Germany Knocked Out of FIFA World Cup 2026: ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದೆ. 4 ಬಾರಿ ಚಾಂಪಿಯನ್ ಜರ್ಮನಿ ತಂಡ ಅಂತಿಮ 32ರ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿದೆ. 40ನೇ ರ್‍ಯಾಂಕಿಂಗ್‌ನೊಂದಿಗೆ ಈ ವಿಶ್ವಕಪ್‌ಗೆ ಕಾಲಿಟ್ಟಿದ್ದ ಪರಗ್ವೆ ವಿರುದ್ಧ ವಿಶ್ವ ನಂ.12 ಜರ್ಮನಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 3-4 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ.
ಗುಂಪು ಪಂದ್ಯ 3 ಪಂದ್ಯಗಳಲ್ಲಿ 10 ಗೋಲು ಬಾರಿಸಿ, ಅಜೇಯವಾಗಿಯೇ ನಾಕೌಟ್ ತಲುಪಿದ್ದ ಜರ್ಮನಿ ತಂಡವು ಪರಗ್ವೆಯ ರಕ್ಷಣಾ ಪಡೆಯನ್ನು ಭೇದಿಸಲು ಹರಸಾಹಸಪಟ್ಟಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದವು. ಜ್ಯುಲಿಯೋ ಎನ್ಸಿಕೊ ಮೊದಲಾರ್ಧದಲ್ಲಿ ಗೋಲು ದಾಖಲಿಸಿ ಪರಗ್ವೆಗೆ ಮುನ್ನಡೆ ಒದಗಿಸಿದರು. 52ನೇ ನಿಮಿಷದಲ್ಲಿ ಕೇ ಹಾವರ್ಟ್ಜ್ ದಾಖಲಿಸಿದ ಗೋಲಿನಿಂದಾಗಿ ಜರ್ಮನಿ ಸಮಬಲ ಸಾಧಿಸಿತು. ಬಳಿಕ ಗೋಲು ದಾಖಲಾಗಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ತಲಾ 5 ಪ್ರಯತ್ನಗಳಲ್ಲಿ ಉಭಯ ತಂಡಗಳು 3-3 ಸಮಬಲ ಸಾಧಿಸಿದವು. ಸಡನ್ ಡೆತ್‌ನಲ್ಲಿ ಜರ್ಮನಿ ಗೋಲು ಬಾರಿಸಲು ವಿಫಲವಾಯಿತು. ಪರಗ್ವೆ ಗೋಲು ದಾಖಲಿಸಿ ಜಯಭೇರಿ ಬಾರಿಸಿ ವಿಶ್ವಕಪ್‌ನಲ್ಲಿ 5ನೇ ಬಾರಿ ಪ್ರಿ ಕ್ವಾರ್ಟರ್ ಫೈನಲ್‌ಗೇರಿತು.
ಜರ್ಮನಿ 2014ರಲ್ಲಿ ಚಾಂಪಿಯನ್ ಆಗಿತ್ತು. ಆ ಬಳಿಕ 2018, 2022ರ ವಿಶ್ವಕಪ್‌ನಲ್ಲಿ ತಂಡ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಈ ಬಾರಿ ತಂಡ ನಾಕೌಟ್ ಪ್ರವೇಶಿಸಿದರೂ ಪ್ರಿ ಕ್ವಾರ್ಟರ್ ಫೈನಲ್‌ಗೇರಲು ವಿಫಲವಾಗಿದೆ.
ಜರ್ಮನಿ ವಿರುದ್ಧ ಪರಗ್ವೆ ಪಾಲಿನ ಹೀರೋ ಆಗಿ ಮೂಡಿಬಂದ ಓರ್ಲಾಂಡೊ ಗಿಲ್, ಈ ಹಿಂದೆ ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಹಳೆ ಕ್ಲಬ್‌ನ ಜೆರ್ಸಿಗಳನ್ನು ಮಾರಾಟ ಮಾಡುವ ಸ್ಥಿತಿಗೆ ತಲುಪಿದ್ದರು. ಈ ಬಗ್ಗೆ ಅವರ ಪತ್ನಿ 2 ವರ್ಷದ ಹಿಂದೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸೋಮವಾರದ ಜರ್ಮನಿ ವಿರುದ್ಧ ಪಂದ್ಯದ ಬಳಿಕ ಅವರ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಪಂದ್ಯದಲ್ಲಿ ಹಲವು ಬಾರಿ ಜರ್ಮನಿಯ ಗೋಲು ಪ್ರಯತ್ನವನ್ನು ತಡೆದ ಗಿಲ್ ಬಳಿಕ ಪೆನಾಲ್ಟಿ ಕಾರ್ನರ್‌ನಲ್ಲೂ ಪರಗ್ವೆ ಪಾಲಿನ ಆಪತ್ಬಾಂಧವರಾದರು.
ಜರ್ಮನಿಯ ಗೋಲ್‌ಕೀಪರ್ ಮ್ಯಾನುಯೆಲ್ ನೋಯ ಅವರು ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ಪರಗ್ವೆ ವಿರುದ್ಧ ಸೋಲಿನ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ನೋಯ ಅವರು 2024ರ ಯುರೋಪಿಯನ್ ಚಾಂಪಿಯನ್‌ಶಿಪ್ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದರು. ಆದರೆ ಈ ಬಾರಿ ವಿಶ್ವಕಪ್‌ಗೂ ಕೆಲ ದಿನ ಮೊದಲು ನಿವೃತ್ತಿಯಿಂದ ಹಿಂದೆ ಸರಿದಿದ್ದ 40 ವರ್ಷದ ನೋಯ, ಪರಗ್ವೆ ವಿರುದ್ಧ ಸೋಮವಾರದ ಅನಿರೀಕ್ಷಿತ ಸೋಲು ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. 2009ರಿಂದ ಈವರೆಗೂ ಅವರು ಜರ್ಮನಿ ಪರ 128 ಪಂದ್ಯಗಳನ್ನಾಡಿದ್ದಾರೆ.
ಇಂದಿನ ಪಂದ್ಯಗಳು
ಮೆಕ್ಸಿಕೊ-ಈಕ್ವೆಡಾರ್, ಬೆಳಗ್ಗೆ 6.30ಕ್ಕೆ
ಇಂಗ್ಲೆಂಡ್-ಕಾಂಗೊ, ಬೆಳಗ್ಗೆ 9.30ಕ್ಕೆ
ಬೆಲ್ಜಿಯಂ-ಸೆನೆಗಲ್, ರಾತ್ರಿ 1.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.