ಸಾಲ ಕೊಡಿಸುವ ನೆಪದಲ್ಲಿ ಹಲವು ಉದ್ಯಮಿಗಳಿಗೆ ವಂಚಿಸಿದ ಆರೋಪದ ಮೇಲೆ ಪೀಟರ್ ಡ್ಯಾಡಿ ಎಂಬಾತನ ನಿವಾಸದ ಮೇಲೆ ಸಿಐಡಿ ಆರ್ಥಿಕ ಅಪರಾಧ ದಳ ದಾಳಿ ನಡೆಸಿದೆ. ಆರೋಪಿಯು ಪ್ರೊಸೆಸಿಂಗ್ ಫೀ ಮತ್ತು ಕಮಿಷನ್ ಹೆಸರಿನಲ್ಲಿ ಹಣ ಪಡೆದು, ಹಣ ಕೇಳಿದವರ ಮೇಲೆ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದನು.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಉದ್ಯಮಿ ಜೊತೆಗೆ ಲಿಂಕ್ ಹೊಂದಿದ್ದ ವ್ಯಕ್ತಿಯೋರ್ವನ ಮನೆ ಮೇಲೆ ದಾಳಿ ಮಾಡಿ ತನಿಖೆ ನಡೆಸಿದ್ದಾರೆ. ಸಾಲ ಕೊಡಿಸುವುದಾಗಿ ನಂಬಿಸಿ ಹಲವು ಉದ್ಯಮಿಗಳನ್ನು ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ, ಸಿಐಡಿ ಆರ್ಥಿಕ ಅಪರಾಧ ದಳ (CID – Economic Offences Wing) ಬೆಂಗಳೂರು ನಗರದಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಕೋಲ್ಸ್ ಪಾರ್ಕ್ ಪ್ರದೇಶದಲ್ಲಿರುವ ಪೀಟರ್ ಡ್ಯಾಡಿ ಎಂಬಾತನ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಪೀಟರ್ ಡ್ಯಾಡಿ ವಿರುದ್ಧ ಸಾಲ ವ್ಯವಸ್ಥೆ ಮಾಡಿಕೊಡುವ ನೆಪದಲ್ಲಿ ಉದ್ಯಮಿಗಳಿಂದ ಹಣ ಪಡೆದು ವಂಚಿಸಿರುವ ಕುರಿತು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆ ಪ್ರಕರಣವನ್ನು ಸಿಐಡಿ ಆರ್ಥಿಕ ಅಪರಾಧ ದಳ ಕೈಗೆತ್ತಿಕೊಂಡಿದ್ದು, ತನಿಖೆಯ ಭಾಗವಾಗಿ ಇಂದು ಬೆಳಗ್ಗೆ ದಾಳಿ ನಡೆಸಲಾಗಿದೆ.
26
ಸಾಲ ಕೊಡಿಸುವ ನೆಪದಲ್ಲಿ ಚೆಕ್ ಶ್ಯೂರಿಟಿ ಪಡೆದು ವಂಚನೆ
ಪೀಟರ್ ಡ್ಯಾಡಿ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲೋನ್ ಕೊಡಿಸುವುದಾಗಿ ನಂಬಿಸಿ, ಚೆಕ್ ಶ್ಯೂರಿಟಿ ಪಡೆದು, ಇದರ ಜೊತೆಗೆ ಪ್ರೊಸೆಸಿಂಗ್ ಫೀ, ಲ್ಯಾಂಡ್ ಡೀಲ್ ಹಾಗೂ ಕಮಿಷನ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದಾನೆ. ಆದರೆ ಹಣ ಪಡೆದ ಬಳಿಕ ಲೋನ್ ವ್ಯವಸ್ಥೆ ಮಾಡಿಕೊಡದೇ ಉದ್ಯಮಿಗಳನ್ನು ವಂಚಿಸಿದ್ದಾನೆ ಎಂಬುದು ದೂರುದಾರರ ಆರೋಪವಾಗಿದೆ. ಇನ್ನೂ ಗಂಭೀರವಾಗಿ, ಉದ್ಯಮಿಗಳು ತಮ್ಮ ಹಣವನ್ನು ವಾಪಸ್ ಕೇಳಿದಾಗ, ಪೀಟರ್ ಡ್ಯಾಡಿ ಅವರುಗಳ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿ ಕಾನೂನು ಕಾಟ ನೀಡುತ್ತಿದ್ದಾನೆ ಎಂಬ ಆರೋಪವೂ ದೂರುಗಳಲ್ಲಿ ಉಲ್ಲೇಖವಾಗಿದೆ.
