ISL 2021 22: ಎಫ್‌ಸಿ ಗೋವಾ ಎದುರು ಆಘಾತಕಾರಿ ಸೋಲು ಕಂಡ ಬೆಂಗಳೂರು ಎಫ್‌ಸಿ..!

By Suvarna News  |  First Published Dec 13, 2021, 8:46 AM IST

* ಐಎಸ್‌ಎಲ್ ಟೂರ್ನಿಯಲ್ಲಿ ನಾಲ್ಕನೇ ಸೋಲು ಕಂಡ ಬಿಎಫ್‌ಸಿ

* 8ನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಯಲ್ಲಿ ಚೆಟ್ರಿ ಪಡೆ

* ಎಫ್‌ಸಿ ಗೋವಾ ಎದುರು ಬೆಂಗಳೂರು ಎಫ್‌ಸಿಗೆ 2-1 ಅಂತರದ ಸೋಲು


ಬ್ಯಾಂಬೊಲಿಮ್(ಡಿ.13)‌: 8ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (Indian Super League) ಫುಟ್ಬಾಲ್‌ ಟೂರ್ನಿಯಲ್ಲಿ ಸುನಿಲ್ ಚೆಟ್ರಿ (Sunil Chhetri) ನೇತೃತ್ವದ ಬೆಂಗಳೂರು ಎಫ್‌ಸಿ (Bengaluru FC) ತಂಡ ಸರಣಿ ಸೋಲು ಕಾಣುತ್ತಿದೆ. ಶನಿವಾರ ರಾತ್ರಿ ನಡೆದ ಎಫ್‌ಸಿ ಗೋವಾ (FC Goa) ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ 1-2 ಗೋಲುಗಳಲ್ಲಿ ಪರಾಭವಗೊಂಡಿತು. 6 ಪಂದ್ಯಗಳಲ್ಲಿ ತಂಡ 4 ಸೋಲು ಕಂಡಿದ್ದು, ಕೇವಲ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ. ಸುನಿಲ್‌ ಚೆಟ್ರಿ ಪಡೆ ಲಯ ಕಂಡುಕೊಳ್ಳಲು ತಿಣುಕಾಡುತ್ತಿದ್ದು, ತಂಡದ ಸದ್ಯದ ಪ್ರದರ್ಶನ ಗಮನಿಸಿದರೆ ನಾಕೌಟ್‌ ಹಂತಕ್ಕೇರುವುದು ಅನುಮಾನ ಎನಿಸುತ್ತಿದೆ.

ಈ ಹಿಂದೆ ಉಭಯ ತಂಡಗಳು ಒಟ್ಟು 9 ಬಾರಿ ಮುಖಾಮುಖಿಯಾಗಿದ್ದವು. ಈ ಪೈಕಿ ಬೆಂಗಳೂರು ಎಫ್‌ಸಿ (BFC) 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಎಫ್‌ಸಿ ಗೋವಾ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿತ್ತು, ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಮತ್ತೊಂದು ಗೆಲುವು ದಾಖಲಿಸುವ ಕನವರಿಕೆಯೊಂದಿಗೆ ಕಣಕ್ಕಿಳಿದಿದ್ದ ಬೆಂಗಳೂರು ಎಫ್‌ಸಿಗೆ ಗೋವಾ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ. 

Latest Videos

undefined

ಪಂದ್ಯದ 16ನೇ ನಿಮಿಷದಲ್ಲಿ ಆಶಿಕಿ ಬಾರಿಸಿದ ಗೋಲಿನ ನೆರವಿನಿಂದ ಗೋವಾ ತಂಡವು 1-0 ಮುನ್ನಡೆ ಸಾಧಿಸಿತು. ಇದಾದ ಬಳಿಕ ಮೊದಲಾರ್ಧ ಮುಕ್ತಾಯಕ್ಕೂ ಮುನ್ನ ಬೆಂಗಳೂರು ಎಫ್‌ಸಿ ತಂಡದ ಸಿಲ್ಟನ್ ಸಿಲ್ವಾ (Cleiton Silva) ಆಕರ್ಷಕ ಗೋಲು ಬಾರಿಸುವ ಮೂಲಕ 1-1ರ ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಬಳಿಕ ದ್ವಿತಿಯಾರ್ಧದ 70ನೇ ನಿಮಿಷದಲ್ಲಿ ದೇವೆಂದ್ರ ಭರ್ಜರಿ ಗೋಲು ಬಾರಿಸುವ ಮೂಲಕ ಗೋವಾ ತಂಡಕ್ಕೆ 2-1ರ ಮುನ್ನಡೆ ಒದಗಿಸಿಕೊಟ್ಟರು. ಅಂದಹಾಗೆ ಇದು ಈ ಆವೃತ್ತಿಯ ಐಎಸ್‌ಎಲ್ ಟೂರ್ನಿಯಲ್ಲಿ ದೇವೇಂದ್ರ ಬಾರಿಸಿದ ಮೊದಲ ಗೋಲು ಎನಿಸಿತು. ಇದಾದ ಬಳಿಕ ಸುನಿಲ್ ಚೆಟ್ರಿ ಪಡೆ ಗೋಲು ಬಾರಿಸಿ ಸಮಬಲ ಸಾಧಿಸಲು ಸಾಕಷ್ಟು ಪ್ರಯತ್ನಿಸಿತಾದರೂ ಯಶಸ್ವಿಯಾಗಲಿಲ್ಲ. ಬಿಎಫ್‌ಸಿ ತನ್ನ ಮುಂದಿನ ಪಂದ್ಯವನ್ನು ಡಿಸೆಂಬರ್ 16ರಂದು ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಆಡಲಿದೆ.

