ವರ್ಷಕ್ಕೆ 1,775 ಕೋಟಿ ರುಪಾಯಿ ನೀಡಿ ರೊನಾಲ್ಡೋ ಸೆಳೆದುಕೊಂಡ ಸೌದಿ ಅರೇಬಿಯಾಗೇನು ಲಾಭ?

By Kannadaprabha News  |  First Published Jan 1, 2023, 11:57 AM IST

ಸೌದಿ ಕ್ಲಬ್‌ ಸೇರಿದ ಕ್ರಿಸ್ಟಿಯಾನೋ ರೊನಾಲ್ಡೋ ವರ್ಷಕ್ಕೆ 1775 ಕೋಟಿ ರುಪಾಯಿ
ಅಲ್‌-ನಸ್ರ್‌ ಫುಟ್ಬಾಲ್‌ ಕ್ಲಬ್‌ ಜೊತೆ 3 ವರ್ಷ ಒಪ್ಪಂದ
ವಿಶ್ವದ ಅತಿ ದುಬಾರಿ ಫುಟ್ಬಾಲಿಗ ಎನ್ನುವ ದಾಖಲೆಗೆ ಪಾತ್ರವಾದ ರೊನಾಲ್ಡೋ


ಲಂಡನ್‌(ಜ.01): ವಿಶ್ವ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರೆನಿಸಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಏಷ್ಯಾ ಫುಟ್ಬಾಲ್‌ಗೆ ಕಾಲಿಟ್ಟಿದ್ದು, ಸೌದಿ ಅರೇಬಿಯಾದ ಅಲ್‌-ನಸ್ರ್ ಕ್ಲಬ್‌ ಜೊತೆ 2025ರ ವರೆಗೂ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರೊನಾಲ್ಡೋಗೆ ವಾರ್ಷಿಕ 200 ಮಿಲಿಯನ್‌ ಯುರೋ(ಅಂದಾಜು 1775 ಕೋಟಿ ರು.) ವೇತನ ದೊರೆಯಲಿದೆ. ಇದರೊಂದಿಗೆ ವಿಶ್ವದ ಅತಿ ದುಬಾರಿ ಫುಟ್ಬಾಲಿಗ ಎನ್ನುವ ದಾಖಲೆಯನ್ನು 37 ವರ್ಷದ ರೊನಾಲ್ಡೋ ಬರೆಯಲಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವಕಪ್‌ ಗೆಲ್ಲದಿದ್ದರೂ ಅವರು ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ರೊನಾಲ್ಡೋ ಆಗಮನದಿಂದ ಸೌದಿ ಫುಟ್ಬಾಲ್‌ ಲೀಗ್‌ನ ಮೌಲ್ಯ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ಗಳಲ್ಲಿ ಸೌದಿಯ ಕೆಲ ಉದ್ಯಮಿಗಳು ತಂಡ ಹೊಂದಿದ್ದಾರೆ. ರೊನಾಲ್ಡೋ ಆಗಮನ ಮತ್ತಷ್ಟು ತಾರಾ ಫುಟ್ಬಾಲಿಗರನ್ನು ಸೌದಿ ಲೀಗ್‌ನತ್ತ ಅಕರ್ಷಿಸಲಿದೆ ಎನ್ನುವ ಲೆಕ್ಕಾಚಾರವೂ ಇದೆ. 2030ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಆತಿಥ್ಯಕ್ಕೆ ಸೌದಿ ಬಿಡ್‌ ಸಲ್ಲಿಸಲು ತಯಾರಿ ನಡೆಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ವಿಚಾರಗಳಿಂದ ಜಾಗತಿಕ ಮಟ್ಟದಲ್ಲಿ ಕಳೆದುಕೊಂಡಿರುವ ಗೌರವವನ್ನು ಫುಟ್ಬಾಲ್‌ ಮೂಲಕ ಮರಳಿ ಪಡೆಯುವುದು ಮೂಲ ಉದ್ದೇಶ ಎನ್ನಲಾಗಿದೆ.

Tap to resize

Latest Videos

undefined

ಅಲ್‌-ನಸ್ರ್ ಹಿಂಬಾಲಕರ ಸಂಖ್ಯೆ ದಿಢೀರ್‌ ಏರಿಕೆ!

ರೊನಾಲ್ಡೋ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಅಲ್‌-ನಸ್ರ್ ತಂಡದ ಹಿಂಬಾಲಕರ ಸಂಖ್ಯೆ ಭಾರೀ ಏರಿಕೆಯಾಗಿದೆ. ರೊನಾಲ್ಡೋ ಆಗಮನಕ್ಕೂ ಮೊದಲು ಇನ್‌ಸ್ಟಾಗ್ರಾಂನಲ್ಲಿ 8.4 ಲಕ್ಷ ಇದ್ದ ಹಿಂಬಾಲಕರ ಸಂಖ್ಯೆ ರೊನಾಲ್ಡೋ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ 40 ಲಕ್ಷ ದಾಟಿದೆ.

