ಬಾಲಿವುಡ್ ನಟಿ ಜೊತೆಗಿನ ವಿವಾಹವೂ ಕಡೇ ಹಂತದಲ್ಲಿ ರದ್ದು! ರತನ್ ಟಾಟಾ ದೇಶ ಕಂಡ ಅದ್ಭುತ, ಅಪ್ರತಿಮ ಉದ್ಯಮಿ. ಟಾಟಾ ಸಮೂಹವನ್ನು ಸಾವಿರಾರು ಕೋಟಿ ಉದ್ಯಮವಾಗಿ, ಅದನ್ನು ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸುವಲ್ಲಿ ರತನ್ ಪರಿಶ್ರಮ ಅಪರಿಮಿತ. ಆದರೆ ಅವರಿಗೆ ಅದ್ಯಾಕೋ ವಿವಾಹ ಭಾಗ್ಯ ಒದಗಿ ಬರಲೇ ಇಲ್ಲ.
ಮಾಧ್ಯಮಗಳಿಂದ ಸದಾ ದೂರವೇ ಇರುತ್ತಿದ್ದ ರತನ್ ಟಾಟಾ, ತಮ್ಮ ಆಪ್ತ ಸಂಗತಿಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು ಬಹುಕಡಿಮೆ. ಅಪರೂಪಕ್ಕೆ ಒಂದೆರೆಡು ಬಾರಿ ತಮ್ಮ ವಿವಾಹದ ವಿಷಯದ ಕುರಿತು ಅವರು ಬಹಿರಂಗವಾಗಿ ಮಾತನಾಡಿದ್ದರು. ಕನಿಷ್ಠ 4 ಬಾರಿ ವಿವಾಹದ ಸಮೀಪಕ್ಕೆ ಹೋಗಿದ್ದೆ. ಆದರೆ ಪ್ರತಿ ಬಾರಿಯೂ ನಾನೇ ಹೆದರಿಕೊಂಡು ವಿವಾಹದಿಂದ ಹಿಂದೆ ಸರಿದೆ. ಹೀಗಾಗಿ ಮದುವೆ ಅವಕಾಶ ತಪ್ಪಿಹೋಯ್ತು ಎಂದು ನಗುನಗುತ್ತಲೇ ಉತ್ತರಿಸಿದ್ದರು ರತನ್.
ನಟಿ ಜೊತೆ ಪ್ರೇಮ: ಬಾಲಿವುಡ್ ನಟಿ, ಮಾಡೆಲ್ ಸಿಮಿ ಗರೇವಾಲ್ ಮತ್ತು ರತನ್ ಟಾಟಾ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ 70-80ರ ದಶಕದಲ್ಲಿ ದೊಡ್ಡದಾಗಿ ಹಬ್ಬಿತ್ತು. ಆದರೆ ಇಬ್ಬರೂ ಎಲ್ಲಿಯೂ ಈ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ ಮತ್ತು ಪ್ರತಿಕ್ರಿಯೆಯನ್ನೂ ನೀಡಲಿರಲಿಲ್ಲ. ಆದರೆ ಸಂದರ್ಶನವೊಂದರಲ್ಲಿ ಸ್ವತಃ ಸಿಮಿ ರತನ್ ಟಾಟಾ ಅವರನ್ನು ಬಹುವಾಗಿ ಹೊಗಳಿದ್ದರು. ‘ನಮ್ಮಿಬ್ಬರದ್ದು ಸುದೀರ್ಘ ಇತಿಹಾಸವಿದೆ. ಅವರೊಬ್ಬ ಪರಿಪೂರ್ಣ ವ್ಯಕ್ತಿ. ಅವರೆಂದೂ ದುಡ್ಡಿನ ಹಿಂದೆ ಬಿದ್ದಿರಲಿಲ್ಲ’ ಎಂದು ಹೇಳಿದ್ದರು.
