ಕಳಿಂಗ ಸೂಪರ್ ಕಪ್ 2025: ಕೇರಳ ಬ್ಲಾಸ್ಟರ್ಸ್‌ ಮಣಿಸಿ ಸೆಮೀಸ್‌ಗೆ ಎಂಟ್ರಿಕೊಟ್ಟ ಮೋಹನ್ ಬಗಾನ್ !

Published : Apr 26, 2025, 06:44 PM ISTUpdated : Apr 26, 2025, 07:23 PM IST
ಕಳಿಂಗ ಸೂಪರ್ ಕಪ್ 2025: ಕೇರಳ ಬ್ಲಾಸ್ಟರ್ಸ್‌ ಮಣಿಸಿ ಸೆಮೀಸ್‌ಗೆ ಎಂಟ್ರಿಕೊಟ್ಟ ಮೋಹನ್ ಬಗಾನ್ !

ಸಾರಾಂಶ

ಕಳಿಂಗ ಸೂಪರ್ ಕಪ್ 2025ರ ಕ್ವಾರ್ಟರ್ ಫೈನಲ್‌ನಲ್ಲಿ ಮೋಹನ್ ಬಗಾನ್ ತಂಡವು ಕೇರಳ ಬ್ಲಾಸ್ಟರ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. ಯುವ ಆಟಗಾರರ ಬಲದ ಮೋಹನ್ ಬಗಾನ್ ತಂಡವು ಕೇರಳದ ವಿರುದ್ಧ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಭುವನೇಶ್ವರ: ಭಾರತ ಫುಟ್ಬಾಲ್‌ನ ಎರಡು ಬಲಿಷ್ಠ ತಂಡಗಳಾದ ಕೇರಳ ಬ್ಲಾಸ್ಟರ್ಸ್ ಹಾಗೂ ಮೋಹನ್ ಬಗಾನ್ ತಂಡಗಳು ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ಕಳಿಂಗ ಸೂಪರ್ ಕಪ್ 2025 ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, ಮತ್ತೊಮ್ಮೆ ಕೇರಳ ಬ್ಲಾಸ್ಟರ್ಸ್ ಎದುರು ಮೋಹನ್ ಬಗಾನ್ ಭರ್ಜರಿ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿದೆ.

ಬಿಸಿಲಿನ ಬೇಗೆಯ ಹೊರತಾಗಿಯೂ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಮೋಹನ್ ಬಗಾನ್ ತಂಡವು, ಕೇರಳ ಬ್ಲಾಸ್ಟರ್ಸ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.

ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಆದರೆ ಮೊದಲ 20 ನಿಮಿಷಗಳಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಆದರೆ 22ನೇ ನಿಮಿಷದಲ್ಲಿ ಸಹಾಲ್ ಅಬ್ದುಲ್ ಸಮದ್ ಆಕರ್ಷಕ ಗೋಲು ಬಾರಿಸುವ ಮೂಲಕ ಮೋಹನ್ ಬಗಾನ್ ಪರ ಅಂಕಗಳ ಖಾತೆ ತೆರೆದರು. ಇದಾದ ಬಳಿಕ ಮೊದಲಾರ್ಧದ ಅಂತ್ಯದ ವೇಳೆಗೂ ಮೋಹನ್ ಬಗಾನ್ 1-0 ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: ನ್ಯಾಷನಲ್ ಫುಟ್‌ಬಾಲ್ ಲೀಗ್ ಡ್ರಾಫ್ಟ್ 2025: ಇಲ್ಲಿವೆ ಟಾಪ್ 5 ಆಯ್ಕೆಗಳು!

