IPL 2022: ರಾಯಲ್ಸ್‌ ಎದುರು ಆರ್‌ಸಿಬಿ ಸೋತಿದ್ದೆಲ್ಲಿ? ಇಲ್ಲಿವೆ 3 ಕಾರಣಗಳು..!

First Published May 28, 2022, 2:30 PM IST

ಬೆಂಗಳೂರು: ಫಾಫ್ ಡು ಪ್ಲೆಸಿಸ್‌ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಮತ್ತೊಮ್ಮೆ ನುಚ್ಚುನೂರಾಗಿದೆ. 15ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಎದುರು ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಐಪಿಎಲ್‌ ಫೈನಲ್‌ಗೆ (IPL Final 2022) ಲಗ್ಗೆಯಿಟ್ಟಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದ್ದ ಆರ್‌ಸಿಬಿ ತಂಡವು ಈ ಬಾರಿ ಪ್ಲೇ ಆಫ್‌ನಲ್ಲಿ ಮುಗ್ಗರಿಸಿದ್ದು ಹೇಗೆ..? ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳೇನು ಎನ್ನುವುದನ್ನು ವಿಶ್ಲೇಷಿಸುವುದಾದರೇ...

Image credit: PTI

1. ಆರ್‌ಸಿಬಿಗೆ ಮಾರಕವಾದ ಜೋಸ್ ಬಟ್ಲರ್ ಇನಿಂಗ್ಸ್:

ರಾಜಸ್ಥಾನ ರಾಯಲ್ಸ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳು ದಯನೀಯ ವೈಫಲ್ಯ ಅನುಭವಿಸಿದರು. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಬಟ್ಲರ್, ಟೂರ್ನಿಯಲ್ಲಿ 4ನೇ ಶತಕ ಸಿಡಿಸುವ ಮೂಲಕ ಆರ್‌ಸಿಬಿ ಪಾಲಿಗೆ ವಿಲನ್ ಆಗಿ ಪರಿಣಮಿಸಿದರು.

Image credit: PTI

ಐಪಿಎಲ್‌ನ ದ್ವಿತಿಯಾರ್ಧದಲ್ಲಿ ಕೊಂಚ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಬಟ್ಲರ್, ಅರ್‌ಸಿಬಿ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೇವಲ 60 ಎಸೆತಗಳಲ್ಲಿ 106 ರನ್ ಸಿಡಿಸಿ ಆರ್‌ಸಿಬಿ ಸೋಲಿಗೆ ಕಾರಣರಾದರು. ಒಂದು ವೇಳೆ ಬಟ್ಲರ್ ಅವರನ್ನು ಆರಂಭದಲ್ಲೇ ಕಟ್ಟಿಹಾಕಿದ್ದರೆ, ಫಲಿತಾಂಶ ಬೇರೆಯದ್ದೇ ಆಗುತ್ತಿತ್ತೇನೋ

Latest Videos


2. ನಿರ್ಣಾಯಕ ಘಟ್ಟದಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಂಡ ಆರ್‌ಸಿಬಿ

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಆರಂಭದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ರಜತ್ ಪಾಟೀದಾರ್ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು. ಆದರೆ ಇನಿಂಗ್ಸ್‌ನ ಕೊನೆಯಲ್ಲಿ ಆರ್‌ಸಿಬಿ ನಿರಂತರ ವಿಕೆಟ್ ಕಳೆದುಕೊಂಡ ಪರಿಣಾಮ ದೊಡ್ಡ ಮೊತ್ತ ಗಳಿಸಲು ಆರ್‌ಸಿಬಿಗೆ ಸಾಧ್ಯವಾಗಲಿಲ್ಲ.

ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಪತನದ ಬೆನ್ನಲ್ಲೇ ಆರ್‌ಸಿಬಿ ತಂಡವು ನಾಟಕೀಯ ಕುಸಿತ ಕಂಡಿತು. 17ನೇ ಓವರ್‌ನಲ್ಲಿ ಆರ್‌ಸಿಬಿ ಒಂದು ವಿಕೆಟ್ ಕಳೆದುಕೊಂಡು 7 ರನ್ ಗಳಿಸಿತು. 18ನೇ ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು ಕೇವಲ 8 ರನ್ ಗಳಿಸಿತು. ಇನ್ನು 20ನೇ ಓವರ್‌ನಲ್ಲಿ ಆರ್‌ಸಿಬಿ ಗಳಿಸಿದ್ದು ಕೇವಲ 3 ರನ್ ಮಾತ್ರ. ಕೊನೆಯ 3 ಓವರ್‌ನಲ್ಲಿ ಆರ್‌ಸಿಬಿ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರೆ, ಬೆಂಗಳೂರು ತಂಡವು ಬೃಹತ್ ಕಲೆಹಾಕಲು ಸಾಧ್ಯವಾಗುತ್ತಿತ್ತು. ಆರ್‌ಸಿಬಿ ಡೆತ್‌ ಓವರ್‌ನಲ್ಲಿ ರನ್‌ ಗಳಿಸದೇ ಹೋದದ್ದು ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು.
 

3. ಮಹತ್ವದ ಪಂದ್ಯದಲ್ಲಿ ಆರ್‌ಸಿಬಿಯ ಬಿಗ್ 3 ಬ್ಯಾಟರ್‌ಗಳು ಫೇಲ್..!

ಆರ್‌ಸಿಬಿ ಪಾಲಿಗೆ ಫೈನಲ್‌ ಪ್ರವೇಶಿಸಲು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದ್ದ ಪಂದ್ಯದಲ್ಲಿ ತಂಡದ ತಾರಾ ಮೂವರು ಬ್ಯಾಟರ್‌ಗಳು ಕೈಕೊಟ್ಟಿದ್ದು ತಂಡದ ಸೋಲಿಗೆ ಕಾರಣವೆನಿಸಿತು. ಅರ್‌ಸಿಬಿ ಬ್ಯಾಟಿಂಗ್‌ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿತ್ತು.

ವಿರಾಟ್ ಕೊಹ್ಲಿ ಒಂದಂಕಿ ಮೊತ್ತಕ್ಕೆ (7) ವಿಕೆಟ್ ಒಪ್ಪಿಸಿದರೆ, ನಾಯಕ ಫಾಫ್ ಡು ಪ್ಲೆಸಿಸ್ 25 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 24 ರನ್‌ ಗಳಿಸಿ ವಿಕೆಟ್ ಕೈಚೆಲ್ಲಿದರು. ಈ ಮೂವರು ಬ್ಯಾಟರ್‌ಗಳ ಪೈಕಿ ಒಬ್ಬ ಬ್ಯಾಟರ್‌ ದೊಡ್ಡ ಮೊತ್ತ ಕಲೆಹಾಕಿದ್ದರೆ, ಬಹುಶಃ ಆರ್‌ಸಿಬಿ ನಾಲ್ಕನೇ ಬಾರಿಗೆ ಐಪಿಎಲ್‌ ಫೈನಲ್‌ಗೇರುವ ಸಾಧ್ಯತೆ ಮತ್ತಷ್ಟು ಹೆಚ್ಚಾಗುತ್ತಿತ್ತು.

click me!