The curl on that free-kick from ! 🤩🔥 pic.twitter.com/2noGtGhmLG

— Indian Super League (@IndSuperLeague)

The Blues have been defeated in Bambolim. pic.twitter.com/GULW0CfBLQ

— Bengaluru FC (@bengalurufc)

ರಾಷ್ಟ್ರೀಯ ಹಾಕಿ: ಇಂದು ಕರ್ನಾಟಕ-ಪುದುಚೇರಿ ಪಂದ್ಯ

ಪುಣೆ: 11ನೇ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಟೂರ್ನಿಯ 2ನೇ ಪಂದ್ಯದಲ್ಲಿ ಸೋಮವಾರ ಕರ್ನಾಟಕ, ಪುದುಚೇರಿ ವಿರುದ್ಧ ಸೆಣಸಲಿದೆ. ‘ಸಿ’ ಗುಂಪಿನಲ್ಲಿರುವ ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದವು. 

Badminton World Championships: ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಕಿದಂಬಿ ಶ್ರೀಕಾಂತ್

ಜಮ್ಮು-ಕಾಶ್ಮೀರ ವಿರುದ್ಧ ಕರ್ನಾಟಕ 14-0 ಗೋಲುಗಳಿಂದ ಜಯಿಸಿದರೆ, ಅರುಣಾಚಲ ಪ್ರದೇಶ ವಿರುದ್ಧ ಪುದುಚೇರಿ 14-0ಯಲ್ಲಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಕರ್ನಾಟಕ ಗೆದ್ದರೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಅರುಣಾಚಲ ಪ್ರದೇಶ ಎದುರಾಗಲಿದೆ.

ಏಷ್ಯನ್‌ ರೋಯಿಂಗ್‌: ಭಾರತಕ್ಕೆ ಒಟ್ಟು 6 ಪದಕ

ಬಾನ್‌ ಚಾಂಗ್‌(ಥಾಯ್ಲೆಂಡ್‌): ಏಷ್ಯನ್‌ ರೋಯಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ (Asian Rowing Championships) ಭಾರತೀಯರು 2 ಚಿನ್ನ, 4 ಬೆಳ್ಳಿ ಸೇರಿ ಒಟ್ಟು 6 ಪದಕಗಳನ್ನು ಜಯಿಸಿ ತವರಿಗೆ ವಾಪಸಾಗಲಿದ್ದಾರೆ. ಸ್ಪರ್ಧೆಯ ಅಂತಿಮ ದಿನವಾದ ಭಾನುವಾರ ಪುರುಷರ ಲೈಟ್‌ವೇಟ್‌ ಸಿಂಗಲ್ಸ್‌ ಸ್ಕಲ್ಸ್‌ ವಿಭಾಗದಲ್ಲಿ ಹಿರಿಯ ರೋಯಿಂಗ್‌ ಪಟು ಅರವಿಂದ್‌ ಸಿಂಗ್‌ ಚಿನ್ನದ ಪದಕ ಗೆದ್ದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಅರವಿಂದ್‌, ಡಬಲ್ಸ್‌ ಸ್ಕಲ್ಸ್‌ ವಿಭಾಗದಲ್ಲಿ ಅರ್ಜುನ್‌ ಲಾಲ್‌ ಜೊತೆ 11ನೇ ಸ್ಥಾನ ಪಡೆದಿದ್ದರು. ಭಾನುವಾರ ಪುರುಷರ ಲೈಟ್‌ವೇಟ್‌ ಡಬಲ್ಸ್‌ ಸ್ಕಲ್ಸ್‌, ಪುರುಷರ ಕ್ವಾಡ್ರಪಲ್‌ ಸ್ಕಲ್ಸ್‌ ಹಾಗೂ ಪುರುಷರ ಕಾಕ್ಸ್‌ಲೆಸ್‌ ಫೋರ್‌ ಸ್ಪರ್ಧೆಗಳಲ್ಲಿ ಭಾರತ ಬೆಳ್ಳಿ ಪದಕ ಜಯಿಸಿತು.

click me!