ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿಂದು ಭಾರತ-ಕುವೈತ್ ಮುಖಾಮುಖಿ
ಈಗಾಗಲೇ ಸೆಮೀಸ್ ಪ್ರವೇಶಿಸಿರುವ ಉಭಯ ತಂಡಗಳು
ಭಾರತ ಸದ್ಯ ‘ಎ’ ಗುಂಪಿನಲ್ಲಿ 6 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ
ಬೆಂಗಳೂರು(ಜೂ.27): 14ನೇ ಆವೃತ್ತಿ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿರುವ 8 ಬಾರಿ ಚಾಂಪಿಯನ್ ಭಾರತ, ಮಂಗಳವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಕುವೈತ್ ವಿರುದ್ಧ ಸೆಣಸಾಡಲಿದೆ. ಈಗಾಗಲೇ ಕುವೈತ್ ಕೂಡಾ ಸೆಮೀಸ್ ತಲುಪಿರುವ ಕಾರಣ ಈ ಪಂದ್ಯ ಗುಂಪು ಹಂತದ ಅಗ್ರಸ್ಥಾನಕ್ಕಾಗಿ ನಡೆಯುವ ಕಾದಾಟ ಎನಿಸಿಕೊಂಡಿದೆ.
ಬದ್ಧವೈರಿ ಪಾಕಿಸ್ತಾನ ವಿರುದ್ಧ 4-0 ಹಾಗೂ ಬಳಿಕ ನೇಪಾಳ ವಿರುದ್ಧ 2-0 ಗೋಲುಗಳಿಂದ ಗೆದ್ದಿರುವ ಭಾರತ ಸದ್ಯ ‘ಎ’ ಗುಂಪಿನಲ್ಲಿ 6 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಅತ್ತ ಕುವೈತ್ ತಂಡ ಕೂಡಾ ನೇಪಾಳ ಹಾಗೂ ಪಾಕಿಸ್ತಾನವನ್ನು ಮಣಿಸಿ 6 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಗ್ರಸ್ಥಾನಿಯಾಗಿಯೇ ಅಂತಿಮ 4ರ ಘಟ್ಟ ಪ್ರವೇಶಿಸಲಿದೆ. ಉಭಯ ತಂಡಗಳು 2010ರಲ್ಲಿ ಕೊನೆ ಬಾರಿ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.
undefined
ಚೆಟ್ರಿ ಬಲ: ಭಾರತ ಹೆಚ್ಚಾಗಿ ನಾಯಕ ಸುನಿಲ್ ಚೆಟ್ರಿ ಅವರನ್ನೇ ನೆಚ್ಚಿಕೊಂಡಿದೆ. ಟೂರ್ನಿಯಲ್ಲಿ ಪಾಕ್ ವಿರುದ್ಧ ಹ್ಯಾಟ್ರಿಕ್ ಸೇರಿದಂತೆ 4 ಗೋಲು ಬಾರಿಸಿ ಅಂತಾರಾಷ್ಟ್ರೀಯ ಗೋಲು ಗಳಿಕೆಯನ್ನು 91ಕ್ಕೆ ಹೆಚ್ಚಿಸಿರುವ ಚೆಟ್ರಿ ಮತ್ತೊಮ್ಮೆ ಬೆಂಗಳೂರಿನ ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡಲು ಕಾಯುತ್ತಿದ್ದಾರೆ. ಇನ್ನುಳಿದಂತೆ ಅನುಭವಿ ಸಂದೇಶ್ ಜಿಂಗನ್, ಯುವ ತಾರೆಗಳಾದ ಮಹೇಶ್ ಸಿಂಗ್, ಸಹಲ್ ಸಮದ್, ಉದಾಂತ ಮೇಲೂ ಭಾರತ ನಿರೀಕ್ಷೆ ಇಟ್ಟುಕೊಂಡಿದೆ.
ಸ್ಯಾಫ್ ಕಪ್ ಫುಟ್ಬಾಲ್: ಮಾಲ್ಡೀವ್ಸ್‌ಗೆ ಬಾಂಗ್ಲಾ ಶಾಕ್, ಸೆಮೀಸ್ ರೇಸ್ ಇನ್ನಷ್ಟು ರೋಚಕ
ಮಂಗಳವಾರದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈಗಾಗಲೇ ಸೆಮೀಸ್ ರೇಸ್‌ನಿಂದ ಹೊರಗುಳಿದಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಕಾಯುತ್ತಿವೆ. ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.
ಭಾರತದ ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಡಿಡಿ ಸ್ಪೋರ್ಟ್ಸ್, ಫ್ಯಾನ್‌ಕೋಡ್ ಆ್ಯಪ್
ತವರಿನ ಕೊನೆ 12 ಪಂದ್ಯದಲ್ಲೂ ಅಜೇಯ
ಭಾರತ ತಂಡ 2019ರ ಸೆಪ್ಟೆಂಬರ್ ಬಳಿಕ ಅಂದರೆ ಕಳೆದ ಸುಮಾರು 4 ವರ್ಷದಲ್ಲಿ ತವರಿನಲ್ಲಿ 12 ಪಂದ್ಯಗಳನ್ನಾಡಿದ್ದು, ಯಾವ ಪಂದ್ಯದಲ್ಲೂ ಸೋತಿಲ್ಲ. ಈ ಪೈಕಿ 10 ಪಂದ್ಯಗಳಲ್ಲಿ ಜಯಗಳಿಸಿದ್ದರೆ, 2 ಪಂದ್ಯ ಡ್ರಾಗೊಂಡಿತ್ತು. ಇನ್ನು, ಕೊನೆ 9 ಪಂದ್ಯಗಳಲ್ಲಿ ಕ್ಲೀನ್‌ಶೀಟ್ ಕಾಯ್ದುಕೊಂಡಿದೆ. ಅಂದರೆ ಈ 9 ಪಂದ್ಯಗಳಲ್ಲಿ ಎದುರಾಳಿಗೆ ಒಂದೂ ಗೋಲನ್ನು ಬಿಟ್ಟುಕೊಟ್ಟಿಲ್ಲ.
ಕೋಚ್ ಸ್ಟಿಮಾಕ್ ಮತ್ತೆ ಡಗೌಟ್‌ಗೆ!
ಪಾಕಿಸ್ತಾನ ಪಂದ್ಯದ ವೇಳೆ ಆಟಗಾರನ ಕೈಯಲ್ಲಿದ್ದ ಚೆಂಡನ್ನು ತಳ್ಳಿ ಹುಡುಗಾಟ ತೋರಿದ್ದಕ್ಕೆ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದ ಭಾರತದ ಕೋಚ್ ಇಗೊರ್ ಸ್ಟಿಮಾಕ್ ಕುವೈತ್ ವಿರುದ್ಧದ ಪಂದ್ಯಕ್ಕೆ ಮತ್ತೆ ಭಾರತದ ತಂಡದ ಡಗೌಟ್‌ಗೆ ಮರಳಲಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಸ್ಟಿಮಾಕ್ ತಂಡದ ಜೊತೆ ಕಾಣಿಸಿಕೊಂಡಿರಲಿಲ್ಲ.