ಇತ್ತೀಚಿಗೆ ಬಿಡುಗಡೆಯಾದ ಹುರುನ್ ಇಂಡಿಯಾದ ಶ್ರೀಮಂತರ ಪಟ್ಟಿ 2023 ರ ಪ್ರಕಾರ, ರಾಷ್ಟ್ರದಲ್ಲಿ 259 ಬಿಲಿಯನೇರ್ ಶ್ರೀಮಂತರಿದ್ದಾರೆ (2022 ರಲ್ಲಿ 221), ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಭಾರತೀಯ ಮೂಲದ ವ್ಯವಸ್ಥಾಪಕರು, ಉದ್ಯಮಿಗಳಾಗಿರುವ ಅಸಾಧಾರಣ ನಿವ್ವಳ ಮೌಲ್ಯವನ್ನು ಹೊಂದಿರುವ ವೃತ್ತಿಪರರು ಕೂಡಾ ಈ ಪಟ್ಟಿಯಲ್ಲಿದ್ದಾರೆ.
ಈ ಶ್ರೀಮಂತ ಪಟ್ಟಿಯಲ್ಲಿರೋ ವ್ಯಕ್ತಿಗಳಲ್ಲಿ ಒಬ್ಬರು ಪಿ.ಪಿಚ್ಚಿ ರೆಡ್ಡಿ. ಕೇವಲ ಭಾರತದ ಶ್ರೀಮಂತ ಸ್ವಯಂ ನಿರ್ಮಿತ ಬಿಲಿಯನೇರ್‌ಗಳಲ್ಲಿ ಒಬ್ಬರು. 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023ರ ಪ್ರಕಾರ ಹೈದರಾಬಾದ್ ಮೂಲದ ವ್ಯಾಪಾರ ಉದ್ಯಮಿ ಎಂಜಿನಿಯರಿಂಗ್ ಮತ್ತು ನಿರ್ಮಾಣ ಉದ್ಯಮದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ವರ್ಷದಲ್ಲಿ ಅವರ ಸಂಪತ್ತಿಗೆ 24,700 ಕೋಟಿ ರೂ.ಗಳನ್ನು ಸೇರಿಸಿದ್ದಾರೆ.
ರೈತನ ಮಗನಾಗಿರುವ ಪಿ.ಪಿಚ್ಚಿ ರೆಡ್ಡಿಯವರ ವಿಶೇಷತೆಯೆಂದರೆ ಇವರು ಬೃಹತ್, ಹೊಳೆಯುವ ವಜ್ರದಂತೆ ಕಾಣುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ಈ ಮನೆಯು ಹೈದರಾಬಾದ್‌ನಲ್ಲಿ ಹೆಚ್ಚು ಜನಪ್ರಿಯವಾಗಿದೆ. 'ಡೈಮಂಡ್ ಹೌಸ್' ಎಂದೇ ಫೇಮಸ್ ಆಗಿದೆ. ರೆಡ್ಡಿ ತಮ್ಮದೇ ಆದ ವೈಯಕ್ತಿಕ ಗಾಲ್ಫ್ ಕೋರ್ಸ್‌ನ್ನು ಸಹ ಹೊಂದಿದ್ದಾರೆ.
ಕೃಷಿಕ ಕುಟುಂಬದಲ್ಲಿ ಜನಿಸಿದ ರೆಡ್ಡಿ ಕೋಟ್ಯಾಧಿಪತಿಯಾಗುವ ಕನಸು ಕಾಣುವ ಸ್ಥಿತಿಯಲ್ಲಿ ಇರಲಿಲ್ಲ. ಬಡತನದಲ್ಲಿಯೇ ಬಾಲ್ಯವನ್ನು ಕಳೆದರು. ಆದರೆ ಅವರು ಹೆಚ್ಚಿನ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. 1989ರಲ್ಲಿ ಮೇಘಾ ಇಂಜಿನಿಯರಿಂಗ್ ಎಂಟರ್‌ಪ್ರೈಸಸ್ ಎಂಬ ಸಣ್ಣ ಸಂಸ್ಥೆಯನ್ನು ಪ್ರಾರಂಭಿಸಿದರು.
ಈ ಸಂಸ್ಥೆಯ ಮೂಲಕ ಪುರಸಭೆಗಳಿಗೆ ಸಣ್ಣ ಪೈಪ್‌ಗಳನ್ನು ನಿರ್ಮಿಸುತ್ತಿದ್ದರು. ಕಂಪನಿ ರಸ್ತೆಗಳು, ಅಣೆಕಟ್ಟುಗಳು, ನೈಸರ್ಗಿಕ ಅನಿಲ ವಿತರಣಾ ಜಾಲಗಳು ಮತ್ತು ಲಿಫ್ಟ್ ನೀರಾವರಿ ಯೋಜನೆಗಳಂತಹ ಬೃಹತ್ ಮೂಲಸೌಕರ್ಯ ಯೋಜನೆಗಳಲ್ಲಿ ಪ್ರಮುಖ ಭಾಗವಾಗಲು ಶುರುವಾಯಿತು. ಇದರಲ್ಲಿ ಭಾರತದ ಅತಿದೊಡ್ಡ ಯೋಜನೆಯಾದ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯೂ ಸೇರಿದೆ. ಇದನ್ನು 14 ಶತಕೋಟಿ ವೆಚ್ಚದಲ್ಲಿ ನಿರ್ಮಿಸಲಾಯಿತು.
ಪ್ರಾರಂಭವಾದ ಎರಡು ವರ್ಷಗಳ ನಂತರ ಪಿಪಿ ರೆಡ್ಡಿ ಅವರ ಸೋದರಳಿಯ ಪಿವಿ ಕೃಷ್ಣಾ ರೆಡ್ಡಿ ಅವರು ವ್ಯವಹಾರದಲ್ಲಿ ಸೇರಿಕೊಂಡರು. ಅವರು ಸಂಸ್ಥಾಪಕರ ನಂತರ MD ಆಗಿ ಅಧಿಕಾರ ವಹಿಸಿಕೊಂಡರು.
ಇಂದು ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL)ನ್ನು ಮುನ್ನಡೆಸುತ್ತಿದ್ದಾರೆ. PP ರೆಡ್ಡಿ ಅವರು ಈ ವರ್ಷ ಭಾರತದ 100 ಶ್ರೀಮಂತ ವ್ಯಕ್ತಿಗಳಲ್ಲಿ ಒಂದಾಗಿದ್ದಾರೆ. ಬರೋಬ್ಬರಿ 37,300 ಕೋಟಿ ರೂ. ಆಸ್ತಿಯ ಒಡೆಯರು.