ಮನರಂಜನಾ ಉದ್ಯಮದಲ್ಲೂ ಅಂಬಾನಿಯದ್ದೇ ಸಾಮ್ರಾಜ್ಯ: ಡಿಸ್ನಿ ಹಾಟ್‌ಸ್ಟಾರ್‌ ಕೂಡ ರಿಲಯನ್ಸ್ ಪಾಲು!

First Published | Oct 24, 2023, 8:57 AM IST

ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ವಾಲ್ಟ್ ಡಿಸ್ನಿ ಕಂಪನಿಯ ಡಿಸ್ನಿ ಇಂಡಿಯಾ ಖರೀದಿಸಲು ಹಲವು ಬಿಲಿಯನ್‌ ಡಾಲರ್‌ ಒಪ್ಪಂದ ಅಂತಿಮ ಹಂತಕ್ಕೆ ಬಂದಿದೆ ಎಂದು ವರದಿಯಾಗಿದೆ. 

ದೇಶದ ಅತಿ ಶ್ರೀಮಂತ ವ್ಯಕ್ತಿ ಅಂದ್ರೆ ಅದು ಮುಖೇಶ್‌ ಅಂಬಾನಿ. ನಾನಾ ಹೊಸ ಹೊಸ ಕ್ಷೇತ್ರಗಳಿಗೆ ಇವರ ಉದ್ಯಮ ಕಾಲಿಡುತ್ತಿರುತ್ತದೆ. ಹಾಗೂ ಇತರೆ ಕಂಪನಿಗಳ ಜತೆ ಒಪ್ಪಂದ ಹಾಗೂ ಹೂಡಿಕೆಯೂ ನಡೆಯುತ್ತಿರುತ್ತದೆ. ಅದೇ ರೀತಿ, ಈಗ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ವಾಲ್ಟ್ ಡಿಸ್ನಿ ಕಂಪನಿಯ ಡಿಸ್ನಿ ಇಂಡಿಯಾ ಖರೀದಿಸಲು ಹಲವು ಬಿಲಿಯನ್‌ ಡಾಲರ್‌ ಒಪ್ಪಂದ ಅಂತಿಮ ಹಂತಕ್ಕೆ ಬಂದಿದೆ ಎಂದು ವರದಿಯಾಗಿದೆ. 
 

ಈ ಒಪ್ಪಂದದ ನಂತರ 10 ಬಿಲಿಯನ್‌ ಡಾಲರ್‌ ಅಂದಾಜು ಮೌಲ್ಯವನ್ನು ಹೊಂದಿರುವ ಡಿಸ್ನಿ ಸ್ಟಾರ್ ವ್ಯವಹಾರದಲ್ಲಿ ರಿಲಯನ್ಸ್ ಹೆಚ್ಚು ಪಾಲನ್ನು ಹೊಂದುವ ನಿರೀಕ್ಷೆಯಿದೆ ಎಂದು ಬ್ಲೂಮ್‌ಬರ್ಗ್ ಸೋಮವಾರ ವರದಿ ಮಾಡಿದೆ. ಶೇ. 50ಕ್ಕಿಂತ ಹೆಚ್ಚು ಪಾಲು ರಿಲಯನ್ಸ್ ಪಾಲಾಗಲಿದ್ದು, ಅಮೆರಿಕದ ಮನರಂಜನಾ ದೈತ್ಯ ಕಂಪನಿ ಡಿಸ್ನಿ ಸ್ವಲ್ಪ ಪಾಲನ್ನು ಮಾತ್ರ ಉಳಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
 

Latest Videos


ಭಾರತದ ಡಿಸ್ನಿ ಉದ್ಯಮ ಸುಮಾರು 10 ಬಿಲಿಯನ್‌ ಡಾಲರ್‌ ಮೌಲ್ಯದ್ದು ಎನ್ನಲಾಗಿದ್ದು, ಈ ಪೈಕಿ ರಿಲಯನ್ಸ್ ಸುಮಾರು 7 ಬಿಲಿಯನ್ ಡಾಲರ್‌ನಿಂದ 8 ಬಿಲಿಯನ್ ಡಾಲರ್‌ನಷ್ಟು ಆಸ್ತಿಯನ್ನು ಖರೀದಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.
 

ಇನ್ನು, ಈ ಸ್ವಾಧೀನವನ್ನು ರಿಲಯನ್ಸ್‌ ಹಾಗೂ ಡಿಸ್ನಿ ಕಂಪನಿಗಳು ಮುಂದಿನ ತಿಂಗಳು ಘೋಷಿಸುವ ನಿರೀಕ್ಷೆಯಿದೆ. ಒಪ್ಪಂದದ ಪ್ರಕಾರ ರಿಲಯನ್ಸ್‌ನ ಕೆಲವು ಮಾಧ್ಯಮ ಘಟಕಗಳನ್ನು ಡಿಸ್ನಿ ಸ್ಟಾರ್‌ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ. 

