ಸೋತವರ ಸಮರ; ಗೆಲುವಿಗಾಗಿ ಬೆಂಗಳೂರು FC ಕಾತರ!

By Suvarna NewsFirst Published Dec 17, 2019, 10:09 PM IST
Highlights

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಗ್ಗರಿಸಿ ಈ ಆವೃತ್ತಿಯ ಮೊದಲ ಸೋಲು ಕಂಡಿರುವ ಬೆಂಗಳೂರು FC ಇದೀಗ ಗೆಲುವಿನ ಹಾದಿಗೆ ಮರಳಲು ಸಜ್ಜಾಗಿದೆ. ನಾರ್ತ್ ಈಸ್ಟ್ ವಿರುದ್ಧ ಹೋರಾಟಕ್ಕೆ ಬೆಂಗಳೂರು ಎಲ್ಲಾ ತಯಾರಿ ಮಾಡಿಕೊಂಡಿದೆ. ರೋಚಕ ಹೋರಾಟದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಗುವಾಹಟಿ(ಡಿ.17): ಇದುವರೆಗೂ ಸೋಲು ಅನುಭವಿಸದ ತಂಡಗಳು ಎನಿಸಿಕೊಂಡಿದ್ದ ಹಾಲಿ ಚಾಂಪಿಯನ್ ಬೆಂಗಳೂರು FC ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ಕಳೆದ ಪಂದ್ಯದಲ್ಲಿ ಆಘಾತ ಅನುಭವಿಸಿದೆ. ಇದೀಗ ಸೋತವರು ಮುಖಾಮುಖಿಯಾಗುತ್ತಿದ್ದಾರೆ. ಡಿ.18ರಂದು ನಡೆಯಲಿರುವ ಲೀಗ್ ಹಂತದ ಪಂದ್ಯದಲ್ಲಿ ಬೆಂಗಳೂರು ಹಾಗೂ ನಾರ್ತ್ ಈಸ್ಟ್ ಗುವಾಹಟಿಯ ಇಂದಿರಾ ಗಾಂಧಿ ಅಥ್ಲೆಟಿಕ್ಸ್  ಕ್ರೀಡಾಂಗಣದಲ್ಲಿ  ಗೆಲುವಿಗಾಗಿ ಹೋರಾಟ ನಡೆಸಲಿದೆ. 

ಇದನ್ನೂ ಓದಿ: ಐಎಸ್‌ಎಲ್‌ ಫುಟ್ಬಾಲ್: ಬಿಎಫ್‌ಸಿಗೆ ಮೊದಲ ಸೋಲು.

ಕಳೆದ ಪಂದ್ಯದಲ್ಲಿ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮನೆಯಂಗಣದಲ್ಲಿ ಎಟಿಕೆ ವಿರುದ್ಧ  3-0  ಗೋಲಿನ ಸೋಲಿನ ಆಘಾತ ಕಂಡು ಈ ಋತುವಿನ ಮೊದಲ ಸೋಲು ಅನುಭವಿಸಿತ್ತು. ಅದೇ ರೀತಿ ಬೆಂಗಳೂರು ಎಫ್ ಸಿ ಕೂಡ ಮನೆಯಂಗದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ವಿರುದ್ಧ ಋತುವಿನ ಮೊದಲ ಸೋಲನುಭವಿಸಿತ್ತು, ಉಭಯ ತಂಡಗಳಿಗೆ ಈಗ ಮತ್ತೆ ಜಯದ ಹಾದಿ ಕಂಡುಕೊಳ್ಳುವ ಗುರಿ ಇದೆ. ಬೆಂಗಳೂರು ಇಲ್ಲಿ ಜಯ ಗಳಿಸಿದರೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಲಿದೆ. 

ಇದನ್ನೂ ಓದಿ: ISL 2019: ಒಡಿಶಾ ಪ್ಲೇ ಆಫ್ ಆಸೆ ಜೀವಂತ

''ಎಟಿಕೆ ವಿರುದ್ಧ ಸೋಲು ಅನುಭವಿಸಿರುವುದು ಬೇಸರದ ಸಂಗತಿ, ನಾವು  ಇದುವರೆಗೂ ಆಡಿರುವ ಪಂದ್ಯಗಳಲ್ಲೇ ಅದು ಅತ್ಯಂತ ಕೆಟ್ಟ ಪಂದ್ಯ. ನಾವು ಹಿಂದೆಂದೂ ಅಷ್ಟು ಕೆಟ್ಟದ್ದಾಗಿ ಆಡಿರಲಿಲ್ಲ. ನಾವು ಅದೆಲ್ಲವನ್ನು ಮರೆತು ನಮ್ಮ ಕಠಿಣ ಶ್ರಮವನ್ನು ಮುಂದುವರಿಸಿದ್ದೇವೆ,'' ಎಂದು  ನಾರ್ತ್ ಈಸ್ಟ್ ಯುನೈಟೆಡ್ ತಂಡದ ಕೋಚ್ ರಾಬರ್ಟ್ ಜರ್ನಿ  ಹೇಳಿದ್ದಾರೆ. 

ಬುಧವಾರ ಬೆಂಗಳೂರು ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪರ್ವತ ಪ್ರದೇಶದ ತಂಡ ಅಸ್ಯಾಮೋ ಗ್ಯಾನ್ ಅವರ ಸೇವೆಯಿಂದ ವಂಚಿತವಾಗಲಿದೆ.  ಮೂರು ಗೋಲುಗಳನ್ನು ಗಳಿಸಿ ನಾರ್ತ್ ಈಸ್ಟ್ ನ  ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಗ್ಯಾನ್ ಅನುಪಸ್ಥಿತಿ ಬೆಂಗಳೂರು ತಂಡಕ್ಕೆ ಲಾಭವೆನಿಸದಲಿದೆ. ಪ್ರೀಮಿಯರ್ ಲೀಗ್ ಸ್ಟಾರ್ ಇಲ್ಲದೆ ತಂಡದ ಬಲ ಕುಂದುವುದು ಸಜಹ ಎಂಬುದು ಹಿಂದಿನ ಪಂದ್ಯದಲ್ಲಿ ಸಾಬೀತಾಗಿತ್ತು.  ಆದರೂ ಅತಿ ಕಡಿಮೆ ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿರುವ ಬೆಂಗಳೂರು ತಂಡದ ಡಿಫೆನ್ಸ್ ವಿಭಾಗ  ಬಲಿಷ್ಠವಾಗಿದೆ.  

ಚೆನ್ನೈಯಿನ್ ಎಫ್ ಸಿ ವಿರುದ್ಧದ ಪಂದ್ಯ ಮುಂದೂಡಲ್ಪಟ್ಟ ಕಾರಣ ನಾರ್ತ್ ಈಸ್ಟ್ ಗೆ ಹತ್ತು ದಿನಗಳ ಕಾಲ ಅಭ್ಯಾಸಕ್ಕೆ ಅವಕಾಶ ಸಿಕ್ಕಿತ್ತು. ಮ್ಯಾಕ್ಸಿಮಿಲಿಯಾನೊ ಬರ್ರಿಯೆರೋ ಅವರ ಸ್ಥಾನದಲ್ಲಿ ಉರುಗ್ವೆಯ ಫೆಡೆರಿಕೊ ಗಲ್ಲೆಗೊ ಅವರು ತಂಡವನ್ನು ಸೇರಿಕೊಳ್ಳಲಿರುವುದರಿಂದ ನಾರ್ತ್ ಈಸ್ಟ್ ತಂಡದ ಶಕ್ತಿ ಸಮತೋಲನಗೊಳ್ಳಲಿದೆ. ನಾರ್ತ್ ಈಸ್ಟ್ ನ ಡಿಫೆನ್ಸ್ ವಿಭಾಗ ದುರ್ಬಲವಾಗಿದ್ದು ಕಳೆದ ಮೂರು ಪಂದ್ಯಗಳಲ್ಲಿ ಆರು ಗೋಲುಗಳನ್ನು ಗಳಿಸಲು ಅವಕಾಶ ಮಾಡಿಕೊಟ್ಟಿರುವ ಡಿಫೆನ್ಸ್ ವಿಭಾಗದ ಪ್ರಮುಖ ಆಟಗಾರ ಕಯ್ ಹೀರಿಂಗ್ಸ್ ಎಚ್ಚೆತ್ತುಕೊಳ್ಳಬೇಕಿದೆ.

''ಈ ಪಂದ್ಯ ಕಠಿಣವಾಗಿದೆ. ಭಾರತದಲ್ಲಿ ಬೆಂಗಳೂರು ತಂಡ ಉತ್ತಮ ತಂಡಗಳಲ್ಲಿ ಒಂದಾಗಿದೆ. ಆದರೆ ಬೆಂಗಳೂರಿನಲ್ಲಿ ನಡೆದ ಪಂದ್ಯವನ್ನು ನೋಡಿದಾಗ ಆಟ ಮುಕ್ತವಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅದೇ ರೀತಿ ನಾಳೆಯ ಪಂದ್ಯದಲ್ಲಿ ನಮಗೂ ಗೆಲ್ಲುವ ಅವಕಾಶ ಇದೆ. ಆದ್ದರಿಂದ ಬುಧವಾರ ಏನು ಸಂಭವಿಸುತ್ತದೆ ಎಂದು ಹೇಳಲಾಗದು,'' ಎಂದು ಜರ್ನಿ ಹೇಳಿದರು. 

ಮುಂಬೈ ಸಿಟಿ ಎಫ್ ಸಿ ವಿರುದ್ಧ  3-2 ಅಂತರದಲ್ಲಿ ಸೋಲು ಅನುಭವಿಸುವ ಮೂಲಕ ಬೆಂಗಳೂರು ತಂಡದ ಅಜೇಯ ಓಟಕ್ಕೆ ತಡೆಯಾಯಿತು. ಇದುವರೆಗೂ ಕೇವಲ ಐದು ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿರುವ ಬೆಂಗಳೂರು ತಂಡ ಐಎಸ್ ಎಲ್ ನಲ್ಲಿ ಒಂದು ಉತ್ತಮ ತಂಡವೆನಿಸಿದೆ. 

''ಕಳೆದ ಬಾರಿ ನಾವು ಚಾಂಪಿಯನ್, ಆದರೆ ನಾವು ಈ ಬಾರಿ ಪ್ರಮುಖ ಆಟಗಾರ ಮಿಕು ಅವರನ್ನು ಕಳೆದುಕೊಂಡಿದ್ದೇವೆ. ಈಗಿರುವ ಸ್ಥಿತಿಗೆ ನಮ್ಮ ದುರಾದೃಷ್ಟವೇ ಕಾರಣ.  ಆಶಿಕ್ ಕುರುನಿಯನ್ ಇದುವರೆಗೂ ಗೋಲು ಗಳಿಸಿಲ್ಲ ಹಾಗೂ ಗೋಲು ಗಳಿಸಲು ನೆರವಾಗಿಲ್ಲ. ಉದಾಂತ್ ಸಿಂಗ್ ಗಳಿಸಿದ್ದು ಕೇವಲ ಒಂದು ಗೋಲು. ಆದ್ದರಿಂದ ನಮ್ಮಲ್ಲಿ ಸಮಸ್ಯೆ ಇದೆ ಎಂಬುದು ನಿಜವಾದರೂ ನಾವು ಉತ್ತಮ ರೀತಿಯಲ್ಲಿ ಕಠಿಣ ಪರಿಶ್ರಮ ತೋರಿದ್ದೇವೆ. ನಮ್ಮ ರಕ್ಷಣಾತ್ಮಕ ಆಟ ಮುಂದುವರಿದಿದೆ,'' ಎಂದು ಬೆಂಗಳೂರು ತಂಡದ ಪ್ರಧಾನ ಕೋಚ್ ಕಾರ್ಲೆಸ್ ಕ್ವಾಡ್ರಟ್ ಹೇಳಿದ್ದಾರೆ.

ಬುಧವಾರ ಪಂದ್ಯ  ಸಂಜೆ  6:00 ಗಂಟೆಗೆ ಆರಂಭಗೊಳ್ಳಲಿದೆ. 

click me!