ಶನಿವಾರ ಅಲ್‌-ನಸ್ರ್ ಕ್ಲಬ್‌ ತನ್ನ ಸಾಮಾಜಿಕ ತಾಣಗಳ ಖಾತೆಗಳಲ್ಲಿ ರೊನಾಲ್ಡೋ ತಂಡದ ಜೆರ್ಸಿ ಹಿಡಿದಿರುವ ಫೋಟೋವನ್ನು ಹಾಕಿ, ‘ಇತಿಹಾಸ ರಚನೆಯಾಗಿದೆ. ಈ ಒಪ್ಪಂದ ಕೇವಲ ನಮ್ಮ ಕ್ಲಬ್‌ ದೊಡ್ಡ ಸಾಧನೆ ಮಾಡಲಷ್ಟೇ ಸ್ಫೂರ್ತಿ ನೀಡುವುದಿಲ್ಲ, ನಮ್ಮ ಲೀಗ್‌, ನಮ್ಮ ದೇಶ ಹಾಗೂ ಭವಿಷ್ಯದ ಪೀಳಿಗೆಗಳಿಗೆ ಹೊಸ ಎತ್ತರಕ್ಕೆ ಬೆಳೆಯಲು ಮಾದರಿಯಾಗಲಿದೆ’ ಎಂದು ಬರೆದಿದೆ.

Cristiano Ronaldo: ಮ್ಯಾಂಚೆಸ್ಟರ್‌ಗೆ ತೊರೆದು ಹೊಸ ಕ್ಲಬ್ ಸೇರಿದ ರೊನಾಲ್ಡೋ ವಾರ್ಷಿಕ ಸಂಬಳ 1770 ಕೋಟಿ ರುಪಾಯಿ..!

ಈ ಒಪ್ಪಂದದ ಬಗ್ಗೆ ರೊನಾಲ್ಡೋ ಸಹ ಪ್ರತಿಕ್ರಿಯೆ ನೀಡಿದ್ದು, ‘ನಾನು ಅದೃಷ್ಟವಂತ. ನನಗೆ ಎಲ್ಲವೂ ಸಿಕ್ಕಿದೆ. ಯುರೋಪಿನ ದೈತ್ಯ ತಂಡಗಳಲ್ಲಿ ಆಡಿದ ನನಗೆ ಇದೀಗ ಏಷ್ಯಾದಲ್ಲಿ ಆಡುವ ಅವಕಾಶ ಸಿಕ್ಕಿದ್ದು, ಹೊಸ ಅನುಭವಕ್ಕಾಗಿ ಉತ್ಸುಕಗೊಂಡಿದ್ದೇನೆ’ ಎಂದಿದ್ದಾರೆ.

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನ ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡುತ್ತಿದ್ದ ರೊನಾಲ್ಡೋ ತಂಡದ ಆಡಳಿತದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ತಂಡವು ಅವರ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿತು. ಇತ್ತೀಚೆಗೆ ಕತಾರ್‌ನಲ್ಲಿ ನಡೆದ ವಿಶ್ವಕಪ್‌ ವೇಳೆಯೇ ರೊನಾಲ್ಡೋ ಸೌದಿ ಕ್ಲಬ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ಸುದ್ದಿ ಹಬ್ಬಿತ್ತು.

ಎಂಬಾಪೆಗಿಂತ ದುಪ್ಪಟ್ಟು ವೇತನ!

ಕಿಲಿಯಾನ್‌ ಎಂಬಾಪೆ ಫ್ರಾನ್ಸ್‌ ಲೀಗ್‌ನಲ್ಲಿ ಪ್ಯಾರಿಸ್‌ ಸೇಂಟ್‌ ಜರ್ಮೈನ್‌(ಪಿಎಸ್‌ಜಿ) ಪರ ಆಡುತ್ತಿದ್ದು, ಅವರು ವಾರ್ಷಿಕ 9.09 ಕೋಟಿ ಯುರೋ(ಅಂದಾಜು 806 ಕೋಟಿ ರು.) ವೇತನ ಪಡೆಯುತ್ತಿದ್ದಾರೆ. ಈ ವರೆಗೂ ಫುಟ್ಬಾಲ್‌ ಕ್ಲಬ್‌ವೊಂದರಿಂದ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರ ಎನ್ನುವ ದಾಖಲೆ ಹೊಂದಿದ್ದರು. ರೊನಾಲ್ಡೋ ಆ ದಾಖಲೆ ಮುರಿಯಲಿದ್ದು, ಎಂಬಾಪೆಗಿಂತ ದುಪ್ಪಟ್ಟು ವೇತನ ಗಳಿಸಲಿದ್ದಾರೆ. ಇದಕ್ಕೂ ಮೊದಲು ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡುವಾಗ ರೊನಾಲ್ಡೋಗೆ ವಾರ್ಷಿಕ 620 ಕೋಟಿ ರು. ವೇತನ ಸಿಗುತ್ತಿತ್ತು. ಪಿಎಸ್‌ಜಿ ಪರ ಆಡುವ ಲಿಯೋನೆಲ್‌ ಮೆಸ್ಸಿ ವರ್ಷಕ್ಕೆ 339 ಕೋಟಿ ರು. ವೇತನ ಪಡೆಯುತ್ತಿದ್ದಾರೆ.

click me!