ISL 7: ಅದೃಷ್ಠ ಪರೀಕ್ಷೆಗೆ ಮುಂದಾದ ಮುಂಬೈ ಸಿಟಿ vs ನಾರ್ಥ್ ಈಸ್ಟ್ !

By Suvarna News  |  First Published Nov 21, 2020, 2:31 PM IST

ಕಳೆದ ವರ್ಷ ಮುಂಬೈ ಸಿಟಿ ಹಾಗೂ ನಾರ್ಥ್ ಈಸ್ಟ್ ಯುನೈಟೆಡ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಹೀಗಾಗಿ ಮಹತ್ವದ ಬದಲಾವಣೆಗಳೊಂದಿಗೆ ಉಭಯ ತಂಡಗಳು ಕಣಕ್ಕಿಳಿದಿವೆ. ಇಂದಿನ ಹೋರಾಟದಲ್ಲಿ ವಿಜಯ ಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ.


ಗೋವಾ(ನ.21):  ಉತ್ತಮ ಪ್ರಯತ್ನದ ನಡುವೆಯು ಸೋಲಿನ ಗಾಯವನ್ನು ಅನುಭವಿಸಿ ಈಗ ಹೊಸ ಉಲ್ಲಾಸದಲ್ಲಿರುವ ನಾರ್ಥ್ ಈಸ್ಟ್ ಯುನೈಟೆಡ್ ಹಾಗೂ ಮುಂಬೈ ಸಿಟಿ ಎಫ್ ಸಿ ತಂಡಗಳು ಹೀರೋ ಇಂಡಿಯನ್ ಸೂಪ್ ಲೀಗ್ ನ 7ನೇ ಆವೃತ್ತಿಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಲು ಇಲ್ಲಿನ ವಾಸ್ಕೋದಲ್ಲಿರುವ ತಿಲಕ್ ಮೈದಾನದಲ್ಲಿ ಇಂದು(ನ.21) ಮುಖಾಮುಖಿಯಾಗಲಿವೆ.

ISL 7: ಕೇರಳ ಬ್ಲಾಸ್ಟರ್ಸ್ ಮಣಿಸಿ ಶುಭಾರಂಭ ಮಾಡಿದ ATK ಮೋಹನ್ ಬಗಾನ್!.

Latest Videos

undefined

ಎರಡೂ ತಂಡಗಳು ಇದುವರೆಗೂ ಲೀಗ್ ನಲ್ಲಿ ಮೂರು ಬಾರಿ ನಾಕೌಟ್ ಹಂತವನ್ನು ತಲುಪಿವೆ. ಆದರೆ ಈ ಬಾರಿ ಸ್ಪೇನ್ ಮೂಲದ ಗೆರಾರ್ಡ್ ನಸ್ ಮತ್ತು ಸರ್ಗಿಯೋ ಲೊಬೆರಾ ತಂಡವನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲಿದ್ದಾರೆ ಎಂಬ ಭರವಸೆ ತಂಡದಲ್ಲಿದೆ, ಇಬ್ಬರೂ ಆಕ್ರಮಣಕಾರಿ ಆಟದಲ್ಲಿ ಪಳಗಿದ್ದರಿಂದ ಫುಟ್ಬಾಲ್ ಅಭಿಮಾನಿಗಳಿಗೆ ಉತ್ತಮ ಫುಟ್ಬಾಲ್ ವೀಕ್ಷಿಸುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಕಳೆದ ಋತುವಿನಲ್ಲಿ 9ನೇ ಸ್ಥಾನವನ್ನು ತಲುಪಿರುವ ನಾರ್ಥ್ ಈಸ್ಟ್ ಈ ಬಾರಿ 19 ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಅತ್ಯಂತ ಆತ್ಮವಿಶ್ವಾಸದಲ್ಲಿದೆ. ವಿದೇಶಿ ಆಟಗಾರರು ಮತ್ತು ದೇಶೀಯ ಉತ್ತಮ ಆಟಗಾರರಿಂದ ಕೂಡಿರುವ ತಂಡ ಈ ಬಾರಿ ಕನಿಷ್ಠ ಅಂಕಪಟ್ಟಿಯಲ್ಲಿ ಅರ್ಧದಲ್ಲಿ ನಿಲ್ಲುವ ಹೋರಾಟ ನೀಡಲಿದೆ. “ನಾವು ಅತ್ಯಂತ ಸ್ಪರ್ಧಾತ್ಮಕ ಹಾಗೂ ಬಲಿಷ್ಠ ತಂಡವಾಗಿ ಪ್ರದರ್ಶನ ನೀಡಲಿದ್ದೇವೆ. ಯಾವುದೇ ರೀತಿಯಲ್ಲಿ ಸೋಲನ್ನು ಒಪ್ಪಕೊಳ್ಳದೆ ಉತ್ತಮ ರೀತಿಯಲ್ಲಿ ಸ್ಪರ್ಧೆ ನೀಡುವುದು ನಮ್ಮ ಗುರಿಯಾಗಿದೆ,’’ ಎಂದು ನಾರ್ಥ್ ಈಸ್ಟ್ ಯುನೈಟೆಡ್ ನ ಕೋಚ್ ಗೆರಾರ್ಡ್ ನಸ್ ಹೇಳಿದ್ದಾರೆ.

