ISL 7: ಮುಂಬೈ ಸಿಟಿ FCಗೆ ಬಲಿಷ್ಠ ಈಸ್ಟ್ ಬೆಂಗಾಲ್ ಸವಾಲು!

By Suvarna NewsFirst Published Dec 1, 2020, 2:23 PM IST
Highlights

ಮುಂಬೈ ಸಿಟಿ ತಂಡ ಕಳೆದ ಪಂದ್ಯದಲ್ಲಿ ಗೆಲುವು ದಾಖಲಿಸಿ ಇದೀಗ ಈಸ್ಟ್ ಬೆಂಗಾಲ್ ಹೋರಾಟಕ್ಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಐಎಸ್‌ಎಲ್ ಆಡುತ್ತಿರುವ ಈಸ್ಟ್ ಬೆಂಗಾಲ್ ಎಲ್ಲಾ ತಂಡಗಳಿಗೆ ಪ್ರಬಲ ಪೈಪೋಟಿ ನೀಡುವ ಸೂಚನೆ ನೀಡಿದೆ. ಇದೀಗ ಮುಂಬೈ ಸಿಟಿ ವಿರುದ್ಧ ಈಸ್ಟ್ ಬೆಂಗಾಲ್‌ಗೆ ಇರುವ ಪ್ರಮುಖ ಸವಾಲೇನು? 

ಗೋವಾ(ಡಿ.01):  ಹೀರೋ  ಇಂಡಿಯನ್ ಸೂಪರ್ ಲೀಗ್ ನ 7 ನೇ ಆವೃತ್ತಿಯಲ್ಲಿ  ಮೊದಲ ಜಯ ಕಂಡಿರುವ ಮುಂಬೈ ಸಿಟಿ  ತಂಡ ಮಂಗಳವಾರ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. 

ISL 2020: ಗೋವಾ, ನಾರ್ತ್ ಈಸ್ಟ್‌ ಪಂದ್ಯ ಡ್ರಾ

ಎರಡೂ ತಂಡಗಳು ಚೆಂಡಿನ ನಿಯಂತ್ರಣ ಆಧಾರಿತ ಆಟದ ಬಗ್ಗೆ ಹೆಚ್ಚು ಒಲವು ತೋರಿದ್ದರಿಂದ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಸರ್ಗಿಯೊ ಲೊಬೆರಾ ಪಡೆ ಪಂದ್ಯವೊಂದರಲ್ಲಿ ಸರಾಸರಿ 511 ಪಾಸಿನ ದಾಖಲೆ ಹೊಂದಿದ್ದರೆ, ಎಸ್ ಸಿ ಇಬಿ ಆಡಿದ ಒಂದು ಪಂದ್ಯದಲ್ಲೇ 476 ಪಾಸ್ ಗಳ ದಾಖಲೆ ಹೊಂದಿದೆ. ಹಿಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ವಿರುದ್ಧ ಈಸ್ಟ್ ಬೆಂಗಾಲ್ ಸೋತಿತ್ತು.

ಮುಂಬೈ ತಾನು ಆಡಿರುವ ಎರಡೂ ಪಂದ್ಯಗಳಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರೂ ಗೋಲು ಗಳಿಸಲು ಮಾತ್ರ ಪರದಾಡಿತ್ತು. ಮುಂಬೈ ಇದುವರೆಗೂ ಗಳಿಸಿದ್ದು ಕೇವಲ ಒಂದು ಗೋಲು. ಎರಡು ಪಂದ್ಯಗಳನ್ನಾಡಿದ ತಂಡಗಳಿಗೆ ಹೋಲಿಸಿದರೆ ಇದು ಅತ್ಯಂತ ಕಳಪೆ ಪ್ರದರ್ಶನವಾಗಿದೆ.

ಆಡಂ ಲೀ ಫಾಂಡ್ರೆ ಮತ್ತು ಹ್ಯುಗೊ ಬೌಮಾಸ್ ಅವರ ಜೋಡಿ ಮುಂಬೈಯ ಅಟ್ಯಾಕ್ ವಿಭಾಗದ ಪ್ರಮುಖ ಅಸ್ತ್ರ ಎನಿಸಿದೆ. ಬಾರ್ಥಲೋಮ್ಯೊ ಒಗ್ಬಚೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದರೆ ಇವರಿಬ್ಬರು ಜವಾಬ್ದಾರಿ ಪ್ರಮುಖವೆನಿಸಲಿದೆ. 

