ಫ್ರಾನ್ಸ್‌ ಗೋಡೆ ಕೆಡವಿದ ಸ್ಪೇನ್ ಫೈನಲ್‌ಗೆ; ಸ್ಪೇನ್ ರಕ್ಷಣಾಕೋಟೆ ಭೇದಿಸಲು ಎಂಬಾಪೆ ಫೇಲ್

Kannadaprabha News   | Kannada Prabha
Published : Jul 16, 2026, 07:55 AM IST
Spain

ಸಾರಾಂಶ

ಫಿಫಾ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್‌ ತಂಡವು ಫ್ರಾನ್ಸ್‌ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿ 16 ವರ್ಷಗಳ ಬಳಿಕ ಫೈನಲ್‌ಗೆ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಸತತ 3ನೇ ಫೈನಲ್‌ ಪ್ರವೇಶಿಸುವ ಫ್ರಾನ್ಸ್‌ನ ಕನಸು ಭಗ್ನಗೊಂಡಿದೆ.

ಅರ್ಲಿಂಗ್ಟನ್‌(ಅಮೆರಿಕ): 2010ರ ವಿಶ್ವ ಚಾಂಪಿಯನ್‌ ಸ್ಪೇನ್‌ ತಂಡ ಈ ಬಾರಿ ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ರಾತ್ರಿ ನಡೆದ 23ನೇ ಆವೃತ್ತಿಯ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಹಾಲಿ ಯುರೋಪಿಯನ್ ಚಾಂಪಿಯನ್‌ ಸ್ಪೇನ್‌ ತಂಡವು ಫ್ರಾನ್ಸ್‌ ವಿರುದ್ಧ 2-0 ಗೋಲಿನಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಸ್ಪೇನ್‌ 16 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಟ್ಟಿತು. ಸತತ 3ನೇ ಫೈನಲ್‌ ಮೇಲೆ ಕಣ್ಣಿಟ್ಟಿದ್ದ ಫ್ರಾನ್ಸ್‌ ತಂಡದ ಕನಸು ನುಚ್ಚುನೂರಾಯಿತು.

2018ರಲ್ಲಿ ವಿಶ್ವ ಚಾಂಪಿಯನ್‌ ಆಗಿ, 2022ರಲ್ಲಿ ಅರ್ಜೆಂಟೀನಾ ವಿರುದ್ಧ ಫೈನಲ್‌ನಲ್ಲಿ ಸೋತಿದ್ದ ಫ್ರಾನ್ಸ್‌ ತಂಡ ಈ ಬಾರಿ ವಿಶ್ವಕಪ್‌ನಲ್ಲೂ ಫೈನಲ್‌ಗೇರುವ ವಿಶ್ವಾಸದಲ್ಲಿತ್ತು. ಸೂಪರ್‌ಸ್ಟಾರ್ ಕೀಲಿಯನ್‌ ಎಂಬಾಪೆ, ಬ್ಯಾಲನ್‌ ಡಿ’ಓರ್‌ ವಿಜೇತ ಒಸ್ಮಾನ್‌ ಡೆಂಬೆಲೆ, ಈ ವಿಶ್ವಕಪ್‌ನ ಗರಿಷ್ಠ ಅಸಿಸ್ಟ್‌ ಸರದಾರ ಮೈಕಲ್‌ ಒಲೈಸ್‌ರಂತಹ ತಾರಾ ಆಟಗಾರರನ್ನು ಒಳಗೊಂಡಿದ್ದ ಫ್ರಾನ್ಸ್‌ ತಂಡ ಸ್ಪೇನ್‌ ವಿರುದ್ಧವೂ ಮ್ಯಾಜಿಕ್‌ ಮಾಡುವ ಗುರಿ ಇಟ್ಟುಕೊಂಡಿತ್ತು. ಆದರೆ ಬಲಿಷ್ಠ ರಕ್ಷಣಾ ಪಡೆ, ಗೋಡೆಯಂತೆ ನಿಲ್ಲಬಲ್ಲ ಗೋಲ್‌ಕೀಪರ್‌ ಉನೈ ಸೈಮನ್‌, ಕೌಶಲ್ಯಭರಿತ ಮಿಡ್‌ಫೀಲ್ಡರ್ಸ್‌ ಹಾಗೂ ಪ್ರತಿಭಾವಂತ ಸ್ಟ್ರೈಕರ್‌ಗಳನ್ನೊಳಗೊಂಡ ಸ್ಪೇನ್‌ ತಂಡದ ವಿರುದ್ಧ ಫ್ರಾನ್ಸ್‌ಗೆ ಗೆಲ್ಲಲಾಗಲಿಲ್ಲ.

