ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ತಂಡಕ್ಕೆ ಶಾಕ್
ಚೊಚ್ಚಲ ಬಾರಿಗೆ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊರಾಕ್ಕೊ
ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ 0-3 ಗೋಲುಗಳ ಆಘಾತಕಾರಿ ಸೋಲು
ಅಲ್ ರಯ್ಯನ್(ಡಿ.07): ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡು ವಿಶ್ವಕಪ್‌ಗೆ ಕಾಲಿಟ್ಟು, ಮೊದಲ ಪಂದ್ಯದಲ್ಲೇ 7 ಗೋಲು ಬಾರಿಸಿ ಅಬ್ಬರಿಸಿದ್ದ ಸ್ಪೇನ್ ಓಟ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಕೊನೆಗೊಂಡಿದೆ. ಮೊರಾಕ್ಕೊ ವಿರುದ್ಧ ಮಂಗಳವಾರ ನಡೆದ ಅಂತಿಮ 16ರ ಸುತ್ತಿನಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ 0-3 ಗೋಲುಗಳ ಆಘಾತಕಾರಿ ಸೋಲು ಕಂಡು ಹೊರಬಿದ್ದಿದೆ.
ಮೊರಾಕ್ಕೊ ಚೊಚ್ಚಲ ಬಾರಿಗೆ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಿಗದಿತ 90 ನಿಮಿಷಗಳಲ್ಲಿ ಗೋಲು ದಾಖಲಾಗದ ಕಾರಣ 30 ನಿಮಿಷಗಳ ಹೆಚ್ಚುವರಿ ಆಟ ನಡೆಸಲಾಯಿತು. ಎರಡೂ ತಂಡಗಳಿಗೆ ಹಲವು ಅವಕಾಶ ಸಿಕ್ಕರೂ, ಗೋಲು ದಾಖಲಾಗದ ಕಾರಣ ಫಲಿ ತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಮೊರಾಕ್ಕೊ ಮೊದಲೆರಡು ಯತ್ನಗಳಲ್ಲಿ ಗೋಲು ಬಾರಿಸಿತು. ಸ್ಪೇನ್‌ನ ಮೂರೂ ಯತ್ನಗಳು ವಿಫಲವಾದವು. ಮೊರಾಕ್ಕೊ 3ನೇ ಯತ್ನದಲ್ಲಿ ವೈಫಲ್ಯ ಕಂಡರೂ, 4ನೇ ಯತ್ನದಲ್ಲಿ ಹಕೀಮಿ ಗೋಲು ಬಾರಿಸಿ ತಂಡವನ್ನು ಗೆಲ್ಲಿಸಿದರು. ಇದರೊಂದಿಗೆ ಮೊರಾಕ್ಕೊ ವಿಶ್ವಕಪ್ ಕ್ವಾರ್ಟರ್‌ಗೇರಿದ ಆಫ್ರಿ ಕಾದ 4ನೇ ರಾಷ್ಟ್ರ ಎನಿಸಿಕೊಂಡಿತು. 1990ರಲ್ಲಿ ಕ್ಯಾಮರೂನ್, 2002ರಲ್ಲಿ ಸೆನೆಗಲ್, 2010ರಲ್ಲಿ ಘಾನಾ ಕ್ವಾರ್ಟರ್‌ಗೇರಿದ್ದವು.
FIFA World Cup: ಬ್ರೆಜಿಲ್ ಗೋಲಿನಬ್ಬರಕ್ಕೆ ಬೆಚ್ಚಿದ ಕೊರಿಯಾ
ಸ್ಪೇನ್‌ನಲ್ಲಿ ಹುಟ್ಟಿದ ಆಟಗಾರನಿಂದ್ಲೆ ಸ್ಪೇನಿಗೆ ಶಾಕ್! ಮೊರಾಕ್ಕೊ ಪರ 3ನೇ ಪೆನಾಲ್ಟಿ ಕಿಕ್ ಯತ್ನಿಸಿದ ಅಚ್ರಾಫ್ ಹಕೀಮಿ ಹುಟ್ಟಿದ್ದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ. ತಮ್ಮ ವೃತ್ತಿಬದುಕನ್ನು ಸ್ಪೇನ್‌ನ ಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್ ತಂಡದೊಂದಿಗೆ ಆರಂಭಿಸಿದ್ದರು ಎನ್ನುವುದು ವಿಶೇಷ. ಆದರೆ ಇದೀಗ ನಿರ್ಣಾಯಕ ಘಟ್ಟದಲ್ಲಿ ಸ್ಪೇನ್ ವಿರುದ್ದ ಆಕರ್ಷಕ ಪೆನಾಲ್ಟಿ ಕಿಕ್ ಮೂಲಕ ಮೊರಾಕ್ಕೊ ಪಾಲಿಗೆ ಹೀರೋ ಆಗಿ ಹೊರಹೊಮ್ಮಿದ್ದು ವಿಶೇಷ.
4ನೇ ಬಾರಿ ಶೂಟೌಟ್‌ನಲ್ಲಿ ಸೋತ ಸ್ಪೇನ್: ವಿಶ್ವಕಪ್‌ನಲ್ಲಿ 4ನೇ ಬಾರಿಗೆ ಸ್ಪೇನ್ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಅನುಭವಿಸಿದೆ. ತಂಡವೊಂದು ಅತಿಹೆಚ್ಚು ಬಾರಿ ಶೂಟೌಟ್‌ನಲ್ಲಿ ಸೋತ ಅನಗತ್ಯ ದಾಖಲೆಯನ್ನು ಸ್ಪೇನ್ ಬರೆದಿದೆ. ಇಂಗ್ಲೆಂಡ್ ಹಾಗೂ ಇಟಲಿ ತಂಡಗಳು ತಲಾ ಮೂರು ಬಾರಿ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತಿವೆ. ಅಲ್ಲದೇ 2010ರ ಬಳಿಕ ಕ್ವಾರ್ಟರ್‌ಗೇರಲು ಸ್ಪೇನ್ ವಿಫಲವಾಯಿತು. 2014ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದ್ದ ಸ್ಪೇನ್, 2018ರ ವಿಶ್ವಕಪ್‌ನಲ್ಲಿ ಅಂತಿಮ 16ರ ಸುತ್ತಿನಲ್ಲಿ ಸೋಲುಂಡಿತ್ತು.
2027ರ ಏಷ್ಯಾಕಪ್ ಫುಟ್ಬಾಲ್ ಆತಿಥ್ಯ ರೇಸಿಂದ ಭಾರತ ಔಟ್
ನವದೆಹಲಿ: 2027ರ ಎಎಫ್‌ಸಿ ಏಷ್ಯನ್ ಕಪ್‌ಗೆ ಆತಿಥ್ಯ ಹಕ್ಕು ಪಡೆಯಲು ಬಿಡ್ ಸಲ್ಲಿಕೆಯಿಂದ ಹಿಂದೆ ಸರಿಯಲು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ನಿರ್ಧರಿಸಿದೆ. ‘ಸದ್ಯ ದೊಡ್ಡ ಟೂರ್ನಿಗಳಿಗೆ ಆತಿಥ್ಯ ವಹಿಸುವುದಕ್ಕಿಂತ ದೇಶದಲ್ಲಿ ತಳಮಟ್ಟದಲ್ಲಿ ಫುಟ್ಬಾಲ್ ಆಟದ ಅಭಿವೃದ್ಧಿಯಾಗಬೇಕಿದೆ. ಅದರತ್ತ ಹೆಚ್ಚು ಗಮನ ಹರಿಸಲಿದ್ದೇವೆ’ ಎಂದು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿದ್ದಾರೆ.