ಈಸ್ಟ್ ಬೆಂಗಾಲ್ ತಂಡಕ್ಕೆ ಲೀಗ್ ನಲ್ಲಿ ಆಡಿದ ಅನುಭವದ ಕೊರತೆ ಇರಬಹುದು, ಆದರೆ ತಂಡದ ಶಕ್ತಿಯನ್ನು ಗಮನಿಸಿದಾಗ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ಲೊಬೆರಾ ಹೇಳಿದ್ದಾರೆ. "ನಮ್ಮ ಮುಖ್ಯ ಗುರಿ ಪ್ರತಿಯೊಂದು ಹಂತದಲ್ಲೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು, ನಾನು ಕೋಚ್ ಆಗಿ ಬೇರೇನೂ ಬದಲಾವಣೆಯನ್ನು ಬಯಸೊಲ್ಲ, ಪಂದ್ಯದ ಮೇಲೆ ಪ್ರಭುತ್ವ ಸಾಧಿಸುವುದು ಹಾಗೂ ಚೆಂಡನ್ನು ಹೆಚ್ಚು ಕಾಲ ನಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವುದು. ಆದರೆ ಅದು ಅಷ್ಟು ಸುಲಭವಾದುದಲ್ಲ. ಚೆಂಡು ಇಲ್ಲದೆಯೇ ಅವರು ಬಲಿಷ್ಠ ತಂಡ. ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಕಷ್ಟ. ಅಟ್ಯಾಕ್ ಮತ್ತು ಡಿಫೆನ್ಸ್ ಮೂಲಕ ನಾವು ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು" ಎಂದು ಲೊಬೆರಾ ಹೇಳಿದರು.

ಈ ಪಂದ್ಯದಲ್ಲಿ ಡಿಫೆಂಡರ್ ಮಂದಾರ ದೇಸಾಯಿ ನೂರನೇ ಐಎಸ್ ಎಲ್ ಪಂದ್ಯವನ್ನು ಆಡಲಿದ್ದಾರೆ. ಇದೊಂದು ಹೆಮ್ಮೆಯ ಸಂಗತಿ ಎಂದು ದೇಸಾಯಿ ಹೇಳಿದ್ದಾರೆ.

ಮೊದಲ ಪಂದ್ಯದಲ್ಲಿ ಸೋಲನುಭವಿಸಿದರೂ ಎಸ್ ಸಿ ಇಬಿ ಅತ್ಯಂತ ಆತ್ಮವಿಶ್ವಾಸದ ಆಟವಾಡಿದೆ. ಕೋಚ್ ರಾಬೀ ಫ್ಲವರ್ ತಂಡದ ಬೆನ್ನೆಲುಬಾದ ಆಂಟೊನಿ ಪಿಲ್ಕಿಂಗ್ಟನ್ ಮತ್ತು ಮಾಟ್ಟಿ ಸ್ಟೈನ್ಮನ್ ಅವರ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಮುಂಬೈ ಡಿಫೆನ್ಸ್ ಮುರಿಯಲು ಇವರಿಬ್ಬರಿಂದ ಸಾಧ್ಯ.

"ನಾವು ಆಡಿದ ರೀತಿಯನ್ನು ಗಮನಿಸಿದರೆ ಇನ್ನೂ ಉತ್ತಮವಾದುದನ್ನೇ ಸಾಧಿಸಬಹುದು. ಎಂದಿರುವ ಫ್ಲವರ್ " ನಾವು ಹೊಸಬರು, ನಾವು ಅಲ್ಪ ಅವಧಿಯಲ್ಲಿ ಒಟ್ಟಿಗೆ ಸೇರಿದ್ದೇವೆ, ನಾವು ಮುಂದಕ್ಕೆ ಸಾಗಬೇಕಿದೆ" ಎಂದರು.a

click me!