಯಾರಿ ಒಟ್ಟು 8 ಬಲಿ ಪಡೆಯುವ ಮೂಲಕ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಅತಿಹೆಚ್ಚು ಬಲಿ ಪಡೆದ ವಿಕೆಟ್‌ ಕೀಪರ್‌ಗಳ ಪಟ್ಟಿಯಲ್ಲಿ ಬ್ರಿಯಾನ್ ಟೇಬರ್ ಹಾಗೂ ಕ್ರಿಸ್ ರೀಡ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಬ್ರಿಸ್ಬೇನ್ ಟೆಸ್ಟ್‌ ಪಂದ್ಯದ ಮೂಲಕ ಮೊದಲ ಬಾರಿಗೆ ಟೆಸ್ಟ್ ತಂಡದ ನಾಯಕ ಹುದ್ದೆ ಅಲಂಕರಿಸಿರುವ ಪ್ಯಾಟ್ ಕಮಿನ್ಸ್‌ 89 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ಟೆಸ್ಟ್‌ ತಂಡದ ನಾಯಕನಾಗಿ ಮೊದಲ ಪಂದ್ಯದಲ್ಲೇ ಅತ್ತುತ್ತಮ ಬೌಲಿಂಗ್ ಪ್ರದರ್ಶನ ತೋರಿದ ದಾಖಲೆ ಇದೀಗ ಕಮಿನ್ಸ್ ಪಾಲಾಗಿದೆ. ಈ ಮೊದಲು ಬ್ರಿಸ್ಬೇನ್‌ನಲ್ಲೇ ಆಸ್ಟ್ರೇಲಿಯಾದ ಬಿನೌಡ್‌ 112 ರನ್‌ ನೀಡಿ 7  ವಿಕೆಟ್‌ ಕಬಳಿಸಿದ್ದರು.
 

click me!