
ಈಸ್ಟ್ ರುಥರ್‌ಫೋರ್ಡ್(ಅಮೆರಿಕ): ಕೀಲಿಯನ್ ಎಂಬಾಪೆ ಮತ್ತೆರಡು ಗೋಲು ಬಾರಿಸಿದ್ದು, ಈ ಮೂಲಕ ಫ್ರಾನ್ಸ್ ತಂಡವನ್ನು ಈ ಬಾರಿ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ಗೇರಿದ್ದಾರೆ. ಮಂಗಳವಾರ ಮಧ್ಯರಾತ್ರಿ ನಡೆದ ಪಂದ್ಯದಲ್ಲಿ ತಂಡಕ್ಕೆ ಸ್ವೀಡನ್ ವಿರುದ್ಧ 3-0 ಗೋಲಿನಿಂದ ಭರ್ಜರಿ ಗೆಲುವು ಲಭಿಸಿತು.
45ನೇ ನಿಮಿಷದಲ್ಲಿ ಮೊದಲು ಗೋಲು ದಾಖಲಿಸಿದ ಎಂಬಾಪೆ, ಫ್ರಾನ್ಸ್‌ನ ಖಾತೆ ತೆರೆದರು. 53ನೇ ನಿಮಿಷದಲ್ಲಿ ಬ್ರಾಡ್ಲಿ ಬಾರ್ಕೊಲಾ ತಂಡದ ಪರ 2ನೇ ಗೋಲು ಬಾರಿಸಿದರು. 74ನೇ ನಿಮಿಷದಲ್ಲಿ ಎಂಬಾಪೆ ಮತ್ತೊಂದು ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಈ ಬಾರಿ ಆಡಿರುವ 4 ಪಂದ್ಯಗಳ ಪೈಕಿ 3ರಲ್ಲಿ ತಲಾ 2 ಗೋಲು ದಾಖಲಿಸಿದ್ದಾರೆ. ತಂಡ ಅಂತಿಮ 16ರ ಸುತ್ತಿನಲ್ಲಿ ಪರಗ್ವೆ ವಿರುದ್ಧ ಸೆಣಸಾಡಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ.
2 ಬಾರಿ ಚಾಂಪಿಯನ್ ಫ್ರಾನ್ಸ್ ತಂಡ ಸತತ 4ನೇ ಹಾಗೂ ಒಟ್ಟಾರೆ 11ನೇ ಬಾರಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. 2018ರಲ್ಲಿ ಚಾಂಪಿಯನ್ ಆಗಿದ್ದ ತಂಡ ಕಳೆದ ಬಾರಿ ಫೈನಲ್‌ನಲ್ಲಿ ಸೋತಿತ್ತು. ಈ ಬಾರಿಯೂ ಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.
ಫ್ರಾನ್ಸ್‌ನ 27 ವರ್ಷದ ಎಂಬಾಪೆ ಈ ವಿಶ್ವಕಪ್‌ನಲ್ಲಿ 6ನೇ ಗೋಲು ದಾಖಲಿಸಿದ್ದಾರೆ. ಒಟ್ಟಾರೆ ಫಿಫಾ ವಿಶ್ವಕಪ್‌ನಲ್ಲಿದು 18ನೇ ಗೋಲು. ಈ ಮೂಲಕ ವಿಶ್ವಕಪ್‌ನ ಗರಿಷ್ಠ ಗೋಲ್ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅವರು 3 ವಿಶ್ವಕಪ್‌ನ, 18 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ. 6ನೇ ವಿಶ್ವಕಪ್ ಆಡುತ್ತಿರುವ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ 29 ಪಂದ್ಯಗಳಲ್ಲಿ 19 ಗೋಲು ದಾಖಲಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಫಿಫಾ ವಿಶ್ವಕಪ್‌ನಲ್ಲಿ ಸತತ 5 ಪಂದ್ಯಗಳಲ್ಲಿ ತಲಾ 3 ಅಥವಾ ಅದಕ್ಕಿಂತ ಹೆಚ್ಚು ಗೋಲು ಬಾರಿಸಿದ ಮೊದಲ ತಂಡ ಎಂಬ ಖ್ಯಾತಿಗೆ ಫ್ರಾನ್ಸ್ ಪಾತ್ರವಾಗಿದೆ. ಕಳೆದ ಬಾರಿ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 3-3 ಗೋಲು ದಾಖಲಿಸಿದ್ದ ಫ್ರಾನ್ಸ್, ಈ ಬಾರಿ ಸೆನೆಗಲ್ ವಿರುದ್ಧ 3-1, ಇರಾಕ್ ವಿರುದ್ಧ 3-0, ನಾರ್ವೆ ವಿರುದ್ಧ 4-1, ಸ್ವೀಡನ್ ವಿರುದ್ಧ 3-0 ಗೋಲು ದಾಖಲಿಸಿದೆ.
ಅಮೆರಿಕ-ಬೋಸ್ನಿಯಾ, ಬೆಳಗ್ಗೆ 5.30ಕ್ಕೆ
ಸ್ಪೇನ್-ಆಸ್ಟ್ರಿಯಾ, ರಾತ್ರಿ 1.30ಕ್ಕೆ
ಪೋರ್ಚುಗಲ್-ಕ್ರೊವೇಷಿಯಾ, ನಸುಕಿನ 4.30ಕ್ಕೆ(ಶುಕ್ರ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.