ನಿಜವಾಯ್ತು ಘಾನಾ ಮಂತ್ರವಾದಿ ಭವಿಷ್ಯ: ಕೊನೆಗೂ ಗೋಲು ಹೊಡೆದ ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಕೇನ್‌!

Published : Jun 29, 2026, 09:36 AM IST
Harry Kane

ಸಾರಾಂಶ

ಇಂಗ್ಲೆಂಡ್ ಪರ ಹ್ಯಾರಿ ಕೇನ್ ದಾಖಲೆಯ ಗೋಲು ಬಾರಿಸಿದರೆ, ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಸತತ ಮೂರನೇ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ವಿಶ್ವಕಪ್‌ನಲ್ಲಿ ಒಂದೂ ಪಂದ್ಯ ಗೆಲ್ಲದ ಉರುಗ್ವೆ ತಂಡಕ್ಕೆ ಆ ದೇಶದ ಫುಟ್ಬಾಲ್ ಸಂಸ್ಥೆ ವಿಶೇಷ ವಿಮಾನವನ್ನು ರದ್ದುಗೊಳಿಸಿ ವಿಶಿಷ್ಟ ಶಿಕ್ಷೆ ನೀಡಿದೆ.

ನ್ಯೂಯಾರ್ಕ್‌: ಘಾನಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ ಗೋಲು ರಹಿತ ಡ್ರಾ ಸಾಧಿಸಿದಾಗ, ಘಾನಾದ ಮಂತ್ರಿವಾದಿ ನಾನಾ ಕ್ವಾಕು, ಇಂಗ್ಲೆಂಡ್‌ನ ನಾಯಕ ಹ್ಯಾರಿ ಕೇನ್‌ರನ್ನು ಕಟ್ಟಿಹಾಕಿದ್ದಾಗಿ ಹೇಳಿಕೊಂಡಿದ್ದರು. ಪಂದ್ಯದ ಬಳಿಕ ಕೇನ್‌ರನ್ನು ಬಿಡುಗಡೆಗೊಳಿಸಿದ್ದೇನೆ, ಮುಂದಿನ ಪಂದ್ಯದಲ್ಲಿ ಕೇನ್‌ ಗೋಲು ಬಾರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ. ಪನಾಮ ವಿರುದ್ಧ ಇಂಗ್ಲೆಂಡ್‌ 2-0 ಗೋಲುಗಳ ಜಯ ಸಾಧಿಸಿದೆ. ಜ್ಯೂಡ್‌ ಬೆಲ್ಲಿಂಗ್‌ಹ್ಯಾಮ್‌ 62, ಹ್ಯಾರಿ ಕೇನ್‌ 67ನೇ ನಿಮಿಷದಲ್ಲಿ ಗೋಲು ಬಾರಿಸಿದರು.

11ನೇ ಗೋಲು

ಹ್ಯಾರಿ ಕೇನ್‌ ವಿಶ್ವಕಪ್‌ನಲ್ಲಿ 11ನೇ ಗೋಲು ದಾಖಲಿಸಿದ್ದು, ಟೂರ್ನಿಯ ಇತಿಹಾಸದಲ್ಲಿ ಇಂಗ್ಲೆಂಡ್‌ ಪರ ಅತಿಹೆಚ್ಚು ಗೋಲು ಬಾರಿಸಿದ ಆಟಗಾರ ಎನಿಸಿದ್ದಾರೆ. 10 ಗೋಲು ಗಳಿಸಿದ್ದ ಗ್ಯಾರಿ ಲೆನೆಕರ್‌ ದಾಖಲೆಯನ್ನು ಕೇನ್‌ ಮುರಿದಿದ್ದಾರೆ.

ಅರ್ಜೆಂಟೀನಾಗೆ ಹ್ಯಾಟ್ರಿಕ್‌ ಜಯ!

ಅರ್ಲಿಂಗ್‌ಟನ್‌: ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಗುಂಪು ಹಂತದಲ್ಲಿ ಸತತ 3 ಗೆಲುವುಗಳೊಂದಿಗೆ, ಅಂತಿಮ-32ರ ಸುತ್ತಿಗೆ ಕಾಲಿಡಲಿದೆ. ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ, ಅಲ್ಜೀರಿಯಾ ಹಾಗೂ ಆಸ್ಟ್ರಿಯಾ ವಿರುದ್ಧ ಗೆದ್ದಿದ್ದ ಅರ್ಜೆಂಟೀನಾ, ಗುಂಪು ಹಂತದ ಕೊನೆ ಪಂದ್ಯದಲ್ಲಿ ಭಾನುವಾರ ಜೋರ್ಡನ್‌ ವಿರುದ್ಧ 3-1 ಗೋಲುಗಳಲ್ಲಿ ಜಯಿಸಿತು.

ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮೆಸ್ಸಿ ಹೊರತುಪಡಿಸಿ, ಬೇರೆ ಆಟಗಾರರು ತಂಡದ ಪರ ಗೋಲು ದಾಖಲಿಸಿದರು. ಜಿಯೊವಾನಿ ಲೊ ಸೆಲ್ಸೊ 19ನೇ ನಿಮಿಷದಲ್ಲಿ ತಂಡದ ಪರ ಖಾತೆ ತೆರೆದರು. 31ನೇ ನಿಮಿಷದಲ್ಲಿ ಲುಟಾರೊ ಮಾರ್ಟಿನೆಜ್‌ ಪೆನಾಲ್ಟಿ ಮೂಲಕ 2ನೇ ಗೋಲು ಗಳಿಸಿದರು. 60ನೇ ನಿಮಿಷದಲ್ಲಿ ಮೈದಾನ ಪ್ರವೇಶಿಸಿದ ಮೆಸ್ಸಿ, 80ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 55ನೇ ನಿಮಿಷದಲ್ಲಿ ತಮಾರಿ, ಜೋರ್ಡನ್‌ ಪರ ಏಕೈಕ ಗೋಲು ದಾಖಲಿಸಿದರು.

ಮತ್ತೊಮ್ಮೆ ಡ್ರಾಗೆ ತೃಪ್ತಿಪಟ್ಟ ರೊನಾಲ್ಡೋರ ಪೋರ್ಚುಗಲ್‌

ಮಯಾಮಿ: ಕ್ರಿಸ್ಟಿಯಾನೋ ರೊನಾಲ್ಡೋರ ಪೋರ್ಚುಗಲ್‌, ಗುಂಪು ಹಂತದಲ್ಲಿ 2ನೇ ಬಾರಿಗೆ ಡ್ರಾಗೆ ತೃಪ್ತಿಪಟ್ಟಿದೆ. ಕೊಲೊಂಬಿಯಾ ವಿರುದ್ಧ ಭಾನುವಾರದ ಪಂದ್ಯ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿತು. ಆದರೂ, ‘ಕೆ’ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಕಾಂಗೋ ವಿರುದ್ಧ 1-1ರ ಡ್ರಾ ಸಾಧಿಸಿದ್ದ ಪೋರ್ಚುಗಲ್‌, ಉಜ್ಬೇಕಿಸ್ತಾನ ವಿರುದ್ಧ 5-0ಯಲ್ಲಿ ಗೆದ್ದಿತ್ತು.

ಇನ್ನು, ಅಲ್ಜೀರಿಯಾ-ಆಸ್ಟ್ರಿಯಾ ಪಂದ್ಯ 3-3ರಲ್ಲಿ ಡ್ರಾಗೊಂಡರೆ, ಉಜ್ಬೇಕಿಸ್ತಾನ ವಿರುದ್ಧ ಕಾಂಗೋ 3-1ರಲ್ಲಿ ಜಯಿಸಿತು. ಘಾನಾ ವಿರುದ್ಧ ಕ್ರೊವೇಷಿಯಾಗೆ 2-1ರ ಜಯ ದೊರೆಯಿತು.

ಒಂದೂ ಪಂದ್ಯ ಗೆಲ್ಲದ ಉರುಗ್ವೆಗೆ ‘ವಿಶಿಷ್ಟ’ ಶಿಕ್ಷೆ!

ಪ್ಲಾಯಾ ಡೆಲ್ ಕಾರ್ಮೆನ್ (ಮೆಕ್ಸಿಕೋ): ಫಿಫಾ ವಿಶ್ವಕಪ್‌ನಲ್ಲಿ ಒಂದೂ ಪಂದ್ಯ ಗೆಲ್ಲದ ಉರುಗ್ವೆ ತಂಡದ ವಿರುದ್ಧ ಆ ದೇಶದ ಫುಟ್ಬಾಲ್‌ ಸಂಸ್ಥೆ ಸಿಟ್ಟಾಗಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಸೋತ ಉರುಗ್ವೆ ತಂಡಕ್ಕೆ ವಿಶಿಷ್ಟ ಶಿಕ್ಷೆ ವಿಧಿಸಿದೆ. ಆಟಗಾರರು ತವರಿಗೆ ವಾಪಸಾಗಲೆಂದು ಉರುಗ್ವೆ ಫುಟ್ಬಾಲ್‌ ಸಂಸ್ಥೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿತ್ತು. ಆದರೆ ಅಭಿಮಾನಿಗಳು ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ವಿಶೇಷ ವಿಮಾನವನ್ನು ರದ್ದುಗೊಳಿಸಿ, ನಿಮ್ಮ ನಿಮ್ಮ ಖರ್ಚಿನಲ್ಲಿ ವಾಣಿಜ್ಯ ವಿಮಾನದಲ್ಲಿ ಸೀಟ್‌ ಬುಕ್ ಮಾಡಿಕೊಂಡು ಮನೆ ಸೇರಿಕೊಳ್ಳಿ ಎಂದು ಆಟಗಾರರಿಗೆ ಸೂಚಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Indian Super League: ISL ಪಂದ್ಯದಲ್ಲಿ ಕರ್ನಾಟಕದ ಅಪರೂಪದ ಸಾಧನೆ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಮ್ಯಾಚ್!
ಇಂದಿನಿಂದ 13ನೇ ಆವೃತ್ತಿಯ ಐಎಸ್‌ಎಲ್‌ ಶುರು; ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿಗೆ ಡೆಲ್ಲಿ ಸವಾಲು