ಟಾಟಾ ಗ್ರೂಪ್‌ನ ಗ್ರಾಹಕ ಘಟಕವು ಹಲ್ದಿರಾಮ್‌ನಲ್ಲಿ ಬಹುಪಾಲು ಪಾಲನ್ನು (ಕನಿಷ್ಠ 51 ಪ್ರತಿಶತ) ಖರೀದಿಸಲು ಚರ್ಚೆಯಲ್ಲಿ ತೊಡಗಿದೆ ಎಂದು ಇತ್ತೀಚೆಗೆ ರಾಯಿಟರ್ಸ್ ವರದಿ ಮಾಡಿತ್ತು. ಆದರೆ, ಖರೀದಿಗೆ ಹಲ್ದಿರಾಮ್ಸ್ ಕಂಪನಿ ಬಯಸಿದ 10 ಬಿಲಿಯನ್ ಡಾಲರ್ ಮೌಲ್ಯಮಾಪನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಬೈನ್ ಕ್ಯಾಪಿಟಲ್ ಸೇರಿದಂತೆ ಖಾಸಗಿ ಈಕ್ವಿಟಿ ಸಂಸ್ಥೆಗಳು ಹಲ್ದಿರಾಮ್ಸ್ ಜೊತೆ 10 ಪರ್ಸೆಂಟ್ ಪಾಲನ್ನು ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿವೆ ಎಂದೂ ವರದಿಯಾಗಿತ್ತು.
ಆದರೆ, ರಾಯಿಟರ್ಸ್ ವರದಿಯನ್ನು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಹಾಗೂ ಹಲ್ದಿರಾಮ್ಸ್ ಬ್ರ್ಯಾಂಡ್ ಎರಡೂ ಸಹ ನಿರಾಕರಿಸಿದೆ. ಟಾಟಾ ಗ್ರೂಪ್‌ನ ಗ್ರಾಹಕ ಅಂಗಕ್ಕೆ 51 ಶೇಕಡಾ ಪಾಲನ್ನು ಮಾರಾಟ ಮಾಡುವ ಬಗ್ಗೆ ಇತ್ತೀಚಿನ ವರದಿಗಳನ್ನು ಜನಪ್ರಿಯ ಸ್ನ್ಯಾಕ್ ಬ್ರ್ಯಾಂಡ್ ಹಲ್ದಿರಾಮ್ಸ್ ನಿರಕರಿಸಿದೆ.
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಸಹ ಈ ವರದಿಯನ್ನು ಹಲ್ದಿರಾಮ್ಸ್‌ಗೂ ಮುನ್ನವೇ ನಿರಾಕರಿಸಿತ್ತು. ಈ ಸ್ಪಷ್ಟೀಕರಣದ ನಂತರ, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ತನ್ನ ಷೇರಿನ ಬೆಲೆಯಲ್ಲಿ 2.60 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಇಂಟ್ರಾಡೇ ಸೆಷನ್ ವೇಳೆ ಶೇ. 2.9 ರಷ್ಟು ಇಳಿಕೆಯನ್ನೂ ಕಂಡಿತ್ತು.
ಆರಂಭಿಕ ವರದಿಯ ನಂತರ, ಟಾಟಾ ಗ್ರಾಹಕ ಉತ್ಪನ್ನಗಳ ಷೇರುಗಳು ಶೇಕಡಾ 4 ಕ್ಕಿಂತ ಹೆಚ್ಚಿನ ಏರಿಕೆಯನ್ನು ಅನುಭವಿಸಿದವು ಎನ್ನುವುದೂ ಗಮನಾರ್ಹ ವಿಚಾರ. ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳು ಅನಾಮಧೇಯವಾಗಿದ್ದು, ಟಾಟಾ ಶೇಕಡಾ 51 ಕ್ಕಿಂತ ಹೆಚ್ಚು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಹಲ್ದಿರಾಮ್ಸ್ ಕೇಳುವ ಬೆಲೆ ಸಾಕಷ್ಟು ಹೆಚ್ಚಾಗಿದೆ ಎಂದೂ ಅವರು ಹೇಳಿದರು.
1937 ರಲ್ಲಿ ಸಣ್ಣ ಅಂಗಡಿಯಲ್ಲಿ ಸ್ಥಾಪಿಸಲಾದ ಕುಟುಂಬ-ಚಾಲಿತ ವ್ಯವಹಾರವಾದ ಹಲ್ದಿರಾಮ್ಸ್ ತನ್ನ ಗರಿಗರಿಯಾದ "ಭುಜಿಯಾ" ಸ್ನ್ಯಾಕ್ಸ್‌ಗೆ ಹೆಸರುವಾಸಿಯಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿದೆ ಮತ್ತು ಭಾರತದಾದ್ಯಂತ ಬಹುತೇಕ ಅಂಗಡಿಗಳಲ್ಲಿ ವ್ಯಾಪಕವಾಗಿ ಲಭ್ಯವಿದೆ. ಇದು ಭಾರತದ 6.2 ಬಿಲಿಯನ್ ಡಾಲರ್ ಖಾರದ ಸ್ನ್ಯಾಕ್ ಮಾರುಕಟ್ಟೆಯಲ್ಲಿ ಸುಮಾರು 13 ಪ್ರತಿಶತ ಪಾಲನ್ನು ಹೊಂದಿದ್ದು, ಇದು ಪೆಪ್ಸಿಯ Lays ಚಿಪ್ಸ್‌ಗೆ ಪ್ರತಿಸ್ಪರ್ಧಿಯಾಗಿದೆ.
ದೇಶೀಯ ಉಪಸ್ಥಿತಿಯ ಜೊತೆಗೆ, ಸಿಂಗಾಪುರ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹಲ್ದಿರಾಮ್ಸ್ ಸ್ನ್ಯಾಕ್ಸ್ ಮಾರಾಟ ಮಾಡಲಾಗುತ್ತದೆ. ಕಂಪನಿಯು ಸುಮಾರು 150 ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿದ್ದು, ಅದು ವಿವಿಧ ಸ್ಥಳೀಯ ಮತ್ತು ಪಾಶ್ಚಿಮಾತ್ಯ ಪಾಕಪದ್ಧತಿಯನ್ನು ಹಾಗೂ ಸಿಹಿತಿಂಡಿಗಳನ್ನು ಒದಗಿಸುತ್ತದೆ.