ದಶಕಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಭಾಂದವರೆನಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್ ದಿಢೀರ್ ಎನ್ನುವಂತೆ ನವೆಂಬರ್ 19ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
37 ವರ್ಷದ ಎಬಿ ಡಿವಿಲಿಯರ್ಸ್ ಇನ್ನುಳಿಯುವ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುವ ಉದ್ದೇಶದಿಂದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಮಿಸ್ಟರ್ 360 ಖ್ಯಾತಿಯ ಎಬಿಡಿ ಟ್ವೀಟ್ ಮೂಲಕ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ನಾನು ಆರ್‌ಸಿಬಿ ಕಳೆದ ಹಲವು ವರ್ಷಗಳು ಅತ್ಯಂತ ಖುಷಿ ಹಾಗೂ ಫಲಪ್ರದವಾಗಿದ್ದವು. 11 ವರ್ಷಗಳ ಒಡನಾಟದ ಬಳಿಕ ತಂಡವನ್ನು ತೊರೆಯುತ್ತಿರುವುದು ಒಂದು ರೀತಿಯ ಸಿಹಿಸಂಕಟವಾದಂತೆ ಆಗುತ್ತಿದೆ ಎಂದು ಬೆಂಗಳೂರು ತಂಡದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಾಕಷ್ಟು ದೀರ್ಘಕಾಲ ಯೋಚಿಸಿದ ಬಳಕವೇ ನಾನು ಕ್ರಿಕೆಟ್‌ನಿಂದ ಹಿಂದೆ ಸರಿಯುವ ತೀರ್ಮಾನವನ್ನು ತೆಗೆದುಕೊಂಡಿದ್ದೇನೆ. ನನ್ನ ಕುಟುಂಬದೊಟ್ಟಿಗೆ ಅಮೂಲ್ಯ ಕ್ಷಣಗಳನ್ನು ಕಳೆಯುವ ಉದ್ದೇಶದಿಂದ ಈ ಕಠಿಣ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ಧಾರೆ.
ನಿರಂತವಾಗಿ ಬೆಂಬಲಿಸಿಕೊಂಡು ಬಂದ ಆರ್‌ಸಿಬಿ ಅಭಿಮಾನಿಗಳಿಗೆ, ನಾಯಕರಾಗಿದ್ದ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಆಡಳಿತ ಮಂಡಳಿಗೆ ಇದೇ ವೇಳೆ ಎಬಿಡಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇಡೀ ಆರ್‌ಸಿಬಿ ಕುಟುಂಬ ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನೆಂದಿಗೂ ಋಣಿಯಾಗಿರುತ್ತೇನೆ. ಆರ್‌ಸಿಬಿ ಜತೆಗೆ ನನ್ನದು ನೂರಾರು ಸ್ಮರಣೀಯ ಕ್ಷಣಗಳಿದ್ದು, ಆ ಪ್ರತಿ ಕ್ಷಣಗಳನ್ನು ಜೀವನಪರ್ಯಂತ ಮೆಲುಕು ಹಾಕುವುದಾಗಿ ಹೇಳಿದ್ದಾರೆ.
Ab De Villiers
ಆರ್‌ಸಿಬಿ ಎಂದೆಂದಿಗೂ ನನ್ನ ಹೃದಯಕ್ಕೆ ಹತ್ತಿರವಾದ ತಂಡವಾಗಿದೆ. ನಾನು ಹಾಗೂ ನನ್ನ ಕುಟುಂಬ ಮುಂದೆಯೂ ಸಹ ಆರ್‌ಸಿಬಿಯನ್ನು ಸಪೋರ್ಟ್ ಮಾಡುತ್ತೇವೆ. ನಾನು ಎಂದೆಂದಿಗೂ ಆರ್‌ಸಿಬಿಗನಾಗಿಯೇ ಇರುತ್ತೇನೆ ಎಂದು ಎಬಿಡಿ ಹೇಳಿದ್ದಾರೆ.
ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ 184 ಪಂದ್ಯಗಳನ್ನಾಡಿ 39.70 ಬ್ಯಾಟಿಂಗ್ ಸರಾಸರಿಯಲ್ಲಿ 5,162 ರನ್ ಸಿಡಿಸಿದ್ದಾರೆ. ಅಲ್ಲದೇ ಆರ್‌ಸಿಬಿ ಪರ ಹಲವಾರು ಪಂದ್ಯಗಳನ್ನು ಏಕಾಂಗಿಯಾಗಿಯೇ ಗೆಲ್ಲಿಸಿ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ.