ಬೆಳಗಾವಿಯಲ್ಲಿ ಭಾರೀ ಅನಾಹುತ; ಹುಣಸೆ ಮರ ದುರಂತದಿಂದ 4 ಕುಟುಂಬ ಪಾರಾಗಿದ್ದೇ ಪವಾಡ

Published : Jul 05, 2026, 10:11 AM IST

ಬೆಳಗಾವಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಖಾಸಬಾಗ ಪ್ರದೇಶದಲ್ಲಿ ಬೃಹತ್ ಹುಣಸೆ ಮರವೊಂದು ನಾಲ್ಕು ಮನೆಗಳ ಮೇಲೆ ಉರುಳಿಬಿದ್ದಿದೆ. ಈ ಘಟನೆಯಲ್ಲಿ ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

PREV
15
ತಪ್ಪಿದ ಭಾರೀ ಅನಾಹುತ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ನಗರದ ಖಾಸಬಾಗ ಪ್ರದೇಶದಲ್ಲಿ ಬೃಹತ್ ಮರವೊಂದು ಮನೆಗಳ ಮೇಲೆ ಉರುಳಿ ಬಿದ್ದಿದ್ದು, ಭಾರಿ ಹಾನಿ ಅನಾಹುತ ಸಂಭವಿಸಿದೆ.

25
ಘಟನೆಯ ವಿವರ

ಬೆಳಗಾವಿ ನಗರದ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಇಲ್ಲಿನ ಹಳೆಯ ಬೃಹತ್ ಹುಣಸೆ ಮರವೊಂದು ಬೇರು ಸಮೇತ ಕಿತ್ತು ಧರೆಗುರುಳಿದೆ. ಮರವು ನೇರವಾಗಿ ಪಕ್ಕದಲ್ಲಿದ್ದ ನಾಲ್ಕು ಮನೆಗಳ ಮೇಲೆ ಬಿದ್ದಿದ್ದು, ಮನೆಗಳ ಮೇಲ್ಛಾವಣಿ ಹಾಗೂ ಗೋಡೆಗಳು ಕುಸಿದಿವೆ.

35
ಅದೃಷ್ಟವಶಾತ್ ಪಾರಾದ ಕುಟುಂಬಸ್ಥರು

ಮರ ಬೀಳುವ ಸಂದರ್ಭದಲ್ಲಿ ಮನೆಯೊಳಗೆ ನಿವಾಸಿಗಳು ಇದ್ದರಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅನಿಲ್ ಮುಟ್ಟೇಕರ್, ಆನಂದ ಭದ್ವಾಂಕರ್, ಏಕನಾಥ ಭದ್ವಾಂಕರ್ ಮತ್ತು ಪ್ರಶಾಂತ ಗೋರ್ಲೆ ಎಂಬುವವರಿಗೆ ಸೇರಿದ ಮನೆಗಳು ಜಖಂಗೊಂಡಿವೆ. ಮರ ಬಿದ್ದ ರಭಸಕ್ಕೆ ಮನೆಯಲ್ಲಿದ್ದ ಪೀಠೋಪಕರಣಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳು ಪುಡಿಯಾಗಿವೆ.

45
ಪರಿಹಾರಕ್ಕಾಗಿ ಸಂತ್ರಸ್ತರ ಆಗ್ರಹ

ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿರುವ ನಾಲ್ಕು ಕುಟುಂಬಗಳು ಈಗ ದಿಕ್ಕು ತೋಚದಂತಾಗಿವೆ. ಮಳೆಯ ನಡುವೆಯೇ ಆಶ್ರಯ ಕಳೆದುಕೊಂಡಿರುವ ಸಂತ್ರಸ್ತರು, ನಮಗೆ ಉಂಟಾಗಿರುವ ನಷ್ಟಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು" ಎಂದು ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.

55
ತೆರವು ಕಾರ್ಯಾಚರಣೆ

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಶಹಾಪುರ ಪೊಲೀಸರು ಧಾವಿಸಿದ್ದಾರೆ. ಮನೆಗಳ ಮೇಲೆ ಬಿದ್ದಿರುವ ಬೃಹತ್ ಮರದ ರೆಂಬೆಗಳನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಬೆಳಗಾವಿಯಲ್ಲಿ ಮಳೆ ಮುಂದುವರಿದಿದ್ದು, ಹಳೆಯ ಕಟ್ಟಡ ಹಾಗೂ ಮರಗಳ ಪಕ್ಕದಲ್ಲಿರುವ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

Read more Photos on
click me!

Recommended Stories