ಪಾಕ್‌ನಲ್ಲಿ ಆಶ್ರಯ ಪಡೆದ ಆಫ್ಘನ್‌ ಫುಟ್ಬಾಲ್‌ ಆಟಗಾರ್ತಿಯರು..!

By Kannadaprabha News  |  First Published Sep 16, 2021, 9:17 AM IST

* ಆಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಪಲಾಯನಗೊಂಡ ಮಹಿಳಾ ಫುಟ್ಬಾಲ್ ತಂಡ

* ಮಹಿಳೆಯರ ಕ್ರೀಡೆಗೆ ನಿಷೇಧ ಹೇರಿರುವ ಆಫ್ಘಾನ್‌ ತಾಲಿಬಾನ್ ಉಗ್ರರು

* ಮಾನವೀಯ ನೆಲೆಗಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಅವರಿಗೆ ತುರ್ತು ವೀಸಾಗಳನ್ನು ನೀಡಿದೆ


ಇಸ್ಲಾಮಾಬಾದ್‌(ಸೆ.16): ತಾಲಿಬಾನ್‌ನಿಂದ ಬೆದರಿಕೆಗಳ ಎದುರಿಸುತ್ತಿದ್ದ ಅಫ್ಘಾನಿಸ್ತಾನದ 32 ಫುಟ್ಬಾಲ್‌ ಆಟಗಾರ್ತಿಯರು ತಮ್ಮ ಕುಟುಂಬ ಸಮೇತ ಪಾಕಿಸ್ತಾನ ತಲುಪಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಅವರಿಗೆ ತುರ್ತು ವೀಸಾಗಳನ್ನು ನೀಡಿದೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ರಾಷ್ಟ್ರೀಯ ಜೂನಿಯರ್‌ ಬಾಲಕಿಯರ ತಂಡಕ್ಕೆ ಸೇರಿದ ಫುಟ್ಬಾಲ್‌ ಆಟಗಾರ್ತಿಯರು, ಆಫ್ಘನ್‌ ನಿರಾಶ್ರಿತರಿಗೆ ಆಶ್ರಯ ನೀಡಿರುವ 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ ಆತಿಥ್ಯ ವಹಿಸಲಿರುವ ಕತಾರ್‌ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ನಂತರ ಕತಾರ್‌ಗೆ ತೆರಳಲು ಸಾಧ್ಯವಾಗಿರಲಿಲ್ಲ. ತಾಲಿಬಾನ್‌ ಉಗ್ರರು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ ಫುಟ್ಬಾಲ್‌ ಆಟಗಾರ್ತಿಯರು, ಅವರಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದರು.

Latest Videos

undefined

ಆಸ್ಪ್ರೇಲಿಯಾಗೆ ವಲಸೆ ಹೋದ ಆಫ್ಟನ್‌ ಫುಟ್ಬಾಲ್‌ ಆಟಗಾರ್ತಿಯರು..!

ಬ್ರಿಟಿಷ್‌ ಮೂಲದ ಎನ್‌ಜಿಒ ಫುಟ್ಬಾಲ್‌ ಫಾರ್‌ ಪೀಸ್‌, ಅಲ್ಲಿನ ಸರ್ಕಾರ ಮತ್ತು ಪಾಕಿಸ್ತಾನ ಫುಟ್ಬಾಲ್‌ ಫೆಡರೇಷನ್‌(ಪಿಎಫ್‌ಎಫ್‌) ಸಹಯೋಗದೊಂದಿಗೆ 32 ಆಟಗಾರ್ತಿಯರನ್ನು ಪಾಕಿಸ್ತಾನಕ್ಕೆ ಕರೆತರಲು ಶ್ರಮ ವಹಿಸಿತ್ತು. ಫುಟ್ಬಾಲ್‌ ಆಟಗಾರ್ತಿಯರು ಪೇಶಾವರದಿಂದ ಲಾಹೋರ್‌ಗೆ ತೆರಳಲಿದ್ದು, ಅಲ್ಲಿರುವ ಪಿಎಫ್‌ಎಫ್‌ ಪ್ರಧಾನ ಕಚೇರಿಯಲ್ಲಿ ಆಶ್ರಯ ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಳೆದ ವಾರ ದೋಹಾ ಪ್ರವಾಸದ ವೇಳೆ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅಫ್ಘಾನಿಸ್ತಾನ ನಿರಾಶ್ರಿತರನ್ನು ಭೇಟಿ ಮಾಡಿದ್ದರು. ಆದರೆ, ಅಫ್ಘಾನಿಸ್ತಾನದಲ್ಲಿದ್ದ ಫುಟ್ಬಾಲ್‌ ಆಟಗಾರ್ತಿಯರ ನೆರವಿಗೆ ಧಾವಿಸಿರಲಿಲ್ಲ. ಫುಟ್ಬಾಲ್‌ ಸಂಸ್ಥೆಯ ಈ ನಿಷ್ಕ್ರಿಯತೆಗಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

click me!