16 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ಸ್ಪೇನ್; ಫ್ರಾನ್ಸ್ ಕನಸು ಭಗ್ನ!

Published : Jul 15, 2026, 03:25 PM IST
France Vs Spain

ಸಾರಾಂಶ

2026ರ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವು ಫ್ರಾನ್ಸ್ ಅನ್ನು 2-0 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಸ್ಪೇನ್ ಪರ ಮಿಕೆಲ್ ಒಯರ್ಸಬಾಲ್ ಮತ್ತು ಪೆಡ್ರೊ ಪೊರೊ ಗೋಲು ಗಳಿಸಿದರೆ, ಫ್ರಾನ್ಸ್‌ನ ಸ್ಟಾರ್ ಆಟಗಾರರನ್ನು ಕಟ್ಟಿಹಾಕುವಲ್ಲಿ ಸ್ಪೇನ್ ಯಶಸ್ವಿಯಾಯಿತು.

ಡಲ್ಲಾಸ್: 2026ರ ಫಿಫಾ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಬಲಿಷ್ಠ ಫ್ರಾನ್ಸ್‌ಗೆ ಸೋಲುಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಡಲ್ಲಾಸ್‌ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಸ್ಪೇನ್, ಫ್ರಾನ್ಸ್ ತಂಡವನ್ನು 2-0 ಅಂತರದಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಟಿಕೆಟ್ ಗಿಟ್ಟಿಸಿಕೊಂಡಿದೆ. ಸ್ಪೇನ್ ಪರವಾಗಿ ಮಿಕೆಲ್ ಒಯರ್ಸಬಾಲ್ ಮತ್ತು ಪೆಡ್ರೊ ಪೊರೊ ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2010ರ ನಂತರ ಇದೇ ಮೊದಲ ಬಾರಿಗೆ ಸ್ಪೇನ್ ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದಿದೆ.

ಪಂದ್ಯದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಸ್ಪೇನ್

ಪಂದ್ಯದ 20ನೇ ನಿಮಿಷದಲ್ಲಿ ಫ್ರೆಂಚ್ ಆಟಗಾರ ಲೂಕಾಸ್ ಡಿಗ್ನೆ, ಸ್ಪೇನ್‌ನ ಲಮಿನ್ ಯಮಾಲ್ ಅವರನ್ನು ಬಾಕ್ಸ್‌ನಲ್ಲಿ ಫೌಲ್ ಮಾಡಿದರು. ಇದರ ಪರಿಣಾಮವಾಗಿ ರೆಫರಿ ಸ್ಪೇನ್‌ಗೆ ಪೆನಾಲ್ಟಿ ನೀಡಿದರು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಮಿಕೆಲ್ ಒಯರ್ಸಬಾಲ್ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ ಸ್ಪೇನ್‌ಗೆ ಮುನ್ನಡೆ ತಂದುಕೊಟ್ಟರು. ಈ ಗೋಲಿನ ನಂತರ ಫ್ರಾನ್ಸ್ ತಂಡ ಮಾನಸಿಕವಾಗಿ ಕುಗ್ಗಿದಂತೆ ಕಂಡಿತು. ನಂತರ ಗೋಲು ಗಳಿಸಲು ಫ್ರಾನ್ಸ್ ನಡೆಸಿದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ದ್ವಿತಿಯಾರ್ಧದಲ್ಲಿ, ರೈಟ್-ಬ್ಯಾಕ್ ಆಟಗಾರ ಪೆಡ್ರೊ ಪೊರೊ ಮತ್ತೊಂದು ಗೋಲು ಗಳಿಸಿ ಸ್ಪೇನ್‌ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಈ ಗೋಲು ಫ್ರಾನ್ಸ್ ತಂಡದ ಸೋಲನ್ನು ಬಹುತೇಕ ಖಚಿತಪಡಿಸಿತು.

ಪಂದ್ಯದ ಮೊದಲಾರ್ಧದಲ್ಲಿಯೇ ಫ್ರಾನ್ಸ್‌ನ ಪ್ರಮುಖ ಸೆಂಟರ್-ಬ್ಯಾಕ್ ಆಟಗಾರ ವಿಲಿಯಂ ಸಲಿಬಾ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಮತ್ತೊಂದೆಡೆ, ಸ್ಪೇನ್ ತಂಡದ ರಕ್ಷಣಾ ವಿಭಾಗವು ಫ್ರಾನ್ಸ್‌ನ ಸ್ಟಾರ್ ಆಟಗಾರರಾದ ಕೀಲಿಯನ್ ಎಂಬಾಪೆ, ಉಸ್ಮಾನ್ ಡೆಂಬೆಲೆ ಮತ್ತು ಮೈಕೆಲ್ ಒಲಿಸೆ ಅವರನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಈ ಮೂವರ ಆಟ ನಡೆಯದಂತೆ ನೋಡಿಕೊಳ್ಳುವಲ್ಲಿ ಸ್ಪೇನ್ ಯಶಸ್ವಿಯಾಯಿತು. ಈ ಸೋಲಿನೊಂದಿಗೆ, ಫ್ರಾನ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಯಾವುದೇ ಗೋಲು ಗಳಿಸದೆ ಪಂದ್ಯವನ್ನು ಮುಗಿಸಿತು. ಫೈನಲ್‌ನಲ್ಲಿ ಸ್ಪೇನ್ ತಂಡ, ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ.

ಇಂದು ಎರಡನೇ ಸೆಮಿಫೈನಲ್ ಹೈವೋಲ್ಟೇಜ್ ಕದನ

ಇಂದು ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ನಡುವೆ ಎರಡನೇ ಸೆಮಿಫೈನಲ್ ಪಂದ್ಯಾಟ ನಡೆಯಲಿದ್ದು, ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದು ಕಡೆ ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಬಲವಿದೆ. ಇನ್ನೊಂದೆಡೆ ಇಂಗ್ಲೆಂಡ್‌ಗೆ ಹ್ಯಾರಿ ಕೇನ್ ಕಾಲ್ಚಳಕದ ಬಲವಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Sports Science: ಫುಟ್ಬಾಲ್, ಕ್ರಿಕೆಟ್ ಆಟಗಾರರು ಸ್ಪೋರ್ಟ್ಸ್ ಬ್ರಾ ಧರಿಸೋದು ಯಾಕೆ? ಇದರ ಹಿಂದಿನ ಕಾರಣ ತಿಳಿಯಿರಿ
FIFA World Cup 2026: ಸೆಮೀಸ್‌ನಲ್ಲಿ ಬದ್ಧವೈರಿಗಳ ನಡುವೆ ಜಿದ್ದಾಜಿದ್ದಿ!