22ನೇ ನಿಮಿಷದಲ್ಲಿ ಲಾಮಿನೆ ಯಮಲ್‌ಗೆ ಫ್ರಾನ್ಸ್‌ನ ಲ್ಯುಕಾಸ್‌ ಡಿಗ್ನೆ ಕಾಲಿನಿಂದ ಹೊಡೆದ ಕಾರಣ ಸ್ಪೇನ್‌ಗೆ ಪೆನಾಲ್ಟಿ ಲಭಿಸಿತು. ಅದನ್ನು ಗೋಲಾಗಿ ಪರಿವರ್ತಿಸಿದ ಮೈಕಲ್‌ ಒಯಾರ್ಜಬಲ್‌ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 58ನೇ ನಿಮಿಷದಲ್ಲಿ ಪೆಡ್ರೊ ಪೊರ್ರೊ ಬಾರಿಸಿದ ಗೋಲು ಸ್ಪೇನ್‌ಗೆ ಗೆಲುವು ತಂದುಕೊಟ್ಟಿತು. ಆ ಗೋಲಿಗೂ ಮುನ್ನ ಸುಮಾರು 1 ನಿಮಿಷಗಳ ಕಾಲ ಸ್ಪೇನ್‌ ತಂಡ ಚೆಂಡಿನ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಫ್ರಾನ್ಸ್‌ಗೆ ಒಂದೂ ಪಾಸ್‌ ನೀಡದೆ ತಂಡ ಚೆಂಡನ್ನು ಸಮರ್ಥವಾಗಿ ಗೋಲು ಪೆಟ್ಟಿಗೆಗೆ ಸೇರಿಸಿತು. ಬಳಿಕ ಯಮಲ್ ಗೋಲು ಬಾರಿಸಿದರೂ ಅದು ಆಫ್‌ಸೈಡ್‌ ಎಂದು ತೀರ್ಪು ಬಂದ ಕಾರಣ ಸ್ಪೇನ್‌ 2-0 ಅಂತರದಲ್ಲಿ ಜಯಗಳಿಸಿತು.

17 ಪೆನಾಲ್ಟಿ ಗೋಲು: ವಿಶ್ವಕಪ್‌ನಲ್ಲಿ ದಾಖಲೆ

ಪಂದ್ಯದಲ್ಲಿ ಮೈಕಲ್‌ ಒಯರ್ಜಬಲ್‌ ಪೆನಾಲ್ಟಿ ಗೋಲು ಹೊಡೆದರು. ಇದು ಸ್ಪೇನ್‌ ತಂಡ ವಿಶ್ವಕಪ್‌ನಲ್ಲಿ ದಾಖಲಿಸಿದ 17ನೇ ಗೋಲು. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ಪೆನಾಲ್ಟಿ ಗೋಲು ಬಾರಿಸಿದ ತಂಡ ಎನಿಸಿಕೊಂಡಿತು. ಇಂಗ್ಲೆಂಡ್‌, ಫ್ರಾನ್ಸ್‌ ತಲಾ 16 ಗೋಲು ದಾಖಲಿಸಿವೆ.

ಸತತ 37 ಪಂದ್ಯಗಳಲ್ಲಿ ಸೋಲು ಕಾಣದ ಸ್ಪೇನ್!

ಸ್ಪೇನ್‌ ತಂಡ 2024ರ ಮಾರ್ಚ್‌ ಬಳಿಕ 37 ಪಂದ್ಯಗಳನ್ನಾಡಿದೆ. ಅಚ್ಚರಿ ಏನೆಂದರೆ, ತಂಡ ಈ ಎಲ್ಲಾ ಪಂದ್ಯಗಳಲ್ಲೂ ಅಜೇಯ ದಾಖಲೆ ಕಾಯ್ದುಕೊಂಡಿದೆ. 28 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 9 ಪಂದ್ಯಗಳು ಡ್ರಾಗೊಂಡಿವೆ. ಇದು ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಜಂಟಿ ದಾಖಲೆ. ಈ ಹಿಂದೆ 2018-21ರ ನಡುವೆ ಇಟಲಿ ತಂಡ ಸತತವಾಗಿ 37 ಪಂದ್ಯಗಳಲ್ಲಿ ಸೋತಿರಲಿಲ್ಲ. 2007-09ರ ನಡುವೆ 35 ಪಂದ್ಯಗಳಲ್ಲಿ ಅಜೇಯವಾಗಿದ್ದು ಸ್ಪೇನ್‌ನ ಈ ಹಿಂದಿನ ದಾಖಲೆಯಾಗಿತ್ತು.

