ಪ್ರಧಾನಿ ನರೇಂದ್ರ ಮೋದಿ-ಲಿಯೋನೆಲ್ ಮೆಸ್ಸಿ ಭೇಟಿಗೆ ಡೇಟ್ ಫಿಕ್ಸ್? ಈ 4 ನಗರಗಳಿಗೆ ಫುಟ್ಬಾಲ್ ಲೆಜೆಂಡ್ ಭೇಟಿ

Published : Aug 04, 2025, 09:46 AM IST
Lionel Messi

ಸಾರಾಂಶ

ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಡಿಸೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಲಿದ್ದು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರನ್ನು ಭೇಟಿಯಾಗಲಿದ್ದಾರೆ. ಕೋಲ್ಕತಾ, ಅಹಮದಾಬಾದ್, ಮುಂಬೈ ಮತ್ತು ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೋಲ್ಕತಾ: ಫುಟ್ಬಾಲ್‌ ದಿಗ್ಗಜ, ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಡಿಸೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಕೋಲ್ಕತಾ, ಅಹಮದಾಬಾದ್‌, ಮುಂಬೈ ಹಾಗೂ ದೆಹಲಿಗೆ ಮೆಸ್ಸಿ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಡಿಸೆಂಬರ್ 12ರ ರಾತ್ರಿ ಕೋಲ್ಕತಾಕ್ಕೆ ಬಂದಿಳಿಯಲಿರುವ ಮೆಸ್ಸಿ, ಡಿ.13ರಂದು ಕೋಲ್ಕತಾದ ವಿಐಪಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಮ್ಮ 70 ಅಡಿಯ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದು ವಿಶ್ವದಲ್ಲೇ ಮೆಸ್ಸಿಯ ಅತಿ ದೊಡ್ಡ ಪ್ರತಿಮೆ ಎನ್ನಲಾಗುತ್ತಿದೆ. ಬಳಿಕ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ದಿಗ್ಗಜ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಸೇರಿ ಇನ್ನೂ ಕೆಲವರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ ಸಂಜೆ ಅಹಮದಾಬಾದ್‌ನಲ್ಲಿ ಅದಾನಿ ಸಂಸ್ಥೆಯ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.14ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಕೆಲ ತಾರಾ ಕ್ರಿಕೆಟಿಗರ ಜತೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲಿರುವ ಮೆಸ್ಸಿ, ಬಳಿಕ ಭಾರತೀಯ ಫುಟ್ಬಾಲ್‌ ತಂಡವನ್ನು ಭೇಟಿ ಮಾಡಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಡಿ.15ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿರುವ ಮೆಸ್ಸಿ, ಅಲ್ಲೂ ಸಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ನಗರದಲ್ಲೂ ಮೆಸ್ಸಿ ಫುಟ್ಬಾಲ್‌ ಆಸಕ್ತ ಕೆಲ ಮಕ್ಕಳೊಂದಿಗೆ 15-20 ನಿಮಿಷ ಸಮಯ ಕಳೆಯಲಿದ್ದು, ಕೆಲ ಸಲಹೆಗಳನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ಮೊದಲು ಭಾರತದ ಕ್ರಿಕೆಟ್ ದಂತಕಥೆಗಳಾದ ಧೋನಿ, ಕೊಹ್ಲಿ, ಸಚಿನ್ ಸೇರಿದಂತೆ ಹಲವು ಕ್ರಿಕೆಟಿಗರ ಜತೆ ಮೆಸ್ಸಿ ಕ್ರಿಕೆಟ್ ಆಡಲಿದ್ದಾರೆ ಎಂದು ವರದಿಯಾಗಿತ್ತು.

ಐಎಸ್‌ಎಲ್‌: ಹಲವು ಕ್ಲಬ್‌ಗಳಿಂದ ಆಟಗಾರರ ಜತೆಗಿನ ಒಪ್ಪಂದ ರದ್ದು!

