ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರಗಳು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಭಾರತದ ಅತ್ಯುತ್ತಮ ಇವಿ ಕಾರುಗಳ ಪೈಕಿ ನೆಕ್ಸಾನ್, ಟಿಯಾಗೋ, ಟಿಗೋರ್, ಪಂಚ್ ಮುಂಚೂಣಿಯಲ್ಲಿದೆ. ಇದೀಗ ಟಾಟಾ ಮೋಟಾರ್ಸ್ ಭರ್ಜರಿ ಆಫರ್ ಘೋಷಿಸಿದೆ.
ಟಾಟಾ ತನ್ನ ಎರಡು ಎಲೆಕ್ಟ್ರಿಕ್ ಕಾರುಗಳ ಬೆಲೆ ಭರ್ಜರಿ ಡಿಸ್ಕೌಂಟ್ ನೀಡಿದೆ. ಟಾಟಾ ನೆಕ್ಸಾನ್ ಇವಿ ಹಾಗೂ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರುಗಳಿಗೆ ಡಿಸ್ಕೌಂಟ್ ನೀಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟಾಟಾ ಪಂಚ್ ಇವಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಬರೋಬ್ಬರಿ 1.2 ಲಕ್ಷ ರೂಪಾಯಿ ಕಡಿತ ಮಾಡಲಾಗಿದೆ. ಭಾರಿ ಬೆಲೆ ಕಡಿತದಿಂದ ಇದೀಗ ಟಾಟಾ ನೆಕ್ಸಾನ್ ಹಾಗೂ ಇತರ ಇವಿ ಮೇಲಿನ ಬೇಡಿಕೆ ದುಪ್ಪಟ್ಟವಾಗುವ ಸಾಧ್ಯತೆ ಇದೆ.
ಟಾಟಾ ನೆಕ್ಸಾನ್ ಇವಿ ಕಾರಿನ ಬೆಲೆ 14.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದೀಗ ಬೆಲೆ ಕಡಿತದಿಂದ ನೆಕ್ಸಾನ್ ಇವಿ ಬೆಲೆ 13.3 ಲಕ್ಷ ರೂಗಳಲ್ಲಿ ಲಭ್ಯವಿದೆ.
ಇನ್ನು ಟಾಟಾ ಟಿಯಾಗೋ ಕಾರಿನ ಬೆಲೆಯಲ್ಲಿ ಬರೋಬ್ಬರಿ 70,000 ರೂಪಾಯಿ ಕಡಿತ ಮಾಡಲಾಗಿದೆ. ಇದೀಗ ನೂತನ ಟಿಯಾಗೋ ಇವಿ ಕಾರು 7.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಬೆಲೆ ಕಡಿತದಿಂದ ದೇಶದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ನೀಡುವ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ. ಇಷ್ಟೇ ಅಲ್ಲ ಅತೀ ಕಡಿಮೆ ಬೆಲೆಯಲ್ಲಿ SUV ಎಲೆಕ್ಟ್ರಿಕ್ ಕಾರು ನೀಡಿದ ಹೆಗ್ಗಳಿಕೆಗೆ ಟಾಟಾ ಪಾತ್ರವಾಗಿದೆ.
ಟಾಟಾ ತನ್ನ ಗ್ರಾಹಕರಿಗೆ ಅತ್ಯುತ್ತಮ ಕಾರು ನೀಡುತ್ತಿದೆ. ನಮ್ಮ ಇವಿ ಉತ್ಪಾದನೆಯಲ್ಲಿ ಬ್ಯಾಟರಿಗೆ ಹೆಚ್ಚಿನ ಮೊತ್ತ ಖರ್ಚಾಗುತ್ತಿದೆ. ಕೆಲ ಮಹತ್ವದ ಬೆಳವಣಿಗೆಯಿಂದ ಬ್ಯಾಟರಿ ಉತ್ಪಾದನೆ, ಆಮದುಗಳಲ್ಲಿ ಕೆಲ ರಿಯಾಯಿತಿಗಳಿರುವ ಕಾರಣ ಬೆಲೆ ಕಡಿತ ಸುಲಭವಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.
ಭಾರತದಲ್ಲಿ ಇಂಧನ ಚಾಲಿತ ಪ್ಯಾಸೆಂಜರ್ ವಾಹನ ಮಾರಾಟ ಶೇಕಡಾ 8 ರಷ್ಟು ಬೆಳವಣಿಗೆ ಕಂಡಿದ್ದರೆ, ಎಲೆಕ್ಟ್ರಿಕ್ ವಾಹನದಲ್ಲಿ ಶೇಕಡಾ 90 ರಷ್ಟು ಬೆಳವಣಿಗೆಯಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಇವಿ, ಇದೀಗ ಬೆಲೆ ಕಡಿತದಿಂದ ಪಾಲುದಾರಿಕೆ ಹೆಚ್ಚಿಸಲಿದೆ.