
ನ್ಯೂಯಾರ್ಕ್: ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋತು ಪ್ರಶಸ್ತಿ ಕೈಚೆಲ್ಲಿದ ಬೆನ್ನಲ್ಲೇ ಹಾಲಿ ಚಾಂಪಿಯನ್ ಅರ್ಜೆಂಟೀನಾ ಆಟಗಾರರು ಮೈದಾನದಲ್ಲಿ ದೊಡ್ಡ ಗಲಾಟೆ ಮಾಡಿದ್ದಾರೆ. ಪಂದ್ಯ ಮುಗಿದ ನಂತರ ಸ್ಪೇನ್ ಆಟಗಾರರ ಜೊತೆ ಅರ್ಜೆಂಟೀನಾ ಆಟಗಾರರು ಕೈ ಕೈ ಮಿಲಾಯಿಸಿದ್ದರಿಂದ ಫುಟ್ಬಾಲ್ ಫೈನಲ್ ಅಕ್ಷರಶಃ ರಣರಂಗವಾಗಿತ್ತು. ಪಂದ್ಯದ ವೇಳೆ ಎಂಜೊ ಫೆರ್ನಾಂಡೆಜ್‌ಗೆ ರೆಡ್ ಕಾರ್ಡ್ ಸಿಕ್ಕಿತ್ತು. ಆದರೆ, ಆಟ ಮುಗಿದ ಮೇಲೆ ನಡೆದ ಗಲಾಟೆಯಲ್ಲಿ ಅರ್ಜೆಂಟೀನಾದ ಇನ್ನೊಬ್ಬ ಆಟಗಾರನಿಗೂ ರೆಡ್ ಕಾರ್ಡ್ ನೀಡಲಾಯಿತು. ಈ ನಾಟಕೀಯ ದೃಶ್ಯಗಳ ನಡುವೆ ಇದು ಹೆಚ್ಚಿನವರ ಕಣ್ಣಿಗೆ ಬೀಳಲೇ ಇಲ್ಲ.
ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ, ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಬಾರ್ಸಿಲೋನಾ ಆಟಗಾರ ಫೆರಾನ್ ಟೊರೆಸ್ ಗಳಿಸಿದ ಗೋಲಿನಿಂದ ಸ್ಪೇನ್ 1-0 ಅಂತರದಲ್ಲಿ ಚಾಂಪಿಯನ್ ಆಯ್ತು. ಇದರೊಂದಿಗೆ, ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯ ಕಣ್ಣೀರಿನಲ್ಲಿ ಕೊನೆಗೊಂಡಿತು. 2010ರ ನಂತರ ಸ್ಪೇನ್ ಗೆಲ್ಲುತ್ತಿರುವ ಎರಡನೇ ವಿಶ್ವಕಪ್ ಇದಾಗಿದೆ.
ಪಂದ್ಯದ ನಿಗದಿತ ಸಮಯದ ಇಂಜುರಿ ಟೈಮ್‌ನಲ್ಲಿ ಸ್ಪೇನ್ ಡಿಫೆಂಡರ್ ಪೌ ಕ್ಯುಬಾರ್ಸಿ ಅವರನ್ನು ಕೆಟ್ಟದಾಗಿ ಫೌಲ್ ಮಾಡಿದ್ದಕ್ಕೆ ಅರ್ಜೆಂಟೀನಾ ಮಿಡ್‌ಫೀಲ್ಡರ್ ಎಂಜೊ ಫೆರ್ನಾಂಡೆಜ್ ರೆಡ್ ಕಾರ್ಡ್ ಪಡೆದು ಹೊರನಡೆದಿದ್ದರು. ಹೀಗಾಗಿ, ಅರ್ಜೆಂಟೀನಾ ಹತ್ತು ಆಟಗಾರರೊಂದಿಗೆ ಹೆಚ್ಚುವರಿ ಸಮಯ ಆಡಿತ್ತು. ಆದರೆ, ಅಸಲಿ ನಾಟಕ ಶುರುವಾಗಿದ್ದೇ ಫೈನಲ್ ವಿಸಿಲ್ ನಂತರ. ಸ್ಪೇನ್ ಆಟಗಾರರು ಗೆಲುವಿನ ಸಂಭ್ರಮದಲ್ಲಿದ್ದಾಗ, ಸೋಲಿನ ಹತಾಶೆಯಲ್ಲಿದ್ದ ಅರ್ಜೆಂಟೀನಾ ಆಟಗಾರರು ಸ್ಪೇನ್ ಬೆಂಚ್ ಕಡೆ ನುಗ್ಗಿದರು.
ಅರ್ಜೆಂಟೀನಾ ಆಟಗಾರ ಲಿಯಾಂಡ್ರೊ ಪೆರೇಡೆಸ್, ಸ್ಪೇನ್‌ನ ಎರಿಕ್ ಗಾರ್ಸಿಯಾ ಮತ್ತು ಗಾವಿ ಅವರನ್ನು ತಳ್ಳಿ, ಇನ್ನೊಬ್ಬ ಸ್ಪೇನ್ ಆಟಗಾರನ ಕುತ್ತಿಗೆಗೆ ಕೈ ಹಾಕಿದರು. ಇದರಿಂದಾಗಿ, ಪಂದ್ಯ ಮುಗಿದಿದ್ದರೂ ರೆಫರಿ ಪೆರೇಡೆಸ್‌ಗೆ ನೇರವಾಗಿ ರೆಡ್ ಕಾರ್ಡ್ ತೋರಿಸಿದರು. ಇದಕ್ಕೂ ಮುನ್ನ, ಎರಡನೇಾರ್ಧದಲ್ಲಿ ಬದಲಿ ಆಟಗಾರನಾಗಿ ಬಂದ ಕೂಡಲೇ ಪೆರೇಡೆಸ್ ಫೌಲ್ ಮಾಡಿದ್ದಕ್ಕೆ ಯೆಲ್ಲೋ ಕಾರ್ಡ್ ಪಡೆದಿದ್ದರು.