ಒಂದೇ ವಿಶ್ವಕಪ್‌ನಲ್ಲಿ 6 ಕ್ಲೀನ್‌ಶೀಟ್: ಸ್ಪೇನ್‌ ಟೀಂ, ಗೋಲಿ ಉನೈ ದಾಖಲೆ!

ವಿಶ್ವಕಪ್‌ ಆವೃತ್ತಿಯೊಂದರಲ್ಲಿ 6 ಪಂದ್ಯಗಳಲ್ಲಿ ಕ್ಲೀನ್‌ಶೀಟ್‌ ಸಾಧಿಸಿದ ಮೊದಲ ತಂಡ ಎಂಬ ವಿಶೇಷ ದಾಖಲೆಯನ್ನು ಸ್ಪೇನ್‌ ತನ್ನ ಹೆಸರಿಗೆ ಬರೆದುಕೊಂಡಿತು. ಬೆಲ್ಜಿಯಂ ವಿರುದ್ಧದ ಪಂದ್ಯ ಹೊರತಾಗಿ ಈ ಬಾರಿ ವಿಶ್ವಕಪ್‌ನಲ್ಲಿ ತಾನು ಆಡಿರುವ ಉಳಿದ 6 ಪಂದ್ಯಗಳಲ್ಲಿ ಸ್ಪೇನ್‌ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ. ಇನ್ನು, ಸ್ಪೇನ್‌ನ ಗೋಲ್‌ಕೀಪರ್‌ ಕೂಡಾ ಹೊಸ ದಾಖಲೆ ಬರೆದಿದ್ದಾರೆ. ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಕ್ಲೀನ್‌ಶೀಟ್‌(6) ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.

ಫ್ರಾನ್ಸ್‌ನ 5ನೇ ಫೈನಲ್‌ ಕನಸು ಭಗ್ನ: ನಾಡಿದ್ದು 3ನೇ ಸ್ಥಾನಕ್ಕೆ ಸೆಣಸು

ಫ್ರಾನ್ಸ್‌ ತಂಡದ 5ನೇ ಬಾರಿ ಫೈನಲ್‌ಗೇರುವ ಕನಸು ಭಗ್ನಗೊಂಡಿತು. ಈ ಹಿಂದೆ ತಂಡ 1998, 2006, 2018, 2022ರಲ್ಲಿ ಫೈನಲ್‌ಗೇರಿತ್ತು. ಈ ಪೈಕಿ 1998, 2018ರಲ್ಲಿ ಚಾಂಪಿಯನ್‌ ಆಗಿತ್ತು. ಈ ಬಾರಿ ತಂಡಕ್ಕೆ 3ನೇ ಸ್ಥಾನ ಪಡೆಯುವ ಅವಕಾಶವಿದೆ. ಶನಿವಾರ ನಡೆಯಲಿರುವ 3ನೇ ಸ್ಥಾನದ ಪಂದ್ಯದಲ್ಲಿ ತಂಡ ಕಣಕ್ಕಿಳಿಯಲಿದೆ.

11 ಪಂದ್ಯ: ಫ್ರಾನ್ಸ್‌ ವಿರುದ್ಧ ಕೊನೆ 11 ಪಂದ್ಯಗಳ ಪೈಕಿ ಸ್ಪೇನ್‌ 8ರಲ್ಲಿ ಜಯಗಳಿಸಿದೆ. 2ರಲ್ಲಿ ಸೋತಿದ್ದು, 1 ಪಂದ್ಯ ಡ್ರಾಗೊಂಡಿದೆ.

02 ಗೋಲು: ಇದು ಫ್ರಾನ್ಸ್‌ಗೆ ಫಿಫಾ ವಿಶ್ವಕಪ್‌ ನಾಕೌಟ್‌ನಲ್ಲಿ 1986ರ ಬಳಿಕ ಎದುರಾಗ ಅತಿ ದೊಡ್ಡ ಗೋಲು ಅಂತರದ ಸೋಲು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಂಡಿತ್ ಭವಿಷ್ಯ ನಿಜವಾಯ್ತು, ಫಿಫಾ ವಿಶ್ವಕಪ್‌ನಿಂದ ಫ್ರಾನ್ಸ್ ಔಟ್! ಈಗ ಅರ್ಜೆಂಟೀನಾ ಫ್ಯಾನ್ಸ್‌ಗೆ ಶುರುವಾಯ್ತು ನಡುಕ!
16 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ಸ್ಪೇನ್; ಫ್ರಾನ್ಸ್ ಕನಸು ಭಗ್ನ!