ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಭಾರತದಲ್ಲಿ ವಹಿವಾಟುಗಳಿಗೆ ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ಈ ಬಗ್ಗೆ ಜಾಗತಿಕ ನಾಯಕರು ಸಹ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ನಗದು ಬಳಕೆ ಕಡಿಮೆಯಾಗ್ತಿದ್ದು, ಆನ್‌ಲೈನ್ ಪಾವತಿ ವಿಧಾನವೇ ಸಾಕಷ್ಟು ಜನಪ್ರಿಯವಾಗುತ್ತಿದೆ. ಆದರೆ, ಇದಕ್ಕೆ ಇಂಟರ್ನೆಟ್ ಅತ್ಯಗತ್ಯ. ಆದರೆ, ಇನ್ಮುಂದೆ ಆ ತೊಂದರೆ ಇಲ್ಲ. ನೀವು ಇಂಟರ್ನೆಟ್ ಇಲ್ಲದೆಯೂ ಯುಪಿಐನ ಈ ಹೊಸ ವೈಶಿಷ್ಟ್ಯ ಬಳಕೆ ಮಾಡ್ಬೋದು ನೋಡಿ..
ಪಾವತಿಗಳಲ್ಲಿ ಅನುಕೂಲತೆಯನ್ನು ಸುಧಾರಿಸಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಇತ್ತೀಚೆಗೆ UPI Lite X ಎಂಬ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದ್ದಾರೆ. ಈ ವೈಶಿಷ್ಟ್ಯವು ಬಳಕೆದಾರರು ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿರುವಾಗ ಅಮದರೆ ತಮ್ಮ ಮೊಬೈಲ್‌ನಲ್ಲಿ ಇಂಟರ್‌ನೆಟ್ ಇಲ್ಲದೆಯೂ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. RBI ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚಿನ UPI ವೈಶಿಷ್ಟ್ಯವನ್ನು ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023 ರಲ್ಲಿ ಪರಿಚಯಿಸಿದ್ದಾರೆ.
UPI Lite X ಎಂದರೇನು?
UPI Lite X ಬಳಕೆದಾರರು ಯಾವುದೇ ಸಂಪರ್ಕವಿಲ್ಲದ ಸ್ಥಳಗಳಲ್ಲಿದ್ದಾಗ ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಅನುಮತಿಸುತ್ತದೆ. ಇದು ಅಂಡರ್‌ಗ್ರೌಂಡ್ ನಿಲ್ದಾಣಗಳು, ರಿಮೋಟ್ ಪ್ರದೇಶಗಳು ಮತ್ತು ಇಂಟರ್ನೆಟ್ ಇಲ್ಲದ ಪ್ರದೇಶಗಳಲ್ಲಿ ಬಳಸಲು ಅನುಕೂಲವಾಗಿದೆ.
ವೈಶಿಷ್ಟ್ಯದ ಬಗ್ಗೆ NPCI ಏನು ಹೇಳಿದೆ
“UPI LITE ವೈಶಿಷ್ಟ್ಯದ ಯಶಸ್ಸಿನ ನಂತರ ಆರ್‌ಬಿಐ ಗವರ್ನರ್ ಆಫ್‌ಲೈನ್ ಪಾವತಿಗಳಿಗಾಗಿ UPI LITE X ಅನ್ನು ಪ್ರಾರಂಭಿಸಿದರು. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ಈಗ ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿರುವಾಗ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದ. ಕಳಪೆ ಸಂಪರ್ಕವಿರುವ ಪ್ರದೇಶಗಳಲ್ಲಿಯೂ ಸಹ ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಕಾರ್ಯಗತಗೊಳಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
ನಿಯರ್ ಫೀಲ್ಡ್ ಕಮ್ಯುನಿಕೇಶನ್ (NFC) ಅನ್ನು ಬೆಂಬಲಿಸುವ ಹೊಂದಾಣಿಕೆಯ ಸಾಧನವನ್ನು ಹೊಂದಿರುವ ಯಾರಾದರೂ ಬಳಕೆ ಮಾಡಬಹುದು. ಯುಪಿಐ UPI LITE ಪಾವತಿಗಳು ಇತರ ಪಾವತಿ ವಿಧಾನಗಳಿಗಿಂತ ವೇಗವಾಗಿರುತ್ತವೆ, ಏಕೆಂದರೆ ವಹಿವಾಟನ್ನು ಪ್ರಕ್ರಿಯೆಗೊಳಿಸಲು ಕಡಿಮೆ ಸಮಯ ಬೇಕಾಗುತ್ತದೆ ಎಂದೂ ಹೇಳಿದರು.
UPI ಮತ್ತು UPI LITE ಗಿಂತ UPI LITE X ಹೇಗೆ ಭಿನ್ನವಾಗಿದೆ
UPI ಲೈಟ್ ಒಂದು ಪಾವತಿ ಪರಿಹಾರವಾಗಿದ್ದು, ಅದು ಕಡಿಮೆ ಮೌಲ್ಯದ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು NPCI ಕಾಮನ್ ಲೈಬ್ರರಿ (CL) ಅಪ್ಲಿಕೇಶನ್ ಅನ್ನು ಬಳಸುತ್ತದೆ. ಪ್ರಸ್ತುತ, ಇದರ ವಹಿವಾಟಿನ ಮೊತ್ತವನ್ನು 500 ರೂ. ಗಿಂತ ಕಡಿಮೆ ಮೌಲ್ಯಕ್ಕೆ ಬಳಸಬಹುದು. ಈ ವೈಶಿಷ್ಟ್ಯವು 'ಆನ್-ಡಿವೈಸ್ ವ್ಯಾಲೆಟ್' ನಂತೆ ಬಳಕೆದಾರರಿಗೆ UPI ಪಿನ್ ಬಳಸದೆಯೇ ನೈಜ-ಸಮಯದ ಸಣ್ಣ-ಮೌಲ್ಯದ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ.
