
ಗದಗ: ಬೆಟಗೇರಿ ಸಮೀಪದ ನರಸಾಪುರ ಗ್ರಾಮದಲ್ಲಿ ಬುಧವಾರ ಯುವತಿಯೊಬ್ಬಳ ಮೇಲೆ ಆ್ಯಸಿಡ್ ದಾಳಿಯಾಗಿದೆ ಎಂಬ ಸುದ್ದಿಯಾಗಿ ಅವಳಿ ನಗರದಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಇದು ಆ್ಯಸಿಡ್ ದಾಳಿಯಲ್ಲ, ಬದಲಾಗಿ ಕಸದ ರಾಶಿಯಲ್ಲಿ ಬಿದ್ದಿದ್ದ ಏರ್ ಫ್ರೆಶ್‌ನರ್ ಕ್ಯಾನ್ ಸ್ಫೋಟಗೊಂಡಿದ್ದರಿಂದ ಸಂಭವಿಸಿದ ಅವಘಡ ಎಂದು ಸ್ಪಷ್ಟಪಡಿಸಿದ ನಂತರ ಜನರಲ್ಲಿನ ಆತಂಕಕ್ಕೆ ತೆರೆ ಬಿತ್ತು.
ನರಸಾಪುರ ಗ್ರಾಮದ ಸಮೀಪದಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗಿತ್ತು. ಈ ಕಸದ ರಾಶಿಯಲ್ಲಿ ಬಿದ್ದಿದ್ದ ಏರ್ ಫ್ರೆಶ್‌ನರ್ ಕ್ಯಾನ್, ಬೆಂಕಿಯ ಶಾಖ ಮತ್ತು ಒತ್ತಡಕ್ಕೆ ಸಿಲುಕಿ ಏಕಾಏಕಿ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಯುವತಿಯ ಮೇಲೆ ಕ್ಯಾನ್‌ನಲ್ಲಿದ್ದ ದ್ರವ ಸಿಡಿದು ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ಯಾವುದೇ ಆ್ಯಸಿಡ್ ಅಂಶ ಪತ್ತೆಯಾಗಿಲ್ಲ ಎಂದು ಎಸ್ಪಿ ರೋಹನ್ ಜಗದೀಶ ಖಚಿತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸ್ಥಳೀಯ ಅಪರಾಧ ವಿಭಾಗದ ಪರಿಣಿತ ಅಧಿಕಾರಿಗಳು ಸ್ಥಳದಲ್ಲಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಆ್ಯಸಿಡ್ ದಾಳಿಯಲ್ಲ ಎಂಬುದು ದೃಢಪಟ್ಟಿದೆ.
ಆದರೆ ಈ ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳು ಯುವತಿಯು, ಅಲ್ತಾಫ್ ಎಂಬ ಯುವಕ ಉದ್ದೇಶಪೂರ್ವಕವಾಗಿ ಆ ವಸ್ತುವನ್ನು ಅಲ್ಲಿ ಇರಿಸಿದ್ದರಿಂದಲೇ ತನಗೆ ಗಾಯಗಳಾಗಿವೆ ಎಂದು ಆರೋಪಿಸಿದ್ದಾಳೆ. ಯುವತಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಅಲ್ತಾಫ್ ಎಂಬಾತನನ್ನು ಬಂಧಿಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತುರ್ತು ಸಂಪುಟ ಸಭೆ ತೀರ್ಮಾನ : ಜಿ ರಾಮ್ ಜಿ ವಿರುದ್ಧ 22ರಿಂದ ಸಮರಾಧಿವೇಶನ
ಸ್ಥಳದಲ್ಲಿ ಯಾವುದೇ ಆ್ಯಸಿಡ್ ಪತ್ತೆಯಾಗಿಲ್ಲ. ಏರ್ ಫ್ರೆಶ್‌ನರ್ ಕ್ಯಾನ್ ಸ್ಫೋಟಗೊಂಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ ಯುವತಿಯ ದೂರಿನನ್ವಯ ಓರ್ವ ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ₹1000+ ಕೋಟಿ ಸೈಬರ್ ವಂಚನೆ : ಸ್ವಾಮೀಜಿ.ಕಾಂ, ನಿಯೋ ಸಿಸ್ಟಮ್ ಹೆಸರಲ್ಲಿ ಜಾಲ ಪತ್ತೆ