ಭಾರತದಲ್ಲಿ ಹಲವು ಐಷಾರಾಮಿ ಜೊತೆಗೆ ದುಬಾರಿ ಹೊಟೆಲ್‌ಗಳಿವೆ. ಈ ಹೊಟೆಲ್‌ಗಳು ಉಳಿದುಕೊಳ್ಳುವ ಗ್ರಾಹಕರಿಗೆ ವಿಶಾಲವಾದ ಕೊಠಡಿ, ಅಷ್ಟೇ ವಿಶಾಲವಾದ ಹೊರಾಂಗಣ, ಈಜುಕೊಳ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತದೆ. ಆದರೆ ಇದೀಗ ಭಾರತದಲ್ಲಿ ಜಪಾನ್ ರೀತಿಯ ಪಾಡ್ ಹೊಟೆಲ್ ಆರಂಭಗೊಂಡಿದೆ.
ಇದೀಗ ವಿಶ್ವಲ್ಲೆಡೆಗೆ ಜಪಾನ್ ಶೈಲಿಯ ಪಾಡ್ ಹೊಟೆಲ್ ಲಭ್ಯವಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಇದು ಗಾತ್ರದಲ್ಲಿ ಸಣ್ಣದು, ದೂರದಿಂದ ನೋಡಿದರೆ ಔಷಧಿ ಮಾತ್ರೆಯ ಶೀಟ್ ಇದ್ದಂತೆ ಕಾಣುತ್ತದೆ. ಇದರ ಬೆಲೆ ಕೂಡ ಅತೀ ಕಡಿಮೆ. ನೋಯ್ಡಾದಲ್ಲಿ ಇದೀಗ ಈ ಪಾಡ್ ಹೊಟೆಲ್ ಆರಂಭಗೊಂಡಿದೆ.
ಸೌಮ್ಯ ಅನ್ನೋ ಎಕ್ಸ್ ಯೂಸರ್ ದೆಹಲಿಯಲ್ಲಿ ಆರಂಭಗೊಂಡಿರುವ ಪಾಡ್ ಹೊಟೆಲ್‌ಗೆ ತೆರಳಿ ಒಂದು ದಿನ ತಂಗಿದ್ದಾರೆ. ಈ ಹೊಟೆಲ್ ಕುರಿತು ವ್ಯವಸ್ಥೆ, ಸೌಲಭ್ಯಗಳು, ಉಳಿದುಕೊಳ್ಳುವ ಅನುಭವ ಬಿಚ್ಚಿಟ್ಟಿದ್ದಾರೆ. ಮೊದಲ ನೋಟದಲ್ಲಿ ಈ ಹೊಟೆಲ್ ಕೈಬೀಸಿ ಆಕರ್ಷಿಸುತ್ತದೆ. ಈ ಹೊಟೆಲ್ ಬೆಲೆ ಕೂಡ ಕೈಗೆಟುಕುವ ದರದಲ್ಲಿದೆ.ಈ ಪಾಡ್ ಹೊಟೆಲ್‌ನಲ್ಲಿ 12 ಗಂಟೆ ಕಾಲ ಉಳಿದುಕೊಳ್ಳಲು ಬೆಲೆ 1 ಸಾವಿರ ರೂಪಾಯಿ ಮಾತ್ರ. ಆದರೆ ಎಲ್ಲಾ ವ್ಯವಸ್ಥೆಗಳು ಈ ಹೊಟೆಲ್‌ನಲ್ಲಿದೆ. ಐಷಾರಾಮಿ ಹೊಟೆಲ್ ರೀತಿಯ ಎಲ್ಲಾ ಸೌಲಭ್ಯಗಳು ಇಲ್ಲಿದೆ.
ಸೌಮ್ಯ ಸಿಂಗಲ್ ಬೆಡ್ ಪಾಡ್ ಆಯ್ಕೆ ಮಾಡಿಕೊಂಡಿದ್ದರು. ಸಣ್ಣ ಸಣ್ಣ ರೂಂಗಳ ರೀತಿ ಈ ಹೊಟೆಲ್ ಡಿಸೈನ್ ಮಾಡಲಾಗಿರುತ್ತದೆ. ಹಲವು ಟೆಕ್ ಸೆಟ್ಟಿಂಗ್ ಹೊಂದಿರುವ ಮಿರರ್ ಪ್ಯಾನೆಲ್, ಜೊತೆಗೆ ನಿಮ್ಮ ಮೂಡ್‌ಗೆ ಅನುಗುಣವಾಗಿರುವ ಹಲವು ಬಣ್ಣಗಳ ಲೈಟ್, ಚಾರ್ಜಿಂಗ್ ಪಾಯಿಂಟ್, ಎಂಟರ್ಟೈನ್ಮೆಂಟ್ ಸ್ಕ್ರೀನ್ ಸೇರಿದಂತೆ ಹಲವು ಸೌಲಭ್ಯ ಸಿಗಲಿದೆ.
ಈ ಹೊಟೆಲ್‌ನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ಲಭ್ಯವಿದೆ. ಇದರ ಜೊತೆ ಕಾಮನ್ ವಾಶ್‌ರೂಮ್ ನೀಡಲಾಗಿದೆ. ಎಲ್ಲಾ ಕಡೆ ಶುಚಿತ್ವ ಕಾಪಾಡಿಕೊಳ್ಳಲಾಗಿದೆ. ಆದರೆ ಈ ಪಾಡ್ ಹೊಟೆಲ್ ಸೌಂಡ್ ಪ್ರೂಫ್ ಅಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಹೀಗಾಗಿ ಇತರ ಕೋಣೆಗಳಿಗೆ, ಹೊಟೆಲ್ ಒಳಗಿನ ಲೀವಿಂಗ್ ಏರಿಯಾದಲ್ಲಿ ಯಾರಾದರೂ ಓಡಾಡಿದರೂ ಶಬ್ದ ಕೇಳಿಸುತ್ತಿದೆ ಎಂದಿದ್ದಾರೆ.
ಈ ಹೊಟೆಲ್ 12 ಗಂಟೆ ಅವಧಿಗೆ ಬುಕ್ ಮಾಡಿಕೊಳ್ಳಬೇಕು. ಮತ್ತೆ ಬೇಕೆಂದರೆ ಹೊಟೆಲ್ ಬುಕಿಂಗ್ ರಿನೀವಲ್ ಮಾಡಿಕೊಳ್ಳಬೇಕು. ಒಮ್ಮೆ ಬುಕ್ ಮಾಡಿ ನೀವು ಒಂದು ಗಂಟೆ ಇದ್ದರೂ 12 ಗಂಟೆ ಇದ್ದರೂ 1,000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇಲ್ಲಿ ಖಾಸಗಿ ಪಾಡ್ ರೂಂ ಕೂಡ ಬುಕ್ ಮಾಡಿಕೊಳ್ಳಬಹುದು. ಇದರಲ್ಲಿ ಕೇವಲ ಸಣ್ಣ ರೂಂನಲ್ಲಿ ವಿಶ್ರಾಂತಿ ಪಡೆಯಲು ಮಾತ್ರ ಸಾಧ್ಯ.