ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ಮಹತ್ವದ ಪಂದ್ಯಗಳು
ಮೂರು ಪ್ರಮುಖ ತಂಡಗಳ ನಾಕೌಟ್ ಭವಿಷ್ಯ ಇಂದು ನಿರ್ಧಾರ
ಸ್ಪೇನ್‌ಗೆ ಜಪಾನ್ ಎದುರಾಗಲಿದ್ದು, ಜರ್ಮನಿ ಕೋಸ್ಟರಿಕಾ ಸವಾಲು ಸ್ವೀಕರಿಸಲಿದೆ
ದೋಹಾ(ಡಿ.01): ದೈತ್ಯ ತಂಡಗಳಾದ ಜರ್ಮನಿ, ಸ್ಪೇನ್ ಹಾಗೂ ಬೆಲ್ಜಿಯಂನ ನಾಕೌಟ್ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ. ‘ಇ’ ಗುಂಪಿನ ಅಂತಿಮ ಪಂದ್ಯದಲ್ಲಿ ಸ್ಪೇನ್‌ಗೆ ಜಪಾನ್ ಎದುರಾಗಲಿದ್ದು, ಜರ್ಮನಿ ಕೋಸ್ಟರಿಕಾ ಸವಾಲು ಸ್ವೀಕರಿಸಲಿದೆ. ನಾಲ್ಕೂ ತಂಡಗಳಿಗೆ ಪ್ರಿ ಕ್ವಾರ್ಟರ್‌ಗೇರಲು ಅವಕಾಶವಿದೆ.
ಸ್ಪೇನ್ 4 ಆಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು ಜಪಾನ್ ವಿರುದ್ಧ ಡ್ರಾ ಸಾಧಿಸಿದರೂ ಸಾಕು. ಆದರೆ ಜರ್ಮನಿ ತಾನು ಗೆಲ್ಲುವುದರ ಜೊತೆಗೆ ಸ್ಪೇನ್ ಸಹ ಗೆಲ್ಲಬೇಕು. ಆಗಷ್ಟೇ ಸಲೀಸಾಗಿ ನಾಕೌಟ್‌ಗೇರಲಿದೆ. ಒಂದು ವೇಳೆ ಜಪಾನ್ ಹಾಗೂ ಸ್ಪೇನ್ ಪಂದ್ಯ ಡ್ರಾಗೊಂಡರೆ, ಜರ್ಮನಿ ಕನಿಷ್ಠ 2 ಗೋಲುಗಳ ಅಂತರದಲ್ಲಿ ಗೆಲ್ಲಬೇಕಿದೆ. ಸೋತರೆ ಜರ್ಮನಿ ಹೊರಬೀಳಲಿದೆ.
ಸ್ಪೇನ್ ಒಂದು ವೇಳೆ ಸೋತರೂ ಅತ್ಯುತ್ತಮ ಗೋಲು ವ್ಯತ್ಯಾಸ ಹೊಂದಿರುವ ಕಾರಣ ನಾಕೌಟ್‌ಗೇರಬಹುದು. ಆದರೆ ಜರ್ಮನಿಯನ್ನು ಕೋಸ್ಟರಿಕಾ ಸೋಲಿಸಬಾರದು. ಒಂದು ವೇಳೆ ಜಪಾನ್ ಹಾಗೂ ಕೋಸ್ಟರಿಕಾ ಗೆದ್ದರೆ ಆ ಎರಡು ತಂಡಗಳು ನಾಕೌಟ್ ಪ್ರವೇಶಿಸಲಿವೆ.
FIFA World Cup: ನಾಕೌಟ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್, ಅಮೆರಿಕ
ಇನ್ನು ‘ಎಫ್’ ಗುಂಪು ಸಹ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿವೆ. ವಿಶ್ವ ನಂ.2 ತಂಡ ಬೆಲ್ಜಿಯಂ, ಮೊರಾಕ್ಕೊ ನೀಡಿದ ಶಾಕ್‌ನಿಂದ ಹೊರಬಂದು ಕಳೆದ ಆವೃತ್ತಿಯ ರನ್ನರ್-ಅಪ್ ಕ್ರೊವೇಷಿಯಾವನ್ನು ಸೋಲಿಸಬೇಕಿದೆ. ಕ್ರೊವೇಷಿಯಾ ಡ್ರಾ ಸಾಧಿಸಿದರೂ ಸಾಕು ನಾಕೌಟ್‌ಗೇರಲಿದೆ. ಮೊರಾಕ್ಕೊ ಈಗಾಗಲೇ ಹೊರಬಿದ್ದಿರುವ ಕೆನಡಾ ವಿರುದ್ಧ ಸುಲಭ ಜಯದ ನಿರೀಕ್ಷೆಯಲ್ಲಿದೆ.
ಇಂದಿನ ಪಂದ್ಯಗಳು
ಕ್ರೊವೇಷಿಯಾ-ಬೆಲ್ಜಿಯಂ, ರಾತ್ರಿ 8.30ಕ್ಕೆ
ಕೆನಡಾ-ಮೊರಾಕ್ಕೊ, ರಾತ್ರಿ 8.30ಕ್ಕೆ
ಸ್ಪೇನ್-ಜಪಾನ್, ರಾತ್ರಿ 12.30ಕ್ಕೆ
ಜರ್ಮನಿ-ಕೋಸ್ಟರಿಕಾ, ರಾತ್ರಿ 12.30ಕ್ಕೆ
ಸೋಲಿನ ಬಳಿಕ ಬೆಲ್ಜಿಯಂ ಆಟಗಾರರ ಕಚ್ಚಾಟ!