ಇಲ್ಲಿಯವರೆಗೆ, ಒಪ್ಪಂದ ಅಥವಾ ಮೌಲ್ಯಮಾಪನದ ಬಗ್ಗೆ ಯಾವುದೇ ಒಮ್ಮತವಿಲ್ಲ. ಇನ್ನು, ಈ ವಹಿವಾಟು  ಪೂರ್ಣಗೊಂಡ ನಂತರ ಡಿಸ್ನಿ ಭಾರತೀಯ ಕಂಪನಿಯಲ್ಲಿ  ಸ್ವಲ್ಪ ಸಮಯದವರೆಗೆ ಅಲ್ಪ ಷೇರುಗಳ ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳಲು ಆಯ್ಕೆ ಮಾಡಬಹುದು.
 

ಮನರಂಜನಾ ಉದ್ಯಮದಲ್ಲಿ ಬೆಳೆಯುತ್ತಿರುವ ಅಂಬಾನಿ ಸಾಮ್ರಾಜ್ಯ 
2022ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು 2.7 ಬಿಲಿಯನ್‌ ಡಾಲರ್‌ಗೆ ಸ್ಟ್ರೀಮ್ ಮಾಡುವ ಒಪ್ಪಂದವನ್ನು ಅಂಬಾನಿ ಪಡೆದುಕೊಂಡಿದ್ದರು. ಈಗ ಡಿಸ್ನಿ ಇಂಡಿಯಾದಲ್ಲಿನ ಪಾಲನ್ನು ಸ್ವಾಧೀನಪಡಿಸಿಕೊಳ್ಳುವುದು ಭಾರತದ ಮನರಂಜನಾ ಉದ್ಯಮದಲ್ಲಿ ಅಂಬಾನಿಯವರ ಬೆಳೆಯುತ್ತಿರುವ ಪ್ರಭಾವದ ಮೇಲೆ ಬೆಳಕು ಚೆಲ್ಲುತ್ತದೆ. ಐಪಿಎಲ್ ಒಪ್ಪಂದದ ಬಳಿಕ ರಿಲಯನ್ಸ್‌ನ ಜಿಯೋ ಸಿನಿಮಾ ಪ್ಲಾಟ್‌ಫಾರ್ಮ್ ಈ ವರ್ಷ ಹೆಚ್ಚು ಜನಪ್ರಿಯವಾಗಿರುವ ದೇಶೀಯ ಕ್ರಿಕೆಟ್ ಪಂದ್ಯಾವಳಿಯನ್ನು ಉಚಿತವಾಗಿ ಪ್ರಸಾರ ಮಾಡಲು ಆಯ್ಕೆ ಮಾಡಿದೆ.

ಈ ಹಿಂದೆ ಡಿಸ್ನಿ ಬಳಿಯಲ್ಲಿದ್ದ ವಾರ್ನರ್ ಬ್ರದರ್ಸ್ ಡಿಸ್ಕವರಿ ಇಂಕ್‌ನ HBO ಶೋಗಳನ್ನು ಭಾರತದಲ್ಲಿ ಪ್ರಸಾರ ಮಾಡಲು ರಿಲಯನ್ಸ್ ಈಗಾಗಲೇ ಹಲವು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಇನ್ನೊಂದೆಡೆ, ಭಾರತದ ಮನರಂಜನಾ ಉದ್ಯಮದಲ್ಲಿ ಡಿಸ್ನಿ ಸ್ಟಾರ್‌ ನಷ್ಟ ಅನುಭವಿಸುತ್ತಿದ್ದು, ತನ್ನ ಸ್ವತ್ತನ್ನು ಮಾರಾಟ ಮಾಡಲು ಜುಲೈನಿಂದಲೇ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಆದರೂ, ಡಿಸ್ನಿ ಭಾರತದಲ್ಲಿ ಗಮನಾರ್ಹ ಲಾಭಗಳನ್ನು ಗಳಿಸುವುದನ್ನು ಮುಂದುವರೆಸಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಇತ್ತೀಚಿನ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಪಂದ್ಯವು ದಾಖಲೆಯ 4.3 ಕೋಟಿ ವೀಕ್ಷಕರನ್ನು ಗಳಿಸಿದ್ದು, ಇದು ಈ ತಿಂಗಳು ನಡೆದ ಹೆಚ್ಚು ನಿರೀಕ್ಷಿತ ಭಾರತ - ಪಾಕಿಸ್ತಾನ ಪಂದ್ಯದ 3.5 ಕೋಟಿ ವೀಕ್ಷಕರಿಗಿಂತ ಹೆಚ್ಚಾಗಿದೆ.

click me!