ಮೈದಾನದಲ್ಲಿದ್ದ ಗದ್ದಲದಲ್ಲಿ ಈ ಎರಡನೇ ರೆಡ್ ಕಾರ್ಡ್ ಹೆಚ್ಚಿನವರ ಗಮನಕ್ಕೆ ಬರಲಿಲ್ಲ. ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಲೋನಿ, ಸ್ಪೇನ್ ಆಟಗಾರರತ್ತ ಕೂಗಾಡುತ್ತಾ ನುಗ್ಗಿದಾಗ, ಸ್ಪೇನ್ ಆಟಗಾರರೊಬ್ಬರು ಅವರನ್ನು ತಡೆದರು. ಇದರ ಬೆನ್ನಲ್ಲೇ, ಅರ್ಜೆಂಟೀನಾ ಡಿಫೆಂಡರ್ ನಿಕೋಲಸ್ ಒಟಮೆಂಡಿ, ಸ್ಪೇನ್ ಆಟಗಾರ ರೋಡ್ರಿ ಜೊತೆ ಮೈದಾನದಲ್ಲೇ ವಾಗ್ವಾದಕ್ಕಿಳಿದರು.
ಇದನ್ನೂ ಓದಿ: ಫಿಫಾ ವಿಶ್ವಕಪ್ ರನ್ನರ್ ಅಪ್ ಅರ್ಜೆಂಟೀನಾಗೆ 317 ಕೋಟಿ, ಚಾಂಪಿಯನ್ ಸ್ಪೇನ್‌ಗೆ ಬಹುಮಾನ ಮೊತ್ತವೆಷ್ಟು?
ಪಂದ್ಯದುದ್ದಕ್ಕೂ ಸ್ಪೇನ್ ಅದ್ಭುತ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಅರ್ಜೆಂಟೀನಾ ತಂಡವು ಸ್ಪೇನ್‌ನ ದಾಳಿಯನ್ನು ತಡೆಯಲು ಹೆಚ್ಚಾಗಿ ಫೌಲ್‌ಗಳನ್ನೇ ಅವಲಂಬಿಸಿತ್ತು. 120 ನಿಮಿಷಗಳ ಆಟದಲ್ಲಿ ಅರ್ಜೆಂಟೀನಾ ಗೋಲ್‌ಪೋಸ್ಟ್‌ನತ್ತ ಒಂದೇ ಒಂದು ಶಾಟ್ ಹೊಡೆಯಲು ಆಗಲಿಲ್ಲ ಎನ್ನುವುದೇ ಅವರ ಕಳಪೆ ಆಟಕ್ಕೆ ಸಾಕ್ಷಿ. ಹೆಚ್ಚುವರಿ ಸಮಯದಲ್ಲಿ ಪೆಡ್ರೊ ಪೊರೊ ನೀಡಿದ ಕ್ರಾಸ್ ಅನ್ನು ನಿಕೊ ವಿಲಿಯಮ್ಸ್ ಹೆಡ್ ಮಾಡಿ ಪಾಸ್ ನೀಡಿದರು. ಅದನ್ನು ಫೆರಾನ್ ಟೊರೆಸ್ ಅರ್ಜೆಂಟೀನಾ ಗೋಲ್‌ಬಲೆಗೆ ಸೇರಿಸಿದರು. 'ಈ ಗೋಲು ನನ್ನದಲ್ಲ ಅಥವಾ ತಂಡದ 26 ಆಟಗಾರರದ್ದಲ್ಲ, ಇದು 4.7 ಕೋಟಿ ಸ್ಪೇನ್ ಜನರದ್ದು. ಫೈನಲ್‌ನಲ್ಲಿ ಮೆಸ್ಸಿ ವಿರುದ್ಧ ಆಡುವಾಗ ಸ್ವಲ್ಪ ಭಯ ಸಹಜ, ಆದರೆ ನಮ್ಮ ಆಟದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇತ್ತು' ಎಂದು ಪಂದ್ಯದ ನಂತರ ವಿಜಯದ ಗೋಲು ಗಳಿಸಿದ ಫೆರಾನ್ ಟೊರೆಸ್ ಹೇಳಿದರು.
Terrible, embarassing behaviour by the Argentinians after losing to a much better team. pic.twitter.com/VX1gtIGobF
— Rasmus Jarlov (@RasmusJarlov) July 19, 2026
ಪಂದ್ಯದ ನಂತರ, ಸೋಲಿನ ಭಾರದಿಂದ ಮೈದಾನದಲ್ಲಿ ನಿರಾಸೆಯಿಂದ ಕುಳಿತಿದ್ದ ಲಿಯೋನೆಲ್ ಮೆಸ್ಸಿ ಬಳಿ ಸ್ಪೇನ್‌ನ 19 ವರ್ಷದ ಯುವ ಆಟಗಾರ ಲ್ಯಾಮಿನೆ ಯಮಾಲ್ ಬಂದು ಸಮಾಧಾನ ಮಾಡಿ, ಅಪ್ಪಿಕೊಂಡ ದೃಶ್ಯ ಕ್ರೀಡಾಭಿಮಾನಿಗಳ ಮನಗೆದ್ದಿತು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ 80,663 ಪ್ರೇಕ್ಷಕರು ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಈ ಫೈನಲ್ ಪಂದ್ಯಕ್ಕೆ ಸಾಕ್ಷಿಯಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.