ಮತ್ತೆರಡು ವರ್ಷಗಳ ಅವಧಿಗೆ ಸುನಿಲ್ ಚೆಟ್ರಿ ಜತೆ ಬಿಎಫ್‌ಸಿ ಒಪ್ಪಂದ

By Suvarna News  |  First Published Jun 21, 2021, 1:30 PM IST

* ಬಿಎಫ್‌ಸಿ ಜತೆ ಮತ್ತೆರಡು ವರ್ಷಗಳ ಕಾಲ ಆಡಲು ಒಪ್ಪಂದಕ್ಕೆ ಸಹಿ ಮಾಡಿದ ಚೆಟ್ರಿ

* ಸುನಿಲ್ ಚೆಟ್ರಿ ಬೆಂಗಳೂರು ಎಫ್‌ಸಿ ತಂಡದ ಸ್ಟಾರ್ ಆಟಗಾರ

* 2023ರವರೆಗೂ ಬೆಂಗಳೂರು ಎಫ್‌ಸಿ ತಂಡವನ್ನು ಪ್ರತಿನಿಧಿಸಲಿದ್ದಾರೆ ಸುನಿಲ್ ಚೆಟ್ರಿ


ಬೆಂಗಳೂರು(ಜೂ.21): ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ, ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಕ್ಲಬ್‌ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಜೊತೆ 2023ರ ವರೆಗೂ ಮುಂದುವರಿಯಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 

36 ವರ್ಷದ ಸುನಿಲ್ ಚೆಟ್ರಿ, 2013ರಿಂದ ಬಿಎಫ್‌ಸಿ ಪರ ಆಡುತ್ತಿದ್ದು, ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ಪರ 101 ಗೋಲುಗಳನ್ನು ಬಾರಿಸಿದ್ದು, ಒಮ್ಮೆ ಐಎಸ್‌ಎಲ್‌ನಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಐಎಸ್‌ಎಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಭಾರತೀಯ ಆಟಗಾರ ಎನ್ನುವ ದಾಖಲೆಯೂ ಚೆಟ್ರಿ ಹೆಸರಿನಲ್ಲಿದೆ. 94 ಪಂದ್ಯಗಳಲ್ಲಿ ಅವರು 47 ಗೋಲು ಬಾರಿಸಿದ್ದಾರೆ. 

Latest Videos

undefined

ಮತ್ತೆರಡು ವರ್ಷಗಳ ಕಾಲ ಬೆಂಗಳೂರು ಎಫ್‌ಸಿ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದಕ್ಕೆ ಸಂತೋಷವಾಗುತ್ತಿದೆ. ಬೆಂಗಳೂರು ನನ್ನ ತವರು ಹಾಗೂ ಇಲ್ಲಿನ ಜನರು ನನ್ನ ಕುಟುಂಬವಿದ್ದಂತೆ. ನಾನು ಮೊದಲ ಬಾರಿಗೆ ಬಿಎಫ್‌ಸಿ ಜತೆ ಒಪ್ಪಂದಕ್ಕೆ ಸಹಿಹಾಕಿದ್ದು, ನಿನ್ನೆ ಮೊನ್ನೆ ಇರಬೇಕು ಎಂದೆನಿಸುತ್ತಿದೆ. ಬಿಎಫ್‌ಸಿ ಜತೆಗಿನ ನನ್ನ ಪಯಣ ಅವಿಸ್ಮರಣೀಯವಾದದ್ದು. ಬಿಎಫ್‌ಸಿ ಕ್ಲಬ್‌ ಪರ ಆಡುವುದು ನನಗಿಷ್ಟ. ಈ ನಗರ ಹಾಗೂ ಇಲ್ಲಿನ ಅಭಿಮಾನಿಗಳು ತೋರುವ ಪ್ರೀತಿ ಈ ತಂಡದೊಟ್ಟಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಮಾಡಿದೆ. ಮುಂದಿನ ದಿನಗಳಲ್ಲಿ ಈ ತಂಡದೊಂದಿಗಿನ ಹಲವು ಮಧುರ ಕ್ಷಣಗಳನ್ನು ಎದುರು ನೋಡುತ್ತಿರುವುದಾಗಿ ಸುನಿಲ್ ಚೆಟ್ರಿ ಹೇಳಿದ್ದಾರೆ.

ಫುಟ್ಬಾಲ್ ದಿಗ್ಗಜ ಲಿಯೋನೆಲ್‌ ಮೆಸ್ಸಿ ಜೊತೆ ನನ್ನ ಹೋಲಿಕೆ ಬೇಡ: ಸುನಿಲ್ ಚೆಟ್ರಿ

2020-21ನೇ ಸಾಲಿನ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಪರ ಸುನಿಲ್‌ ಚೆಟ್ರಿ ಗರಿಷ್ಠ ಗೋಲು ಬಾರಿಸಿದ್ದರು. ಬಿಎಫ್‌ಸಿ ಪರ ಕಳೆದ ಆವೃತ್ತಿಯಲ್ಲಿ 20 ಪಂದ್ಯಗಳನ್ನಾಡಿ 8 ಗೋಲುಗಳನ್ನು ಬಾರಿಸಿದ್ದರು. ಆಗಸ್ಟ್‌ನಲ್ಲಿ ನಡೆಯಲಿರುವ 2021ರ ಎಎಫ್‌ಸಿ ಕಪ್‌ ಪ್ಲೇ-ಆಫ್‌ ಪಂದ್ಯದಲ್ಲಿ ಬಿಎಫ್‌ಸಿ ತಂಡ ಮಾಲ್ಡೀವ್ಸ್‌ನ ಈಗಲ್ಸ್‌ ಎಫ್‌ಸಿ ವಿರುದ್ಧ ಆಡಲಿದೆ.
 

click me!