ಪುಷ್ಪ 2 ಪ್ರೀಮಿಯರ್ ಶೋ ವೇಳೆ ಸಂಧ್ಯ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಘಟನೆ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಲ್ಲು ಅರ್ಜುನ್‌ರನ್ನ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದರ ಬೆನ್ನಲ್ಲಿಯೇ ಹೈದರಾಬಾದ್ ಸಿಪಿ ಸಿ.ವಿ. ಆನಂದ್ ಅವರ ಸಂಧ್ಯ ಥಿಯೇಟರ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಅಲ್ಲು ಅರ್ಜುನ್ ಮತ್ತು ಸಂಧ್ಯ ಥಿಯೇಟರ್ ಮಾಲೀಕರ ಮೇಲೆ ಪೊಲೀಸರು ಹಲವು ಕೇಸ್ ದಾಖಲಿಸಿದ್ದಾರೆ. ಥಿಯೇಟರ್ ಲೈಸೆನ್ಸ್ ರದ್ದು ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಲೈಸೆನ್ಸ್ ರದ್ದು ಯಾಕೆ ಮಾಡಬಾರದು ಅಂತ 10 ದಿನದಲ್ಲಿ ಥಿಯೇಟರ್ ಮಾಲೀಕರು ತಿಳಿಸಬೇಕು ಎಂದು ಸಿ.ವಿ. ಆನಂದ್ ಹೇಳಿದ್ದಾರೆ.
ಸಂಧ್ಯಾ ಚಿತ್ರಮಂದಿರದ ಮಾಲೀಕರ ವಿವರಣೆ ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಆಕೆಯ ಮಗ ಶ್ರೀತೇಜ್‌ಗೆ ಬ್ರೈನ್ ಡ್ಯಾಮೇಜ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಿ.ವಿ. ಆನಂದ್ ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಮೃತ ರೇವತಿ ಅವರ ಮಗ ಶ್ರೀತೇಜ್ ಆರೋಗ್ಯದ ಬಗ್ಗೆ ವೈದ್ಯರ ಜೊತೆ ಚರ್ಚಿಸಿದ್ದಾರೆ. ಸರ್ಕಾರ ಎಲ್ಲ ರೀತಿಯ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಜಾಮೀನು ರದ್ದಾಗುತ್ತದೆ ಎಂಬ ವದಂತಿಗಳ ಬಗ್ಗೆ ಮಾತನಾಡಲು ಪೊಲೀಸ್ ಅಧಿಕಾರಿ ನಿರಾಕರಿಸಿದರು.