ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು

Published : Dec 17, 2025, 11:42 AM IST

ಸಂಬಳ ಕಡಿಮೆಯಾದ್ದರಿಂದ ಉಲಿತಾಯ ಮಾಡೋದಕ್ಕಾಗ್ತಿಲ್ಲ ಅಂತ ಎಷ್ಟೋ ಜನ ಹೇಳುತ್ತಿರುತ್ತಾರೆ. ಆದರೆ ಹಣಕಾಸು ತಜ್ಞರ ಪ್ರಕಾರ ಹಣ ಉಳಿತಾಯಕ್ಕೆ ದೊಡ್ಡ ತಡೆ ನಮ್ಮ ಜೀವನಶೈಲಿ. ಈ ಕುರಿತ ಚಿಂತನಾತ್ಮಕ ಲೇಖನ.

PREV
16
ತಪ್ಪು ಕಲ್ಪನೆ

ಒಂದೊಳ್ಳೆ ಮೊತ್ತದ ಸಂಬಳ ಬರುತ್ತಿದ್ದರೆ, ಉಳಿತಾಯ, ಹೂಡಿಕೆ ಎಲ್ಲಾ ಮಾಡಬಹುದು ಅನ್ನೋ ಎಷ್ಟೋ ಜನರ ಅಭಿಪ್ರಾಯವನ್ನು ಖ್ಯಾತ ಹಣಕಾಸು ತಜ್ಞ ಸಿ.ಎ. ಅಭಿಷೇಕ್‌ ವಾಲಿಯಾ ತಳ್ಳಿ ಹಾಕುತ್ತಾರೆ. ‘ಇದೊಂದು ತಪ್ಪು ಕಲ್ಪನೆ. ನೀನೆಷ್ಟು ದುಡೀತೀಯ ಅನ್ನೋದು ನಿನ್ನ ಉಳಿತಾಯದ ಮೇಲೆ ಪರಿಣಾಮ ಬೀರೋದಿಲ್ಲ. ಬದಲಿಗೆ ಬಂದ ದುಡ್ಡನ್ನು ನೀನು ಹೇಗೆ ಮ್ಯಾನೇಜ್‌ ಮಾಡುತ್ತೀಯ ಅನ್ನೋದಷ್ಟೇ ಇಲ್ಲಿ ಮುಖ್ಯ’ ಎನ್ನುತ್ತಾರೆ.

26
1. ಆದಾಯಕ್ಕಿಂತ ಆದ್ಯತೆ ಮುಖ್ಯ

ಅಭಿಷೇಕ್‌ ವಾಲಿಯಾ ಪ್ರಕಾರ, ಸೇವಿಂಗ್ಸ್ ಹೆಚ್ಚಿಸಲು; ಹೆಚ್ಚಿನ ಮೊತ್ತದ ಸಂಬಳ, ಸಂಬಳದ ಏರಿಕೆಗಿಂತ ಅದು ನಮ್ಮ ಆದ್ಯತೆಯಾಗುವುದು ಮುಖ್ಯ. ಉಳಿತಾಯ ಮೊದಲ ಆದ್ಯತೆಯಾದರೆ ಕೈ ಸೇರಿದ ಮೊತ್ತದಲ್ಲಿ ಒಂದಿಷ್ಟು ಹಣ ಉಳಿತಾಯ ಆಗಿಯೇ ಆಗುತ್ತದೆ.

36
2. ಜೀವನಶೈಲಿ ಮೇಲ್ದರ್ಜೆಗೇರಿಸುವುದರಲ್ಲೇ ಸಮಸ್ಯೆ

ಬೋನಸ್‌ ಅಥವಾ ಭತ್ಯೆ ಹೆಚ್ಚಳವಾದಾಗ ಆ ಖುಷಿಗೆ ಹೊಸ ಖರ್ಚು ಶುರು ಮಾಡ್ತೀವಿ. ಅಲ್ಲೀತನಕ ಸಾಮಾನ್ಯ ಬಜೆಟ್‌ನ ಸಲೂನ್‌ನಲ್ಲಿ ಹೇರ್‌ ಕಟ್‌ ಮಾಡಿಸ್ತಿದ್ದವರು ಏಕ್‌ದಂ ಹೈಎಂಡ್‌ ಸಲೂನ್‌ಗೆ ಹೋಗುತ್ತೇವೆ. ಆ ಹೊತ್ತಿಗೆ ಅದು ಸಂತೋಷವನ್ನೇನೋ ಕೊಡುತ್ತದೆ. ಆಮೇಲೆ ಅದರ ಮೇಲೆ ಅವಲಂಬನೆ ಬೆಳೆಯುತ್ತದೆ. 

