
ಮಂಜೇರಿ(ಏ.17): 3ನೇ ಆವೃತ್ತಿಯ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಸೆಮಿಫೈನಲ್ ಪ್ರವೇಶಿಸಿದೆ. ಭಾನುವಾರ ‘ಎ’ ಗುಂಪಿನ ನಿರ್ಣಾಯಕ ಕೊನೆ ಪಂದ್ಯದಲ್ಲಿ ಬದ್ಧವೈರಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 1-1 ಗೋಲುಗಳಿಂದ ಬಿಎಫ್‌ಸಿ ಡ್ರಾ ಸಾಧಿಸಿದರೂ, ಒಟ್ಟು 3 ಪಂದ್ಯಗಳಲ್ಲಿ 5 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಅಂತಿಮ 4ರ ಘಟ್ಟ ಪ್ರವೇಶಿಸಿತು. ತಲಾ 4 ಅಂಕ ಗಳಿಸಿದ ಬ್ಲಾಸ್ಟರ್ಸ್ ಹಾಗೂ ಶ್ರೀನಿಧಿ ಡೆಕ್ಕನ್ ತಂಡಗಳು ಹೊರಬಿದ್ದವು.
ಇತ್ತೀಚೆಗಷ್ಟೇ ವಿವಾದಿತ ಐಎಸ್‌ಎಲ್ ಪ್ಲೇ-ಆಫ್ ಪಂದ್ಯದಲ್ಲಿ ಕೇರಳವನ್ನು ಸೋಲಿಸಿ ಟೂರ್ನಿಯಿಂದಲೇ ಹೊರಹಾಕಿದ್ದ ಬಿಎಫ್‌ಸಿ ಮತ್ತೊಮ್ಮೆ ಕೇರಳದ ಸೆಮೀಸ್ ಆಸೆಗೆ ಕೊಳ್ಳಿ ಇಟ್ಟಿತು. ಭಾನುವಾರದ ಪಂದ್ಯದಲ್ಲಿ ರಾಯ್ ಕೃಷ್ಣ 23ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್ಸಿಗೆ ಮುನ್ನಡೆ ಒದಗಿಸಿದರೆ, 77ನೇ ನಿಮಿಷದಲ್ಲಿ ಗೋಲು ಹೊಡೆದು ಕೇರಳ ಸಮಬಲ ಸಾಧಿಸಿತು. ಸೆಮೀಸ್ನಲ್ಲಿ ಬಿಎಫ್‌ಸಿ ಏಪ್ರಿಲ್ 21ರಂದು ಜಮ್ಶೇಡ್ಪುರ ಎಫ್‌ಸಿ ವಿರುದ್ಧ ಸೆಣಸಾಡಲಿದೆ.
ಕುಸ್ತಿ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧೆ ಇಲ್ಲ: ಬ್ರಿಜ್
ಗೊಂಡಾ(ಉತ್ತರ ಪ್ರದೇಶ): ದೇಶದ ಅಗ್ರ ಕುಸ್ತಿಪಟುಗಳಿಂದ ಲೈಂಗಿಕ ದೌರ್ಜನ್ಯ ಸೇರಿದಂತೆ ಗಂಭೀರ ಆರೋಪಗಳನ್ನು ಹೊತ್ತುಕೊಂಡಿರುವ ಬ್ರಿಬ್ಭೂಷಣ್ ಸಿಂಗ್ ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಆದರೆ ಸಮಿತಿಯ ಬೇರೆ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ.
RCB vs CSK: IPL ಟಿಕೆಟ್‌ಗಾಗಿ ಚಿನ್ನಸ್ವಾಮಿ ಸ್ಟೇಡಿಯಂನತ್ತ ಮುಗಿಬಿದ್ದ ಫ್ಯಾನ್ಸ್‌ಗೆ ನಿರಾಸೆ
ಬ್ರಿಜ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನಷ್ಟೇ ವರದಿ ಸಲ್ಲಿಕೆಯಾಗಬೇಕಿದೆ. ಈ ನಡುವೆ ಪ್ರತಿಕ್ರಿಯಿಸಿದ ಅವರು, ‘ಶೀಘ್ರದಲ್ಲೇ ಸಮಿತಿಯ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಈಗಾಗಲೇ 12 ವರ್ಷ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು, ಕ್ರೀಡಾ ನಿಯಮದ ಪ್ರಕಾರ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ’ ಎಂದಿದ್ದಾರೆ.
ಆರ್‌ಬಿಐ ಹುದ್ದೆ: ಮೊದಲ ಕಬಡ್ಡಿ ಪಟು ಪವನ್!
ನವದೆಹಲಿ: ತಾರಾ ಕಬಡ್ಡಿ ಆಟಗಾರ, ಬೆಂಗಳೂರು ಬುಲ್ಸ್ ಮಾಜಿ ನಾಯಕ ಪವನ್ ಶೆರಾವತ್ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನಲ್ಲಿ ಸಹಾಯಕ ವ್ಯವಸ್ಥಾಪಕಾಗಿ ನೇಮಕಗೊಂಡಿದ್ದಾರೆ. 26 ವರ್ಷದ ಪವನ್ ಈ ಹುದ್ದೆಗೇರಿದ ಭಾರತದ ಮೊದಲ ಕಬಡ್ಡಿ ಆಟಗಾರ ಎನಿಸಿಕೊಂಡಿದ್ದಾರೆ. ಬೆಂಗಳೂರು ತಂಡದ ಪ್ರಮುಖ ಆಟಗಾರನಾಗಿದ್ದ ಪವನ್ ಕಳೆದ ಆವೃತ್ತಿಗೂ ಮುನ್ನ ಹರಾಜಿನಲ್ಲಿ ದಾಖಲೆಯ 2.2 ಕೋಟಿ ರು.ಗೆ ತಮಿಳ್ ತಲೈವಾಸ್ ತಂಡಕ್ಕೆ ಬಿಕರಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.