ದೋಹಾ: ಮೊರಾಕ್ಕೊ ವಿರುದ್ಧ ಆಘಾತಕಾರಿ ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಬೆಲ್ಜಿಯಂನ ಹಿರಿಯ ಆಟಗಾರರು ಕಚ್ಚಾಡಿದರು ಎಂದು ಬೆಲ್ಜಿಯಂನ ಮಾಧ್ಯಮಗಳು ವರದಿ ಮಾಡಿವೆ. ಕೆವಿನ್ ಡಿ ಬ್ರುನೆ, ಏಡನ್ ಹಜಾರ್ಡ್, ಜಾನ್ ವೆರ್ಟೊನ್ಗೆನ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ರೊಮೆಲು ಲುಕಾಕು ಮಧ್ಯ ಪ್ರವೇಶಿಸಿ ಆಟಗಾರರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ. ಫ್ರಾನ್ಸ್‌ನ ಮಾಧ್ಯಮವೊಂದರ ವರದಿ ಪ್ರಕಾರ, ಬೆಲ್ಜಿಯಂ ತಂಡದಲ್ಲಿ ಹಲವು ಆಟಗಾರರ ನಡುವೆ ಪರಸ್ಪರ ಮಾತುಕತೆ ಇಲ್ಲ. ಹಲವರ ನಡುವೆ ವೈಯಕ್ತಿಕ ಕಾರಣಗಳಿಗೆ ಮನಸ್ತಾಪವಿದ್ದು ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.
ವಿಶ್ವಕಪ್‌ನಲ್ಲಿಂದು ಮೊದಲ ಸಲ ಮಹಿಳಾ ರೆಫ್ರಿ ಕಣಕ್ಕೆ!
ದೋಹಾ: ಗುರುವಾರ ನಡೆಯಲಿರುವ ಜರ್ಮನಿ ಹಾಗೂ ಕೋಸ್ಟರಿಕಾ ನಡುವಿನ ಪಂದ್ಯದಲ್ಲಿ ಫ್ರಾನ್ಸ್‌ನ ಸ್ಟೆಫಾನಿ ಫ್ರಾಪರ್ಚ್ ರೆಫ್ರಿಯಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಪುರುಷರ ವಿಶ್ವಕಪ್‌ನಲ್ಲಿ ಮಹಿಳಾ ರೆಫ್ರಿ ಕಾರ‍್ಯನಿರ್ವಹಿಸುವುದು ಇದೇ ಮೊದಲು. ಇದೇ ವೇಳೆ ಇಬ್ಬರು ಸಹಾಯಕ ರೆಫ್ರಿಗಳು ಸಹ ಮಹಿಳೆಯರು ಎನ್ನುವುದು ವಿಶೇಷ. ಬ್ರೆಜಿಲ್‌ನ ನ್ಯುಜಾ ಬ್ಲಾಕ್, ಮೆಕ್ಸಿಕೋನ ಕರೆನ್ ಡಯಾಜ್ ಪ್ರಧಾನ ರೆಫ್ರಿಗೆ ಸಹಕಾರ ನೀಡಲಿದ್ದಾರೆ.
ರೊನಾಲ್ಡೋಗೆ ವಾರ್ಷಿಕ 1,685 ಕೋಟಿ ರುಪಾಯಿ ಆಫರ್!
ಜೆಡ್ಡಾ: ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ಹೊರಬಂದಿರುವ ಪೋರ್ಚುಗಲ್‌ನ ತಾರಾ ಫುಟ್ಬಾಲಿಗ ಯುರೋಪಿಯನ್ ಫುಟ್ಬಾಲ್ ಬಿಟ್ಟು ಸೌದಿ ಅರೇಬಿಯಾ ಲೀಗ್‌ನಲ್ಲಿ ಆಡಲು ಬರಲಿದ್ದಾರೆ ಎಂದು ಅಂ.ರಾ. ಮಾಧ್ಯಮಗಳು ವರದಿ ಮಾಡಿವೆ. ಸೌದಿಯ ಅಲ್-ನಸ್ರ್ ಫುಟ್ಬಾಲ್ ಕ್ಲಬ್ ವಾರ್ಷಿಕ 200 ಮಿಲಿಯನ್ ಯುರೋ(ಅಂದಾಜು 1,685 ಕೋಟಿ ರು.) ವೇತನದ ಆಫರ್ ನೀಡಿದ್ದು, ಎರಡೂವರೆ ವರ್ಷ ತಂಡದ ಪರ ಆಡಲು ರೊನಾಲ್ಡೋ ಒಪ್ಪಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಒಪ್ಪಂದ ಕೈಗೂಡಿ ರೊನಾಲ್ಡೋ ಸಹಿ ಹಾಕಿದರೆ, ಫುಟ್ಬಾಲ್ ಇತಿಹಾಸದಲ್ಲೇ ಅತಿ ದುಬಾರಿ ವೇತನ ಪಡೆಯಲಿರುವ ಆಟಗಾರ ಎನ್ನುವ ದಾಖಲೆ ಬರೆಯಲಿದ್ದಾರೆ.