ಮೊದಲ ಹೆಜ್ಜೆಯಲ್ಲೇ ಸೋಲು: ಆರಂಭದಲ್ಲಿ ನ್ಯಾನೋ ಕಾರ್‌ಗಳನ್ನು ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಪ್ರಾರಂಭಿಸುವ ಯೋಜನೆ ಹಾಕಲಾಗಿತ್ತು. ಇದರಿಂದ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಅಭಿವೃದ್ಧಿಗೆ ವೇಗ ದೊರಕುತ್ತಿತ್ತು. ಇದಕ್ಕಾಗಿ ಅಲ್ಲಿ ಸಾಕಷ್ಟು ಕೃಷಿ ಭೂಮಿ ಖರೀದಿಸಿ ತಯಾರಿಕಾ ಘಟಕ ಆರಂಭಿಸಿತು. ಆದರೆ ಅಂದು ತಲೆಯೆತ್ತಿದ ಭೂ ಸ್ವಾಧೀನ ವಿರೋಧಿ ಆಂದೋಲನ ಇದಕ್ಕೆ ಮುಳುವಾಗಿ ಪರಿಣಮಿಸಿತು.
ರಾಜ್ಯದಲ್ಲಿ ವಿಪಕ್ಷ ನಾಯಕಿಯಾಗಿದ್ದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಕಾರ್ಖಾನೆಗಾಗಿ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿದ್ದರು. ಘಟಕದ ವಿರುದ್ಧ ದೊಡ್ಡಮಟ್ಟದ ಹೋರಾಟ ನಡೆಯಿತು. ಹೋರಾಟ ಹಿಂಸಾರೂಪ ಪಡೆದು ಸಾವು ನೋವಿಗೂ ಕಾರಣವಾಯ್ತು. ಹೀಗಾಗಿ ಅಲ್ಲಿ ಕಾರುಗಳ ಉತ್ಪಾದನೆ ಸಾಧ್ಯವಾಗಲಿಲ್ಲ. ಸತತ ಕಾನೂನು ಹೋರಾಟದ ಬಳಿಕ 2023ರಲ್ಲಿ ಸಿಂಗೂರು ಕಾರ್ಖಾನೆಯನ್ನು ಕೈಬಿಟ್ಟದ್ದಕ್ಕೆ ಟಾಟಾ ಮೋಟಾರ್ಸ್‌ಗೆ ಪರಿಹಾರ ದೊರೆಯಿತಾದರೂ, ಇದರಿಂದ ಆರ್ಥಿಕ ಅಭಿವೃದ್ಧಿಯ ಒಂದು ಅವಕಾಶ ಪಶ್ಚಿಮ ಬಂಗಾಳದ ಕೈತಪ್ಪಿತು.
ನ್ಯಾನೋಗೆ ಹೊಸ ನೆಲೆ: ಅತ್ತ ನರೇಂದ್ರ ಮೋದಿಯವರು ಗುಜರಾತ್‌ನ ಸಿಎಂ ಆಗಿದ್ದ ಸಂದರ್ಭದಲ್ಲಿ ಟಾಟಾ ಮೋಟಾರ್ಸ್‌ಗೆ ಹೊಸ ನೆಲೆ ಲಭಿಸಿತು. ಅಲ್ಲಿನ ಸಾಣಂದ್ ಎಂಬಲ್ಲಿ ಸರ್ಕಾರದಿಂದ ದೊರೆತ ೧,೧೦೦ ಎಕರೆ ಭೂಮಿಯಲ್ಲಿ 2 ಸಾವಿರ ಕೋಟಿ ಹೂಡಿಕೆಯೊಂದಿಗೆ ತಲೆಯೆತ್ತಿದ ನ್ಯಾನೋ ಯೋಜನೆ ಬೆಳವಣಿಗೆ ಕಂಡು, ರಾಜ್ಯದ ಆರ್ಥಿಕತೆಗೂ ವೇಗ ಕಲ್ಪಿಸಿತು. ಹೀಗೆ ಪ.ಬಂಗಾಳದಲ್ಲಿ ಮುದುರಿದ ‘ನ್ಯಾನೋ’ ಕನಸು ಗುಜರಾತ್‌ನಲ್ಲಿ ಚಿಗುರಿತು, ಬೆಳೆಯಿತು.