ಪರ್ವತ ಪ್ರದೇಶದ ತಂಡ ಕಳೆದ ಆರು ಋತುಗಳಲ್ಲಿ ಕೇವಲ ಒಂದು ಬಾರಿ ಪ್ಲೇ ಆಫ್ ಹಂತವನ್ನು ತಲುಪಿತ್ತು. ಹಿಂದಿನ ಋತುವಿನಲ್ಲಿ ಸತತ 14 ಪಂದ್ಯಗಳಲ್ಲಿ ಜಯದಿಂದ ವಂಚಿತವಾಗಿತ್ತು. (6 ಡ್ರಾ, 8 ಸೋಲು). ಹೊಸ ಋತುವಿನ ಮೊದಲ ಪಂದ್ಯವು ನಿರೀಕ್ಷಿಸಿದಷ್ಟು ಸುಲಭವಾಗಿಲ್ಲ. “ಅವರು (ಮುಂಬೈ) ಸಂಘಟಿಸಿರುವ ಶಕ್ತಿಯ ಬಗ್ಗೆ ಚೆನ್ನಾಗಿ ಗೊತ್ತಿದೆ. ನಾವು ನಮ್ಮ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.ಸದ್ಯ ಒಂದು ಪಂದ್ಯದ ಬಗ್ಗೆ ಗಮನಹರಿಸಲಿದ್ದೇವೆ,’’ ಎಂದರು.

ಇದೇ ವೇಳೆ ಮುಂಬೈಸಿಟಿ ತಂಡ ಮೊದಲ ಪಂದ್ಯದಲ್ಲಿ ಜಯ ಗಳಿಸಿ ಶುಭಾರಂಭ ಕಾಣುವ ಗುರಿ ಹೊಂದಿದೆ. ಎದುರಿಗಿರುವ ಸವಾಲಗಳನ್ನು ಎದುರಿಸಿ ಯಶಸ್ಸಿನ ಹಾದಿ ತುಳಿಯುವುದು ತಂಡದ ಗುರಿಯಾಗಿದೆ. “ಇದು ಅತ್ಯಂತ ಕಠಿಣ ಪಂದ್ಯವೆನಿಸಲಿದೆ. ಈ ಬಾರಿ ಸಾಕಷ್ಟು ಉತ್ತಮ ತಂಡಗಳು ಇರುವುದರಿಂದ ಈ ಋತುವಿನಲ್ಲಿ ಸಾಕಷ್ಟು ಉತ್ತಮ ಸ್ಪರ್ಧೆ ನಡೆಯಲಿದೆ. ನಾನು ನನ್ನ ಆಟಗಾರರೊಂದಿಗೆ ಕಠಿಣ ಶ್ರಮ ವಹಿಸುತ್ತಿದ್ದೇನೆ. ನಮ್ಮ ಪ್ರದರ್ಶನ ನೋಡಿ ನಮ್ಮ ಅಭಿಮಾನಿಗಳು ಖುಷಿಪಡಬೇಕು,’’ ಎಂದು ಕಳೆದ ಮೂರು ವರ್ಷಗಳಿಂದ ಗೋವಾ ತಂಡದ ಕೋಚ್ ಆಗಿ ಯಶಸ್ಸಿಗೆ ಕಾರಣರಾಗಿದ್ದ ಲೊಬೆರಾ ಹೇಳಿದ್ದಾರೆ.

‘’ನಾವು ಆಕ್ರಮಣಕಾರಿ ಫುಟ್ಬಾಲ್ ಆಡುತ್ತೇವೆ. ಅಲ್ಪ ಅವಧಿಯಲ್ಲಿ ಈ ರೀತಿಯ ಶ್ರಮ ವಹಿಸುವುದು ಅಷ್ಟು ಸುಲಭವಲ್ಲ. ವಿಭಿನ್ನ ರೀತಿಯ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ದೊಡ್ಡ ಸವಾಲು,’’ ಎಂದು 43 ವರ್ಷದ ಕೋಚ್ ಹೇಳಿದ್ದಾರೆ. ತಂಡಕ್ಕೆ ಉತ್ತಮ ರೀತಿಯ ಸೌಲಭ್ಯ ಒದಗಿಸಿದ ಸಿಟಿ ಫುಟ್ಬಾಲ್ ಗ್ರೂಪ್ ನ ಮಾಲೀಕರಿಗೆ ಸರ್ಗಿಯೊ ಧನ್ಯವಾದ ಹೇಳಿದ್ದಾರೆ.

click me!