ಇನ್ನು ಮೊದಲಾರ್ಧದ ಹಿನ್ನಡೆಯನ್ನು ಮೆಟ್ಟಿನಿಲ್ಲಲು ಕೇರಳ ಬ್ಲಾಸ್ಟರ್ಸ್ ಪರ ಆಟಗಾರರು ಸಾಕಷ್ಟು ಹೋರಾಟ ನಡೆಸಿದರೂ ಯಶಸ್ವಿಯಾಗಲಿಲ್ಲ. ಇನ್ನು ದ್ವಿತಿಯಾರ್ಧದ 52ನೇ ನಿಮಿಷದಲ್ಲಿ ಸುಹೇಲ್ ಅಹಮದ್ ಭಟ್ ಕೇರಳ ಡಿಫೆನ್ಸ್ ವಿಭಾಗವನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮೋಹನ್ ಬಗಾನ್ ತಂಡವು 2-0 ಅಂತರದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ಇದಾದ ಬಳಿಕ ಕೇರಳ ತಂಡವು ಸಬ್‌ಸ್ಟಿಟ್ಯೂಟ್ ರೂಪದಲ್ಲಿ ಐಬನ್, ಶ್ರೀಕುಟ್ಟನ್ ಹಾಗೂ ಶಾಹಿಫ್ ಅವರನ್ನು ಕಣಕ್ಕಿಳಿಸಿತಾದರೂ ಯಾವುದೇ ಗೋಲು ಗಳಿಸಲು ಕೇರಳ ಬ್ಲಾಸ್ಟರ್ಸ್‌ಗೆ ಸಾಧ್ಯವಾಗಲಿಲ್ಲ. 90 ನಿಮಿಷಗಳ ಅಂತ್ಯದ ವೇಳೆಗೆ ಮೋಹನ್ ಬಗಾನ್ ತಂಡವು 2-0 ಅಂತರದ ಮುನ್ನಡೆ ಕಾಯ್ದುಕೊಂಡಿತ್ತು. ಇದಾದ ಬಳಿಕ ಹೆಚ್ಚುವರಿ 6 ನಿಮಿಷಗಳ ಸ್ಟಾಪೇಜ್ ಟೈಮ್ ನೀಡಲಾಯಿತು. ಆಗ ನಾಲ್ಕನೇ ನಿಮಿಷದಲ್ಲಿ ಶ್ರೀಕುಟ್ಟನ್ ಗೋಲು ಬಾರಿಸುವ ಮೂಲಕ ಕೇರಳಕ್ಕೆ ಕೊಂಚ ಗೆಲುವಿನ ಆಸೆ ಮೂಡಿಸಿದರಾದರೂ, ಆ ಬಳಿಕ ಕೊನೆಯ ಕ್ಷಣದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಮೋಹನ್ ಬಗಾನ್ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: ರನ್‌ ಗಳಿಸಲು ಮತ್ತೆ ಪರದಾಡಿದ ದೀಪಕ್ ಹೂಡಾ! ಸಿಎಸ್‌ಕೆ ಬ್ಯಾಟರ್‌ಗೆ ಮತ್ತೆ ನಿರಾಸೆ!

ಈ ಕ್ವಾರ್ಟರ್ ಫೈನಲ್ ಪಂದ್ಯವು ಇನ್ನಷ್ಟು ರೋಚಕವೆನಿಸಿಕೊಳ್ಳಲು ಇನ್ನಷ್ಟು ಕಾರಣಗಳಿದ್ದವು. ಯಾಕೆಂದರೆ ಈ ಪಂದ್ಯದಲ್ಲಿ ಮೋಹನ್ ಬಗಾನ್ ತಂಡವು ಸಾಕಷ್ಟು ಯುವ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ತಂಡದ ಪ್ರಮುಖ ಆಟಗಾರರು ಈ ಪಂದ್ಯದಿಂದ ಹೊರಗುಳಿದಿದ್ದರು. ಈ ಪಂದ್ಯದಲ್ಲಿ ಆಡಿದ ಏಕೈಕ ವಿದೇಶಿ ಆಟಗಾರನೆಂದರೆ ಪೂರ್ಚುಗೀಸ್‌ನ ಡಿಫೆಂಡರ್ ನೂನೋ ರೈಸ್ ಮಾತ್ರ. ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದ ಮೋಹನ್ ಬಗಾನ್ ತಂಡವು ಭಾರತದ ಪ್ರತಿಭಾನ್ವಿತ ಫುಟ್ಬಾಲ್ ತಾರೆಗಳಾದ ಸಹಾಲ್ ಅಬ್ದುಲ್ ಸಮದ್, ದೀಪಕ್ ತಂಗ್ರಿ ಹಾಗೂ ಆಶಿಕ್ ಕುರುನಿಯನ್ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡು ಕಣಕ್ಕಿಳಿದಿತ್ತು.

ಇನ್ನೊಂದೆಡೆ ಕೇರಳ ಬ್ಲಾಸ್ಟರ್ಸ್ ತಂಡವು ಈಸ್ಟ್ ಬೆಂಗಾಲ್ ಎದುರು 2-0 ಅಂತರದ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಕೋಚ್ ಡೇವಿಡ್ ಕೆಟಾಲ ಅವರ ಮಾರ್ಗದರ್ಶನದಲ್ಲಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಕೇರಳ ಬ್ಲಾಸ್ಟರ್ಸ್‌ಗೆ ಶಾಕ್ ನೀಡುವಲ್ಲಿ ಮೋಹನ್ ಬಗಾನ್ ಯಶಸ್ವಿಯಾಗಿದೆ.

ಇತ್ತೀಚೆಗಷ್ಟೇ ಜರುಗಿದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯದ ಎರಡು ಮುಖಾಮುಖಿಯಲ್ಲೂ ಕೇರಳ ಬ್ಲಾಸ್ಟರ್ಸ್ ಎದುರು ಮೋಹನ್ ಬಗಾನ್ ತಂಡವು ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಆ ಗೆಲುವಿನ ನಾಗಾಲೋಟ ಮುಂದುವರೆಸುವಲ್ಲಿ ಮೋಹನ್ ಬಗಾನ್ ತಂಡವು ಯಶಸ್ವಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?
ಫುಟ್ಬಾಲ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿ!