ಕೇಂದ್ರ ಸರ್ಕಾರ ಶುಕ್ರವಾರ ಠೇವಣಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಮರುಕಳಿಸುವ ಠೇವಣಿ ಯೋಜನೆ ಅಥವಾ ಆರ್‌ಡಿ ಯೋಜನೆಯೊಂದರ ಬಡ್ಡಿ ದರವನ್ನು ಮೋದಿ ಸರ್ಕಾರ ಹೆಚ್ಚಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಸುತ್ತೋಲೆ ನೀಡಿದೆ.
ಕೇಂದ್ರ ಸರ್ಕಾರವು ಐದು ವರ್ಷಗಳ ಮರುಕಳಿಸುವ ಠೇವಣಿ ಯೋಜನೆಯ (ಆರ್‌ಡಿ) ಬಡ್ಡಿದರವನ್ನು ಡಿಸೆಂಬರ್ ತ್ರೈಮಾಸಿಕಕ್ಕೆ 6.5 ಶೇಕಡಾದಿಂದ 6.7 ಕ್ಕೆ ಏರಿಸಿದೆ. ಆದರೆ, ಇತರೆ ಎಲ್ಲಾ ಇತರ ಸಣ್ಣ ಉಳಿತಾಯ ಯೋಜನೆಗಳ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಹಾಗೆ ಆರ್.ಡಿ ಯೋಜನೆಯ ಐದು ವರ್ಷದ ಯೋಜನೆ ಹೊರತುಪಡಿಸಿ ಇತರೆ ಮರುಕಳಿಸುವ ಠೇವಣಿ ಯೋಜನೆಯ ಬಡ್ಡಿ ದರಗಳಲ್ಲೂ ಯಾವುದೇ ಬದಲಾವಣೆಯಾಗಿಲ್ಲ.
ಐದು ವರ್ಷಗಳ RD ಯಲ್ಲಿನ ಪರಿಣಾಮಕಾರಿ ಹೆಚ್ಚಳವು 20 ಬೇಸಿಸ್ ಪಾಯಿಂಟ್ಸ್ ಆಗಿದ್ದು, ಇತರ ಸಣ್ಣ ಉಳಿತಾಯ ಯೋಜನೆಗಳ ದರಗಳು ಈ ಹಿಂದಿನಂತೆಯೇ ಇದೆ. ಉಳಿತಾಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 4 ಮತ್ತು ಒಂದು ವರ್ಷದ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 6.9 ಕ್ಕೆ ಉಳಿಸಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯದ ಸುತ್ತೋಲೆ ತಿಳಿಸಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಹ ಈ ದರಗಳು ಒಂದೇ ಆಗಿದ್ದವು. ಇದಕ್ಕೂ ಮೊದಲು, ಜೂನ್‌ನಲ್ಲಿ ಅಂದರೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಆಯ್ದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು 0.3% ವರೆಗೆ ಹೆಚ್ಚಿಸಿತ್ತು. ಗಮನಾರ್ಹವಾಗಿ, ಐದು ವರ್ಷಗಳ ಮರುಕಳಿಸುವ ಠೇವಣಿ (RD) ಗಾಗಿ ಶೇಕಡಾ 0.3 ರಷ್ಟು ಹೆಚ್ಚಿಸಿದ್ದು, ಈವರೆಗಿನ ಹೆಚ್ಚಳವಾಗಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಎರಡು ವರ್ಷ ಮತ್ತು ಮೂರು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು ಶೇಕಡಾ 7 ರಷ್ಟಿದ್ದರೆ, ಐದು ವರ್ಷಗಳ ಅವಧಿಯ ಠೇವಣಿಯ ದರವು ಶೇಕಡಾ 7.5 ರಷ್ಟಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಶೇಕಡಾ 8.2 ರ ಬಡ್ಡಿದರವನ್ನು ಪಡೆಯುತ್ತಿದ್ದರು.
ಇನ್ನು, ಮಾಸಿಕ ಆದಾಯ ಖಾತೆ ಯೋಜನೆಯಲ್ಲಿ, ಬಡ್ಡಿ ದರವು 7.4 ಪ್ರತಿಶತವಾಗಿದ್ದರೆ, ಇದು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ 7.7 ಶೇಕಡಾ ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯಲ್ಲಿ ಶೇಕಡಾ 7.1 ಆಗಿದೆ. ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ದರವು 7.5 ಪ್ರತಿಶತ ಮತ್ತು ಹೂಡಿಕೆಗಳು 115 ತಿಂಗಳುಗಳಲ್ಲಿ ಮೆಚ್ಯೂರ್ ಆಗುತ್ತದೆ. ಸುತ್ತೋಲೆಯ ಪ್ರಕಾರ, ಜನಪ್ರಿಯ ಹೆಣ್ಣು ಮಕ್ಕಳ ಯೋಜನೆ ಸುಕನ್ಯಾ ಸಮೃದ್ಧಿ ಖಾತೆಯ ಬಡ್ಡಿ ದರವನ್ನು ಶೇಕಡಾ 8 ರಷ್ಟು ಇದ್ದು, ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮುಖ್ಯವಾಗಿ ಅಂಚೆ ಕಚೇರಿಗಳಿಂದ ನಿರ್ವಹಿಸಲ್ಪಡುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕಕ್ಕೊಮ್ಮೆ ಅಧಿಸೂಚನೆ ನೀಡುತ್ತದೆ.