
ಬೆಂಗಳೂರು(ಮಾ.07) 54 ವರ್ಷಗಳ ಬಳಿಕ ಪ್ರತಿಷ್ಠಿತ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದ ಕರ್ನಾಟಕ ತಂಡಕ್ಕೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) 25 ಲಕ್ಷ ರು. ನಗದು ಬಹುಮಾನ ಘೋಷಿಸಿದೆ.
ಸೋಮವಾರ ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಆಟಗಾರರಿಗೆ ಸನ್ಮಾನ, ಟ್ರೋಫಿ ಪರೇಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಎಸ್‌ಎಫ್‌ಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ‘ರಾಜ್ಯದ ಆಟಗಾರರು ಈ ಬಾರಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ದೇಶದ ಫುಟ್ಬಾಲ್ನಲ್ಲಿ ನಮ್ಮ ತಂಡ ಹೊಸ ಚರಿತ್ರೆ ಸೃಷ್ಟಿಸಿದೆ. ಹೀಗಾಗಿ ತಂಡಕ್ಕೆ 25 ಲಕ್ಷ ರು. ಬಹುಮಾನ ಘೋಷಿಸುತ್ತಿದ್ದೇವೆ. ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಸರ್ಕಾರದ ಕಡೆಯಿಂದಲೂ ಬಹುಮಾನ ಘೋಷಿಸಲು ಮನವಿ ಮಾಡುತ್ತೇನೆ’ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ, ಕೆಎಸ್‌ಎಫ್‌ಎ ಕಾರ್ಯದರ್ಶಿ ಸತ್ಯನಾರಾಯಣ ಸೇರಿ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ತೆರೆದ ವಾಹನದಲ್ಲಿ ನಗರದ ಕೆಲ ಸ್ಥಳಗಳಲ್ಲಿ ಆಟಗಾರರ ಮೆರವಣಿಗೆ ನಡೆಯಿತು.
ಮಾ.25ರಿಂದ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಟೂರ್ನಿ
ನವದೆಹಲಿ: ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತು ಮಾರ್ಚ್ 25ರಿಂದ ಆರಂಭಗೊಳ್ಳಲಿದ್ದು, 31 ತಂಡಗಳು ಸ್ಪರ್ಧಿಸಲಿವೆ. 6 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ತಂಡಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು, ರನ್ನರ್-ಅಪ್ ಸ್ಥಾನ ಪಡೆದ 5 ಉತ್ತಮ ತಂಡಗಳು ಪ್ರಧಾನ ಸುತ್ತಿಗೇರಲಿವೆ.
Santosh Trophy: 54 ವರ್ಷಗಳ ಬಳಿಕ ಕರ್ನಾಟಕ ಫುಟ್ಬಾಲ್ ಚಾಂಪಿಯನ್..!
ರೈಲ್ವೇಸ್‌ಗೆ ಪ್ರಧಾನ ಸುತ್ತಿಗೆ ನೇರ ಪ್ರವೇಶ ನೀಡಲಾಗಿದೆ. ಕರ್ನಾಟಕ ತಂಡ 6ನೇ ಗುಂಪಿನಲ್ಲಿದ್ದು, ತನ್ನ ಪಂದ್ಯಗಳನ್ನು ಬೆಂಗಳೂರಲ್ಲಿ ಆಡಲಿದೆ. ಬಿಹಾರ, ಮಣಿಪುರ, ಗುಜರಾತ್ ಹಾಗೂ ಅಸ್ಸಾಂ ವಿರುದ್ಧ ಸೆಣಸಲಿದೆ.
ವಿಶ್ವ ಕೂಟಕ್ಕಿಲ್ಲ ಆಯ್ಕೆ: ಕೋರ್ಚ್ ಮೆಟ್ಟಿಲೇರಿದ ಭಾರತದ 3 ಬಾಕ್ಸರ್‌ಗಳು!
ನವದೆಹಲಿ: ಮುಂಬರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆ ಮಾಡದ ಕಾರಣ, ರಾಷ್ಟ್ರೀಯ ಚಾಂಪಿಯನ್ನರಾದ ಮಂಜು ರಾಣಿ, ಶಿಕ್ಷಾ ನರ್ವಾಲ್ ಹಾಗೂ ಪೂನಮ್ ಪೂನಿಯಾ ಭಾರತೀಯ ಬಾಕ್ಸಿಂಗ್ ಫೆಡರೇಷನ್ ವಿರುದ್ಧ ದೆಹಲಿ ಹೈಕೋರ್ಚ್ ಮೆಟ್ಟಿಲೇರಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೂವರನ್ನು ಹೊರತುಪಡಿಸಿ ಚಿನ್ನ ಗೆದ್ದ ಇನ್ನುಳಿದ ಎಲ್ಲಾ ಬಾಕ್ಸರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ತಮ್ಮನ್ನು ಕಡೆಗಣಿಸಿ ಅನ್ಯಾಯ ಮಾಡಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಹೈಕೋರ್ಚ್‌ನಲ್ಲಿ ಬಾಕ್ಸರ್‌ಗಳ ಅರ್ಜಿ ವಿಚಾರಣೆಗೆ ಬರಲಿದೆ.
ಇಂದಿನಿಂದ ಜರ್ಮನ್ ಓಪನ್ ಬ್ಯಾಡ್ಮಿಂಟನ್
ಮುಲ್ಹೀಮ್: ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು ಮಾಜಿ ವಿಶ್ವ ನಂ.1, ಭಾರತದ ಕಿದಂಬಿ ಶ್ರೀಕಾಂತ್ ಟೂರ್ನಿಗೆ ಗೈರಾಗಲು ನಿರ್ಧರಿಸಿದ್ದಾರೆ. ಲಕ್ಷ್ಯ ಸೇನ್ ಭಾರತದ ಸವಾಲು ಮುನ್ನಡೆಸಲಿದ್ದು, ಇತ್ತೀಚೆಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದ ಕರ್ನಾಟಕದ ಮಿಥುನ್ ಮಂಜುನಾಥ್ ಮೇಲೂ ನಿರೀಕ್ಷೆ ಇದೆ. ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್, ಮಾಳ್ವಿಕಾ ಬನ್ಸೋದ್ ಕಣಕ್ಕಿಳಿಯಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸುಮಿತ್ ರೆಡ್ಡಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.