IPL 2021: RCB ತಂಡ ಕೂಡಿಕೊಂಡ ಬೆಂಕಿ-ಬಿರುಗಾಳಿ..! ಈ ಸಲಾ ಕಪ್‌ ನಮ್ದೇ ನಾ..?

First Published Sep 11, 2021, 2:27 PM IST

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿಧಾನವಾಗಿ ಐಪಿಎಲ್‌ ಜ್ವರ ಕಾವೇರ ತೊಡಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಮಿಂಚಿನ ಸಂಚಲನ ಶುರುವಾಗಿದೆ. ಈಗಾಗಲೇ ಆರ್‌ಸಿಬಿ ಪಾಲಿನ ಆಪತ್ಭಾಂಧವ ಎಬಿ ಡಿವಿಲಿಯರ್ಸ್‌ ದುಬೈಗೆ ಬಂದಿಳಿದಿದ್ದಾರೆ. ಇದರ ಬೆನ್ನಲ್ಲೇ ಮತ್ತಿಬ್ಬರು ತಾರಾ ವಿದೇಶಿ ಆಟಗಾರ ಎಂಟ್ರಿಯಾಗಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಅರ್ಧ ಭಾಗ ಯಶಸ್ವಿಯಾಗಿ ಜರುಗಿತ್ತು. ಇದಾದ ಬಳಿಕ ಐಪಿಎಲ್‌ ಮೇಲೆ ಕೋವಿಡ್ ತನ್ನ ವಕ್ರದೃಷ್ಟಿ ಬೀರಿದ್ದರಿಂದ ಮೇ 04ರಂದು ಬಿಸಿಸಿಐ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.

ಇದೀಗ ಐಪಿಎಲ್‌ನ ಇನ್ನುಳಿದ 31 ಪಂದ್ಯಗಳನ್ನು ಯುಎಇನಲ್ಲಿ ನಡೆಯಲು ಬಿಸಿಸಿಐ ತೀರ್ಮಾನಿಸಿದ್ದು, ಸೆಪ್ಟೆಂಬರ್ 19ರಿಂದ ಪಂದ್ಯಾವಳಿಗಳು ಆರಂಭವಾಗಲಿವೆ. ಈ ಚುಟುಕು ಕ್ರಿಕೆಟ್ ಸಂಗ್ರಾಮ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಕಳೆದ 13 ಆವೃತ್ತಿಗಳ ಪೈಕಿ ಮೂರು ಬಾರಿ ಫೈನಲ್‌ ಪ್ರವೇಶಿಸಿದ್ದರೂ ಕಪ್‌ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 14ನೇ ಆವೃತ್ತಿಯಲ್ಲಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿದು ಭರ್ಜರಿ ಪ್ರದರ್ಶನ ತೋರುವುದರೊಂದಿಗೆ ಚೊಚ್ಚಲ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದೆ.
 

ಭಾರತದಲ್ಲಿ ನಡೆದ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದು, ಪ್ಲೇ ಆಫ್‌ಗೇರಬಲ್ಲ ನೆಚ್ಚಿನ ತಂಡಗಳಲ್ಲಿ ಆರ್‌ಸಿಬಿ ಕೂಡಾ ಒಂದು ಎನಿಸಿದೆ.

ಯುಎಇ ಚರಣದ ಐಪಿಎಲ್‌ ಪಂದ್ಯಾವಳಿಗಳು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಆರ್‌ಸಿಬಿಯ ಸೂಪರ್ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ದುಬೈಗೆ ಬಂದಿಳಿದಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಇದೀಗ ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರಗಳಾದ ಸ್ಟಾರ್ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಹಾಗೂ ನೀಳಕಾಯದ ವೇಗಿ ಕೈಲ್ ಜೇಮಿಸನ್‌ ಕೂಡಾ ದುಬೈಗೆ ಬಂದಿಳಿದ್ದು, ಐಪಿಎಲ್‌ನಲ್ಲಿ ಆರ್‌ಸಿಬಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ. 

ಭಾರತದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಗ್ಲೆನ್‌ ಮ್ಯಾಕ್ಸ್‌ವೆಲ್‌ 7 ಪಂದ್ಯಗಳ 6 ಇನಿಂಗ್ಸ್‌ಗಳನ್ನಾಡಿ 2 ಅರ್ಧಶತಕ ಸಹಿತ 223 ರನ್‌ ಬಾರಿಸಿ, ಆರ್‌ಸಿಬಿ ಪರ ಗರಿಷ್ಠ ರನ್‌ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಇದೀಗ ಯುಎಇ ನೆಲದಲ್ಲೂ ಮ್ಯಾಕ್ಸಿ ಮಿಂಚುವ ಮುನ್ಸೂಚನೆ ನೀಡಿದ್ದಾರೆ.

ಇನ್ನು ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್‌ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಆರ್‌ಸಿಬಿ ತಂಡದ ಟ್ರಂಪ್‌ ಕಾರ್ಡ್‌ ಬೌಲರ್ ಆಗಿ ಗುರುತಿಸಿಕೊಂಡಿದ್ದು, 7 ಪಂದ್ಯಗಳನ್ನಾಡಿ 9 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಆರ್‌ಸಿಬಿ ಜೇಮಿಸನ್‌ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

ಒಟ್ಟಿನಲ್ಲಿ ಎಬಿಡಿ, ಮ್ಯಾಕ್ಸ್‌ವೆಲ್‌ ಹಾಗೂ ಜೇಮಿಸನ್‌ ಆರ್‌ಸಿಬಿ ಪರ ಅಬ್ಬರಿಸಲು ಸಿದ್ದತೆ ನಡೆಸುತ್ತಿದ್ದಾರೆ. ಇದರ ಜತೆಗೆ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಪಡಿಕ್ಕಲ್‌ ಹಾಗೂ ಹರ್ಷಲ್‌ ಪಟೇಲ್ ಕೂಡಾ ಮಿಂಚಿದರೆ ಈ ಸಲ ಕಪ್‌ ಬೆಂಗಳೂರು ಪಾಲಾಗುವುದರಲ್ಲಿ ಎರಡು ಮಾತಿಲ್ಲ. 

click me!