ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದ ಬೆನ್ನಲ್ಲೇ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೆನ್ನಮ್ಮ ಆಸ್ಪತ್ರೆ ಸೇರುವ ಮೂರು ದಿನಗಳ ಹಿಂದಿನ ವಿಡಿಯೋ ಅದಾಗಿದ್ದು, ನೋಡುಗರ ಕಣ್ಣಾಲೆಗಳನ್ನ ಒದ್ದೆ ಮಾಡುತ್ತಿದೆ...
ಬದುಕಿನ ದಾರಿಯಲ್ಲಿ ಏಳು ದಶಕಗಳ ಕಾಲ ಹೆಜ್ಜೆಗೆ ಹೆಜ್ಜೆಯಾಗಿ ನಡೆದವರು.. ಸುಖದಲ್ಲೂ, ಕಷ್ಟದಲ್ಲೂ ನೆರಳಿನಂತೆ ಪತಿಯ ಬೆನ್ನಿಗೆ ನಿಂತವರು.. ಕನ್ನಡ ನಾಡಿನ 'ದೊಡ್ಡಗೌಡರ' ಬದುಕಿನ ಶಕ್ತಿಯಾಗಿದ್ದ ಚೆನ್ನಮ್ಮ ಅವರು ಇಂದು ನೆನಪು ಮಾತ್ರ. ಆದರೆ, ಅವರು ದೈಹಿಕವಾಗಿ ಮರೆಯಾಗುವ ಕೇವಲ ಮೂರು ದಿನಗಳ ಮುನ್ನ ನಡೆದ ಆ ಒಂದು ದೃಶ್ಯ ಮಾತ್ರ ಈಗ ಕೋಟ್ಯಂತರ ಕನ್ನಡಿಗರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದೆ.
26
ಆದರ್ಶ ದಂಪತಿಯ ಕೊನೆಯ ಆಪ್ತ ಕ್ಷಣಗಳು
ಅನಾರೋಗ್ಯದಿಂದ ಆಸ್ಪತ್ರೆ ಸೇರುವ ಕೇವಲ ಮೂರು ದಿನಗಳ ಮೊದಲು ಚಿತ್ರೀಕರಿಸಲಾದ ಈ ವಿಡಿಯೋ, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಂಥವರ ಹೃದಯವನ್ನೂ ಚುಚ್ಚುವಂತಿದೆ. ಎದುರು ಬದರು ವೀಲ್ ಚೇರ್ ಮೇಲೆ ಕುಳಿತಿರುವ ಆ ಹಿರಿಯ ಜೀವಗಳು, ಪರಸ್ಪರ ಕಣ್ಣಲ್ಲೇ ಮಾತನಾಡಿಕೊಳ್ಳುತ್ತಿರುವ ದೃಶ್ಯ "ಪ್ರೀತಿ ಎಂದರೆ ಹೀಗಿರಬೇಕು" ಎಂಬುದಕ್ಕೆ ಸಾಕ್ಷಿಯಂತಿದೆ.
36
ನಾನಿದ್ದೇನೆ.. ಹೆದರಬೇಡ: ಗೌಡರ ಆ ಅಭಯ ಹಸ್ತ!
ವಿಡಿಯೋದಲ್ಲಿ ಚೆನ್ನಮ್ಮ ಅವರು ಸ್ವಲ್ಪ ಆಹಾರ ಸೇವಿಸುತ್ತಿರುತ್ತಾರೆ. ಎದುರಿಗೆ ಕುಳಿತಿರುವ ದೇವೇಗೌಡರು, ಮುಗುಳ್ನಗುತ್ತಲೇ ತಮ್ಮ ಪ್ರೀತಿಯ ಪತ್ನಿಯ ಬಲಗೈಯನ್ನು ಹಿಡಿದು ಸವರುತ್ತಾರೆ. "ಏನೂ ಆಗಲ್ಲ, ಧೈರ್ಯವಾಗಿರು" ಎಂದು ಕೈತಟ್ಟುತ್ತಾ ಅಭಯ ನೀಡುತ್ತಾರೆ. ಅಷ್ಟಕ್ಕೇ ನಿಲ್ಲದ ಗೌಡರು, ಪತ್ನಿಯ ಭುಜದ ಮೇಲೆ ಮೆಲ್ಲಗೆ ಕೈಹಾಕಿ ಸಮಾಧಾನಪಡಿಸುತ್ತಾರೆ. ಏಳು ದಶಕಗಳ ಕಾಲ ತನ್ನನ್ನು ಕಾಯ್ದ ತಾಯಿಗೆ, ಆಪತ್ಕಾಲದಲ್ಲಿ ಮಗನಂತೆ ಬೆಂಬಲವಾಗಿ ನಿಂತ ಗೌಡರ ಆ ಪ್ರೀತಿ ಮೈ ಜುಂ ಎನ್ನುವಂತಿದೆ.