ಮತ್ತೊಂದೆಡೆ, ಯುಪಿಐ 24x7 ತ್ವರಿತ ಪಾವತಿ ವ್ಯವಸ್ಥೆಯಾಗಿದ್ದು, ಬಳಕೆದಾರರು ಎರಡು ಬ್ಯಾಂಕ್ ಖಾತೆಗಳ ನಡುವೆ ನೈಜ ಸಮಯದಲ್ಲಿ ಹಣವನ್ನು ವರ್ಗಾಯಿಸಲು ಅನುಮತಿಸುತ್ತದೆ. NPCI ವೆಬ್‌ಸೈಟ್‌ನ ಪ್ರಕಾರ, UPI ಅನ್ನು ತಕ್ಷಣದ ಪಾವತಿ ಸೇವೆ ಅಥವಾ IMPS ಮೂಲಸೌಕರ್ಯದಲ್ಲಿ ನಿರ್ಮಿಸಲಾಗಿದೆ. ಈ ಎರಡೂ ವೈಶಿಷ್ಟ್ಯಗಳು ಇತ್ತೀಚಿನ UPI Lite X ಗಿಂತ ವಿಭಿನ್ನವಾಗಿವೆ.
UPI ಅಥವಾ UPI ಲೈಟ್ ಬಳಸಿಕೊಂಡು ವಹಿವಾಟು ಮಾಡುವಾಗ, ಸ್ವೀಕರಿಸುವವರು ಭೌತಿಕವಾಗಿ ಇರಬೇಕಾಗಿಲ್ಲ ಮತ್ತು ದೇಶದ ಎಲ್ಲಿಂದಲಾದರೂ ಹಣವನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ ಸ್ವೀಕರಿಸುವವರ UPI ಐಡಿ ಅಥವಾ ಲಿಂಕ್ ಮಾಡಲಾದ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಈ ವಹಿವಾಟುಗಳನ್ನು ಪೂರ್ಣಗೊಳಿಸಬಹುದು. ಆದರೆ, UPI Lite X ವಹಿವಾಟುಗಳಿಗೆ ಕಳುಹಿಸುವವರು ಮತ್ತು ಸ್ವೀಕರಿಸುವವರ ಎರಡೂ ಸಾಧನಗಳು ಹತ್ತಿರದಲ್ಲಿರಬೇಕು.
UPI ವಹಿವಾಟಿನ ಸಮಯದಲ್ಲಿ, ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣವನ್ನು ತಕ್ಷಣವೇ ಕಳುಹಿಸಲಾಗುತ್ತದೆ. ಈ ಮಧ್ಯೆ, UPI ಲೈಟ್ ಸಂದರ್ಭದಲ್ಲಿ ಹಣವನ್ನು ಕಳುಹಿಸುವವರ ಆನ್-ಡಿವೈಸ್ ವ್ಯಾಲೆಟ್ ಅಥವಾ UPI ಲೈಟ್ ಖಾತೆಯಿಂದ ಸ್ವೀಕರಿಸುವವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಕಳುಹಿಸುವವರ ಆನ್-ಡಿವೈಸ್ ವ್ಯಾಲೆಟ್ ಮತ್ತು ಸ್ವೀಕರಿಸುವವರ ಆನ್-ಡಿವೈಸ್ ವ್ಯಾಲೆಟ್ ನಡುವೆ ಹಣವನ್ನು ವರ್ಗಾಯಿಸಲು UPI ಲೈಟ್ X ವಹಿವಾಟುಗಳು NFC ಅನ್ನು ಬಳಸುತ್ತವೆ. ಇದು ಇಂಟರ್ನೆಟ್ ಪ್ರವೇಶದ ಅಗತ್ಯವನ್ನು ನಿವಾರಿಸುತ್ತದೆ. ಏಕೆಂದರೆ ವಹಿವಾಟು ಬ್ಯಾಂಕ್ ಖಾತೆಗಳಿಗಿಂತ ಸಾಧನದ ಇ-ವ್ಯಾಲೆಟ್‌ಗಳ ನಡುವೆ ನಡೆಯುತ್ತದೆ.
UPI ಗಾಗಿ, ಬ್ಯಾಂಕ್ ಖಾತೆಯಿಂದ ಒಂದು ದಿನದಲ್ಲಿ ವರ್ಗಾವಣೆ ಮಾಡಬಹುದಾದ ಗರಿಷ್ಠ ಮೊತ್ತ 2 ಲಕ್ಷ ರೂ. UPI ಲೈಟ್‌ನ ಗರಿಷ್ಠ ಮಿತಿ ರೂ 500 ಆಗಿದ್ದರೆ, ಒಂದು ದಿನದ ಗರಿಷ್ಠ ಮಿತಿ 4,000 ರೂ. ಆಗಿದೆ. UPI Lite X ಗೆ ಅಂತಹ ಯಾವುದೇ ಮಿತಿಯನ್ನು ಘೋಷಿಸಲಾಗಿಲ್ಲ.