ಬೋನಸ್‌ನಲ್ಲಿ ಬಂದ ಹಣ ಆ ವಾರಕ್ಕೆ ಬೇಕಾದ ಖುಷಿ ಕೊಟ್ಟು ಹೋಗಿಬಿಡುತ್ತದೆ. ಆದರೆ ಆ ನೆವದಲ್ಲಿ ಶುರು ಮಾಡಿದ ಅಭ್ಯಾಸ ದೀರ್ಘ ಕಾಲ ಮುಂದುವರಿಯುತ್ತವೆ. ಇಂಥಾ ಸೂಕ್ಷ್ಮಗಳತ್ತ ಗಮನ ಕೊಡಿ.

46
3. ಸ್ಟೇಟಸ್‌ನ ಭ್ರಮೆ

‘ಆರ್ಥಿಕವಾಗಿ ನಮ್ಮನ್ನು ಕುಸಿಯುವಂತೆ ಮಾಡುವಲ್ಲಿ ಸ್ಟೇಟಸ್‌ ಎಂಬ ಭ್ರಮೆಯ ಪಾತ್ರವೂ ದೊಡ್ಡದಿದೆ’ ಎನ್ನುತ್ತಾರೆ ಅಭಿಷೇಕ್‌. ಅವರ ಪ್ರಕಾರ ನೀವು ಶ್ರೀಮಂತರು ಎಂದು ತೋರಿಸಿಕೊಂಡ ಮಾತ್ರಕ್ಕೆ ನೀವು ಶ್ರೀಮಂತರಾಗೋದಿಲ್ಲ. ಬದಲಿಗೆ ಈ ನೆವದಲ್ಲಿ ಬಡವರಾಗುತ್ತಾ ಹೋಗುತ್ತೀರಿ. 

ಇನ್ನೊಬ್ಬರ ಕಣ್ಣಲ್ಲಿ ದೊಡ್ಡೋರಾಗಿ ಕಾಣಬೇಕು ಅಂತ ಒದ್ದಾಡೋದಕ್ಕಿಂತ ಹೂಡಿಕೆ, ಆದ್ಯತೆಗಳ ಮೂಲಕ ಹಣಕಾಸನ್ನು ಸ್ಮಾರ್ಟ್‌ ಆಗಿ ನಿರ್ವಹಿಸಿ ನಿಜಕ್ಕೂ ಶ್ರೀಮಂತರೇ ಆಗುವುದು ಜಾಣತನ.

56
4. ಲೈಫು ಸೆಟಲ್‌ ಆಗಲಿ ಅಂತ ಕಾಯಬೇಡಿ

‘ಸದ್ಯಕ್ಕೆ ನನ್ನ ಬಳಿ ಸೇವಿಂಗ್ಸ್‌ಗೆ ಬೇಕಾದಷ್ಟು ಹಣ ಇಲ್ಲ. ಈಗಿರುವ ಸಮಸ್ಯೆ ಮುಗಿದು ಹಣ ಸ್ವಲ್ಪ ಕೈ ಸೇರಿದ ಮೇಲೆ ಸೇವಿಂಗ್ಸ್‌ ಶುರು ಮಾಡೋಣ’ ಅನ್ನುವುದು ಹಲವರ ಚಿಂತನೆ. ಆದರೆ ನಾವು ಕಾಯುವ ಅಂಥಾ ದಿನ ಎಂದೂ ಬರುವುದಿಲ್ಲ. ‘ನಿಮಗೆ ಶ್ರೀಮಂತಿಕೆ ಬಂದ ಮೇಲೆ ಸಂಪತ್ತು ಬೆಳೆಯೋದಲ್ಲ. ನೀವು ಹೂಡಿಕೆ ಅಥವಾ ಸೇವಿಂಗ್ಸ್‌ ಮಾಡಲು ನಿರ್ಧರಿಸಿದ ಕ್ಷಣವೇ ನಿಮ್ಮ ಸಂಪತ್ತು ಬೆಳೆಯುತ್ತದೆ’ ಅಂತಾರೆ ತಜ್ಞರು.

66
5. ಉಳಿತಾಯದ ಆಧಾರಸ್ತಂಭಗಳು

ಕ್ರಮಬದ್ಧ ಜೀವನಶೈಲಿ, ಆರ್ಥಿಕ ಗುರಿ, ಹಣಕಾಸಿನ ನಿರ್ವಹಣೆ, ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಶಿಸ್ತು ಇವು ಹಣದ ಉಳಿತಾಯಕ್ಕೆ ಆಧಾರಸ್ತಂಭಗಳು. ಕ್ಷಣಿಕ ಖುಷಿಗಿಂತ ದೀರ್ಘಕಾಲ ನಮ್ಮನ್ನು ಕಾಯುವ ಹಣದ ಉಳಿತಾಯವನ್ನು ಈ ಆಧಾರಸ್ತಂಭಗಳ ಮೇಲೆ ಕಟ್ಟುತ್ತ ಹೋಗಬೇಕು.

Read more Photos on
click me!

Recommended Stories