ನವದೆಹಲಿ: ರಿಲಯನ್ಸ್‌ ಒಡೆತನದ ಫುಟ್ಬಾಲ್ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌(ಎಫ್‌ಎಸ್‌ಡಿಎಲ್‌) ಮತ್ತು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಬಿಕ್ಕಟ್ಟಿನಿಂದ ಇಂಡಿಯನ್‌ ಸೂಪರ್ ಲೀಗ್‌(ಐಎಸ್‌ಎಲ್‌) ಮುಂದೂಡಲ್ಪಟ್ಟ ಬೆನ್ನಲ್ಲೇ ಒಡಿಶಾ ಫುಟ್ಬಾಲ್ ಕ್ಲಬ್‌ (ಒಎಫ್‌ಸಿ) ಸೇರಿ ಹಲವು ಕ್ಲಬ್‌ಗಳು ತನ್ನ ಆಟಗಾರರು ಹಾಗೂ ಸಿಬ್ಬಂದಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿವೆ ಎನ್ನುವ ಸುದ್ದಿ ಹೊರಬಿದ್ದಿದೆ.

ಆತಿಥ್ಯ ಹಕ್ಕನ್ನು ಎಐಎಫ್‌ಎಫ್‌ ನವೀಕರಣಗೊಳಿಸದ ಹಿನ್ನೆಲೆಯಲ್ಲಿ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಎಫ್‌ಎಸ್‌ಡಿಎಲ್‌ ಇತ್ತೀಚೆಗೆ ಘೋಷಿಸಿತ್ತು. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಫ್‌ಎಸ್‌ಡಿಎಲ್‌ಗೆ ಇನ್ನೂ ಸಾಧ್ಯವಾಗಿಲ್ಲ. ಆತಿಥ್ಯ ಹಕ್ಕು ನವೀಕರಿಸುವ ಬಗ್ಗೆ ಎಐಎಫ್‌ಎಫ್‌ ಸಹ ಯಾವುದೇ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಈ ವರ್ಷ ಟೂರ್ನಿ ನಡೆಯದೆ ಇರಬಹುದು ಎನ್ನುವ ಚರ್ಚೆ ಭಾರತೀಯ ಫುಟ್ಬಾಲ್‌ ವಲಯದಲ್ಲಿ ನಡೆಯುತ್ತಿದೆ.

ಆಗಸ್ಟ್14ರಂದು ಬೆಂಗ್ಳೂರಲ್ಲಿ ಭಾರತ vs ಸಿಂಗಾಪುರ ನಡುವೆ ಫುಟ್ಬಾಲ್‌ ಪಂದ್ಯ

ನವದೆಹಲಿ: 2027ರ ಎಎಫ್‌ಸಿ ಎಷ್ಯನ್‌ ಕಪ್‌ನ ಅರ್ಹತಾ ಟೂರ್ನಿ 3ನೇ ಸುತ್ತಿನ ಭಾರತ ಹಾಗೂ ಸಿಂಗಾಪುರ ನಡುವಿನ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ ಎಂದು ತಿಳಿದುಬಂದಿದೆ. ಆ.14ರಂದು ಈ ಪಂದ್ಯ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಎಎಫ್‌ಸಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. 

3ನೇ ಸುತ್ತಿನಲ್ಲಿ ಭಾರತ ತಂಡ ‘ಸಿ’ ಗುಂಪಿನಲ್ಲಿದ್ದು, ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ 1 ಡ್ರಾ, 1 ಸೋಲು ಕಂಡಿದೆ. 4 ತಂಡಗಳಿರುವ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡ 2027ರ ಏಷ್ಯನ್‌ ಕಪ್‌ಗೆ ಅರ್ಹತೆ ಪಡೆಯಲಿದೆ. ಭಾರತಕ್ಕೆ ಇನ್ನೂ 4 ಪಂದ್ಯಗಳು ಬಾಕಿ ಇವೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?
ಫುಟ್ಬಾಲ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿ!