ಇಂಡಿಯನ್ ಸೂಪರ್ ಲೀಗ್‌ನಲ್ಲಿಂದು ಕೇರಳ ಬ್ಲಾಸ್ಟರ್ಸ್-ಬೆಂಗಳೂರು ಎಫ್‌ಸಿ ಮುಖಾಮುಖಿ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ಲೇ ಆಫ್ ಪಂದ್ಯ
ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ಬೆಂಗಳೂರು, ಕೇರಳ ತಂಡಗಳು
ಬೆಂಗಳೂರು(ಮಾ.03) ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಪ್ಲೇ-ಆಫ್‌ನಲ್ಲಿ ಶುಕ್ರವಾರ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ ಬದ್ಧವೈರಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ. ಪಂದ್ಯಕ್ಕೆ ನಗರದ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬಿಎಫ್‌ಸಿ ಲೀಗ್ ಹಂತದ 20 ಪಂದ್ಯಗಳಲ್ಲಿ 11 ಗೆಲುವಿನೊಂದಿಗೆ 34 ಅಂಕಗಳಿಸಿ 4ನೇ ಸ್ಥಾನ ಪಡೆದರೆ, ಕೇರಳ 10 ಗೆಲುವಿನೊಂದಿಗೆ 31 ಅಂಕ ಸಂಪಾದಿಸಿ 5ನೇ ಸ್ಥಾನಿಯಾಗಿತ್ತು.
ಈ ಆವೃತ್ತಿಯಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ಕಂಠೀರವದಲ್ಲಿ ನಡೆದಿದ್ದ ಪಂದ್ಯದಲ್ಲಿ ಬಿಎಫ್‌ಸಿ ಗೆದ್ದಿತ್ತು. ಬಿಎಫ್‌ಸಿ ಈ ವರ್ಷ ಆಡಿದ ಎಂಟೂ ಪಂದ್ಯಗಳಲ್ಲಿ ಗೆದ್ದಿದ್ದು, ತವರಿನಲ್ಲಿ ಮತ್ತೊಮ್ಮೆ ಕೇರಳವನ್ನು ಮಣಿಸುವ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಜಯಗಳಿಸುವ ತಂಡ ಮಾ.7ರಂದು ಸೆಮಿಫೈನಲ್ನಲ್ಲಿ ಮುಂಬೈ ಎಫ್‌ಸಿ ವಿರುದ್ಧ ಆಡಲಿದೆ.
undefined
ಪಂದ್ಯ: 7.30ಕ್ಕೆ
ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್
ಪ್ರತ್ಯೇಕ ಆಸನ ವ್ಯವಸ್ಥೆ
ಕಂಠೀರವದಲ್ಲೇ ನಡೆದಿದ್ದ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಉಭಯ ತಂಡಗಳ ಅಭಿಮಾನಿಗಳು ಗ್ಯಾಲರಿಯಲ್ಲೇ ಹೊಡೆದಾಡಿಕೊಂಡಿದ್ದರು. ಮತ್ತೊಮ್ಮೆ ಸಂಘರ್ಷ ಉಂಟಾಗದಂತೆ ಎಚ್ಚರಿಕೆ ವಹಿಸಿರುವ ಬಿಎಫ್‌ಸಿ ಆಡಳಿತ, ಕೇರಳ ಅಭಿಮಾನಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿದೆ.
ಸ್ಟಾಫರ್ಡ್ ಕಪ್: ಸೆಮೀಸ್ ಪ್ರವೇಶಿಸಿದ ಎಫ್‌ಸಿಬಿಯು
ಬೆಂಗಳೂರು: ಪ್ರತಿಷ್ಠಿತ ಸ್ಟಾಫರ್ಡ್ ಕಪ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಎಫ್‌ಸಿ ಬೆಂಗಳೂರು ಯುನೈಟೆಡ್(ಎಫ್‌ಸಿಬಿಯು) ತಂಡ ಪ್ರವೇಶಿಸಿದೆ. ಬುಧವಾರ ನಡೆದ ಎಫ್‌ಸಿ ಡೆಕ್ಕನ್ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಜಯ ಸಾಧಿಸುವ ಮೂಲಕ ಸೆಮೀಸ್‌ಗೇರಿತು. ಅಂತಿಮ 4ರ ಸುತ್ತಿನಲ್ಲಿ ಬೆಂಗಳೂರಿನ ಎಎಸ್‌ಸಿ ತಂಡದ ವಿರುದ್ಧ ಸೆಣಸಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಐ-ಲೀಗ್‌ನ ಡೆಲ್ಲಿ ಎಫ್‌ಸಿ, ಐಎಸ್‌ಎಲ್‌ನ ಚೆನ್ನೈಯಿನ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.
ವಿಶ್ವಕಪ್ ವಿಜೇತ ತಂಡದ ಆಟಗಾರರಿಗೆ 35 ಚಿನ್ನದ ಐಫೋನ್ ನೀಡಿದ ಮೆಸ್ಸಿ, ಫೋಟೋ ವೈರಲ್!
ಮಾರ್ಚ್ 6ರಿಂದ ಬೆಂಗ್ಳೂರಲ್ಲಿ ಮಹಿಳಾ ಟೆನಿಸ್ ಟೂರ್ನಿ
ಬೆಂಗಳೂರು: ಮಾರ್ಚ್ 6ರಿಂದ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ಐಟಿಎಫ್ ವುಮೆನ್ಸ್ ಓಪನ್ ಟೆನಿಸ್ ಟೂರ್ನಿ ನಡೆಯಲಿದೆ. ಭಾರತದ ಅಗ್ರ ಆಟಗಾರ್ತಿಯರಾದ ಅಂಕಿತಾ ರೈನಾ, ಕರ್ಮನ್‌ಕೌರ್ ಸೇರಿ ಕೆಲ ವಿದೇಶಿ ಆಟಗಾರ್ತಿಯರೂ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಆಸ್ಪ್ರೇಲಿಯನ್ ಓಪನ್ ಪ್ರಧಾನ ಸುತ್ತಿನಲ್ಲಿ ಆಡಿದ ಚೆಕ್ ಗಣರಾಜ್ಯದ 15 ವರ್ಷದ ಬ್ರೆಂಡಾ ಫ್ರುವಿರ್ಟೊವಾ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.
ವಿಶ್ವಕಪ್ ಆವೃತ್ತಿಯೊಂದರ ಗರಿಷ್ಠ ಗೋಲು ದಾಖಲೆ ವೀರ ಫಾಂಟೈನ್ ನಿಧನ
ಪ್ಯಾರಿಸ್: ಫುಟ್ಬಾಲ್ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಗೋಲು ಬಾರಿಸಿದ ದಾಖಲೆ ಹೊಂದಿರುವ ಫ್ರಾನ್ಸ್‌ನ ದಿಗ್ಗಜ ಫುಟ್ಬಾಲಿಗ ಜಸ್ಟ್ ಫಾಂಟೈನ್(89) ಬುಧವಾರ ನಿಧನರಾದರು. 1958ರಲ್ಲಿ ಸ್ವೀಡನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಫಾಂಟೈನ್ 6 ಪಂದ್ಯಗಳಲ್ಲಿ 13 ಗೋಲುಗಳನ್ನು ಬಾರಿಸಿದ್ದರು. ಆ ದಾಖಲೆಯನ್ನು ಇಂದಿಗೂ ಯಾವ ಆಟಗಾರನಿಗೂ ಮುರಿಯಲು ಸಾಧ್ಯವಾಗಲಿಲ್ಲ.