ಚೆನ್ನಮ್ಮನವರಿಗೆ ಹಣ್ಣು ತಿನ್ನಲು ಸ್ವಲ್ಪ ಕಷ್ಟವಾದಾಗ, ದೇವೇಗೌಡರು ತಾವೇ ಕೈಯಿಂದ ಸಹಾಯ ಮಾಡುತ್ತಾರೆ. ಆದರೆ, ಅಷ್ಟೊಂದು ಅಶಕ್ತತೆಯಲ್ಲೂ ಚೆನ್ನಮ್ಮನವರಿಗೆ ಪತಿಯ ಮೇಲಿನ ಕಾಳಜಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ದೇವೇಗೌಡರ ಪಂಚೆಯ ಮೇಲೆ ಬಿದ್ದಿದ್ದ ಸಣ್ಣ ದೂಳು ಅಥವಾ ಆಹಾರದ ಕಣವನ್ನು ಕಂಡ ತಕ್ಷಣ, ತಮ್ಮ ನಡುಗುವ ಕೈಗಳಿಂದಲೇ ಅದನ್ನು ಸವರುತ್ತಾ ಕ್ಲೀನ್ ಮಾಡುತ್ತಾರೆ. ಜೀವನದುದ್ದಕ್ಕೂ ಪತಿಯನ್ನು ಅಚ್ಚುಕಟ್ಟಾಗಿ ನೋಡಿಕೊಂಡ ಆ ತಾಯಿಯ ಗುಣಕ್ಕೆ ಬೆಲೆ ಕಟ್ಟಲು ಸಾಧ್ಯವೇ?
56
ಹೃದಯ ಹಿಂಡುವ ನಮಸ್ಕಾರ!
ಈ ಎಲ್ಲದಕ್ಕಿಂತ ಹೆಚ್ಚಾಗಿ ನೋಡುಗರ ಎದೆಯಲ್ಲಿ ಭಾರವಾಗುವುದು ವಿಡಿಯೋದ ಕೊನೆಯ ಕ್ಷಣ. ತಾವು ಕುಳಿತಿದ್ದ ವೀಲ್ ಚೇರ್‌ನಿಂದಲೇ ಬಾಗಿ, ಪತಿ ದೇವೇಗೌಡರ ಕಾಲುಗಳನ್ನ ಮುಟ್ಟಿ ಚೆನ್ನಮ್ಮ ನಮಸ್ಕರಿಸುತ್ತಾರೆ. ಬಹುಶಃ ಆ ತಾಯಿಗೆ ತಾನು ಮರೆಯಾಗುತ್ತೇನೆ ಎಂಬ ಸಣ್ಣ ಸುಳಿವು ಸಿಕ್ಕಿತ್ತೇನೋ? ಅಥವಾ ಮುಂದಿನ ಜನ್ಮದಲ್ಲೂ ನೀವೇ ಪತಿಯಾಗಿ ಸಿಗಲಿ ಎಂಬ ಮೌನ ಪ್ರಾರ್ಥನೆಯೋ? ಆ ಪಾದ ನಮಸ್ಕಾರದ ದೃಶ್ಯ ಈಗ ಎಂಥವರ ಕಣ್ಣಲ್ಲೂ ನೀರು ತರಿಸುತ್ತಿದೆ.
66
ಹೋಗಿ ಬನ್ನಿ ಚೆನ್ನಮ್ಮಮ್ಮ.. ನಿಮ್ಮ ಈ ಪ್ರೀತಿ ಎಂದಿಗೂ ಅಮರ..
ಚೆನ್ನಮ್ಮ ಅವರು ಈಗ ಇಲ್ಲದಿರಬಹುದು. ಆದರೆ, ವೀಲ್ ಚೇರ್ ಮೇಲೆ ಕುಳಿತು ಒಬ್ಬರಿಗೊಬ್ಬರು ಸಾಂತ್ವನ ನೀಡಿದ, ಪರಸ್ಪರರ ಕೈಹಿಡಿದು ಬೆಚ್ಚಗೆ ಸವರಿದ ಈ ದೃಶ್ಯಗಳು ಮಾತ್ರ ಇತಿಹಾಸದಲ್ಲಿ ಉಳಿಯಲಿವೆ. ರಾಜಕೀಯದ ಏಳು-ಬೀಳುಗಳ ನಡುವೆ, ಪ್ರೀತಿ ಮತ್ತು ನಿಷ್ಠೆಯ ಸುಂದರ ಕಾವ್ಯದಂತೆ ಬದುಕಿದ ಈ ದಂಪತಿಗಳಿಗೆ ಇಡೀ ನಾಡು ಇಂದು ಕಣ್ಣೀರಿನ ವಿದಾಯ ಕೋರುತ್ತಿದೆ.