36
ಹಲವು ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲು
ಪೀಟರ್ ಡ್ಯಾಡಿ ವಿರುದ್ಧ ಬೆಂಗಳೂರು ನಗರದ ಅಶೋಕನಗರ, ಹಲಸೂರು, ಬೆಳ್ಳಂದೂರು, ಜೀವನ್ ಭೀಮಾನಗರ, ಪುಲಕೇಶಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿದ ನಂತರ, ಹೆಚ್ಚಿನ ತನಿಖೆಗಾಗಿ ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾವಣೆ ಮಾಡಲಾಗಿತ್ತು.
ಪೀಟರ್ ಡ್ಯಾಡಿ ವಿರುದ್ಧ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮೊದಲ ದೂರು ದಾಖಲಾಗಿತ್ತು. ಪುಲಕೇಶಿನಗರ ಠಾಣೆಯಲ್ಲಿ ಸುಬ್ಬರಾವ್ ಎಂಬ ವ್ಯಕ್ತಿ ದೂರು ನೀಡಿದ್ದು, 300 ಎಕರೆ ಜಮೀನಿನ ದಾಖಲೆಗಳನ್ನು ಸರಿಪಡಿಸಿ, ಖಾತೆ ಬದಲಾವಣೆ ಮಾಡಿಕೊಟ್ಟು ನಂತರ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ಪೀಟರ್ ಡ್ಯಾಡಿ ನಂಬಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
56
ಸುಳ್ಳು ಚೆಕ್ ಬೌನ್ಸ್ ಪ್ರಕರಣ
ಈ ಕೆಲಸಕ್ಕಾಗಿ ಪೀಟರ್ ಡ್ಯಾಡಿ ಸುಬ್ಬರಾವ್‌ನಿಂದ 96 ಲಕ್ಷ 50 ಸಾವಿರ ರೂಪಾಯಿ ಹಣವನ್ನು ಪಡೆದಿದ್ದಾನೆ ಎನ್ನಲಾಗಿದೆ. ಆದರೆ ಕೆಲಸ ಮಾಡಿಕೊಡದೇ ಹಣ ವಂಚಿಸಿದ್ದಾನೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಕಮಿಷನ್ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಸುಬ್ಬರಾವ್‌ನಿಂದ ಚೆಕ್ ಪಡೆದು, ನಂತರ ಅದನ್ನೇ ಆಧಾರ ಮಾಡಿಕೊಂಡು ದೂರುದಾರರ ವಿರುದ್ಧ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾನೆ ಎಂಬ ಆರೋಪವೂ ಇದೆ.
66
ಸಿಐಡಿ ಆರ್ಥಿಕ ಅಪರಾಧ ದಳದಿಂದ ದಾಳಿ
ಈ ಎಲ್ಲಾ ಪ್ರಕರಣಗಳ ಹಿನ್ನೆಲೆ ಸಿಐಡಿ ಆರ್ಥಿಕ ಅಪರಾಧ ದಳ ತನಿಖೆಯನ್ನು ತೀವ್ರಗೊಳಿಸಿದ್ದು, ಫೆಬ್ರವರಿ 10ರಂದು ಪೀಟರ್ ಡ್ಯಾಡಿ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರೆ ಪುರಾವೆಗಳಿಗಾಗಿ ಪರಿಶೀಲನೆ ನಡೆಸಿದೆ. ಸದ್ಯ ಸಿಐಡಿ ಅಧಿಕಾರಿಗಳಿಂದ ವಿಚಾರಣೆ ಮತ್ತು ದಾಖಲೆ ಪರಿಶೀಲನೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.