IPL Auction 2022: ಈ ಐದು ಆರಂಭಿಕರು ಮೆಗಾ ಹರಾಜಿನಲ್ಲಿ ಕೋಟಿ-ಕೋಟಿ ಬಾಚಿಕೊಳ್ಳಬಹುದು..!

First Published Dec 9, 2021, 4:14 PM IST

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) 14 ಯಶಸ್ವಿ ಆವೃತ್ತಿಗಳನ್ನು ಪೂರೈಸಿದ್ದು, ಇದೀಗ 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಗೆ ಭರದಿಂದ ಸಿದ್ದತೆಗಳು ಆರಂಭವಾಗಿವೆ. ಈಗಾಗಲೇ ಕೆಲವು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದು, ಉಳಿದವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿನಲ್ಲಿ (IPL Mega Auction) ಈ ಐವರು ಆಟಗಾರರು ದುಬಾರಿ ಮೊತ್ತಕ್ಕೆ ಬೇರೆ ತಂಡಗಳನ್ನು ಕೂಡಿಕೊಳ್ಳಬಹುದು. ಅಷ್ಟಕ್ಕೂ ಯಾರು ಐವರು ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

1. ಕೆ.ಎಲ್ ರಾಹುಲ್‌

ಕರ್ನಾಟಕ ಮೂಲದ ವಿಸ್ಪೋಟಕ ಬ್ಯಾಟರ್‌ ಕೆ.ಎಲ್‌. ರಾಹುಲ್‌ ಚುಟುಕು ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಈಗಾಗಲೇ ಯಶಸ್ವಿಯಾಗಿದ್ದಾರೆ. 2022ರ ಐಪಿಎಲ್‌ಗೂ ಮುನ್ನ ರಾಹುಲ್, ಪಂಜಾಬ್ ಕಿಂಗ್ಸ್‌ ತಂಡದಿಂದ ಹೊರಬಂದಿದ್ದು, ಹರಾಜಿಗೆ ಲಭ್ಯರಾಗಿದ್ದಾರೆ.

(photo Source- Google)

ರಾಹುಲ್‌ ಕಳೆದೆರಡು ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್‌ ಒರ 670 ಹಾಗೂ 626 ರನ್‌ ಸಿಡಿಸಿ ಮಿಂಚಿದ್ದಾರೆ. ಬ್ಯಾಟರ್‌ ಜತೆಗೆ ವಿಕೆಟ್ ಕೀಪರ್ ಆಗಿಯೂ ಸೈ ಎನಿಸಿಕೊಂಡಿರುವ ರಾಹುಲ್ ಅವರನ್ನು ಈ ಬಾರಿ ಹಲವು ಫ್ರಾಂಚೈಸಿಗಳು ದುಬಾರಿ ಮೊತ್ತ ನೀಡಿ ತಮ್ಮ ಕಡೆ ಸೆಳೆದುಕೊಳ್ಳಲು ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ.

2. ಡೇವಿಡ್ ವಾರ್ನರ್

ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ಡೇವಿಡ್ ವಾರ್ನರ್ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ಈ ಬಾರಿ ರೀಟೈನ್ ಮಾಡಿಕೊಂಡಿಲ್ಲ. ಹೀಗಾಗಿ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್‌ ಈ ಬಾರಿಯ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
 

ಡೇವಿಡ್ ವಾರ್ನರ್‌ 2015, 2017 ಹಾಗೂ 2019ರಲ್ಲಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ನಾಯಕನಾಗಿಯೂ ಸೈ ಎನಿಸಿಕೊಂಡಿರುವ ವಾರ್ನರ್‌ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ.

3. ದೇವದತ್ ಪಡಿಕ್ಕಲ್‌

ಕರ್ನಾಟಕ ಮೂಲದ ಪ್ರತಿಭಾನ್ವಿತ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ 2020ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಪರ ಮಿಂಚಿನ ಪ್ರದರ್ಶನ ತೋರುವ ಮೂಲಕ ಉದಯೋನ್ಮಖ ಕ್ರಿಕೆಟಿಗನಾಗಿ ಟೂರ್ನಿಯಲ್ಲಿ ಹೊರಹೊಮ್ಮಿದ್ದರು.

ಚೊಚ್ಚಲ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲೇ(2019) 15 ಪಂದ್ಯಗಳನ್ನಾಡಿ 473 ರನ್ ಬಾರಿಸಿದ್ದರು. ಇನ್ನು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 1 ಶತಕ ಸಹಿತ 411 ರನ್‌ ಬಾರಿಸಿ ಮಿಂಚಿದ್ದಾರೆ. ಹೀಗಾಗಿ ಪಡಿಕ್ಕಲ್‌ ಅವರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ.
 

4. ಶಿಖರ್ ಧವನ್‌

ಟೀಂ ಇಂಡಿಯಾ ಅನುಭವಿ ಬ್ಯಾಟರ್‌ ಶಿಖರ್‌ ಧವನ್‌, ಡೆಲ್ಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್‌, ಡೆಕ್ಕನ್ ಚಾರ್ಜರ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ.
 

ಶಿಖರ್ ಧವನ್‌ 192 ಪಂದ್ಯಗಳಿಂದ 5,784 ರನ್‌ ಬಾರಿಸಿದ್ದಾರೆ. ಇನ್ನು ಕಳೆದೆರಡು ಅವೃತ್ತಿಯಲ್ಲಿ ಧವನ್‌ ಕ್ರಮವಾಗಿ 618 ಹಾಗೂ 587 ರನ್ ಸಿಡಿಸಿದ್ದಾರೆ. ಆರಂಭಿಕನಾಗಿ ಉತ್ತಮ ಫಾರ್ಮ್‌ನಲ್ಲಿರುವ ಶಿಖರ್ ಧವನ್‌ ಅವರನ್ನು ಹರಾಜಿನಲ್ಲಿ ಫ್ರಾಂಚೈಸಿಗಳು ದುಬಾರಿ ಮೊತ್ತ ನೀಡಿ ಖರೀದಿಸುವ ಸಾಧ್ಯತೆಯಿದೆ.

5. ಕ್ವಿಂಟನ್ ಡಿ ಕಾಕ್

ದಕ್ಷಿಣ ಆಫ್ರಿಕಾ ಮೂಲದ ವಿಕೆಟ್ ಕೀಪರ್‌ ಬ್ಯಾಟರ್‌ ಕ್ವಿಂಟನ್ ಡಿ ಕಾಕ್‌ 2013ರಿಂದ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈ ಬಾರಿ ಡಿ ಕಾಕ್ ಅವರನ್ನು ರೀಟೈನ್‌ ಮಾಡಿಕೊಂಡಿಲ್ಲ.

77 ಐಪಿಎಲ್‌ ಪಂದ್ಯಗಳಿಂದ ಡಿ ಕಾಕ್‌ 2,256 ರನ್ ಬಾರಿಸಿದ್ದು, ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಡಿ ಕಾಕ್‌ ಅವರನ್ನು ಫ್ರಾಂಚೈಸಿಗಳು ಪೈಪೋಟಿ ಮೇಲೆ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಸಾಧ್ಯತೆಯಿದೆ.

click me!