FIFA World Cup ರಿಚಾರ್ಲಿಸನ್‌ ಕಿಕ್‌ಗೆ ಸರ್ಬಿಯಾ ಸೈಲೆಂಟ್‌..!

By Kannadaprabha News  |  First Published Nov 26, 2022, 8:10 AM IST

ಸರ್ಬಿಯಾ ಎದುರು ಭರ್ಜರಿ ಗೆಲುವು ಸಾಧಿಸಿದ ಬ್ರೆಜಿಲ್
ಜಗತ್ತಿನಾದ್ಯಂತ ಫುಟ್ಬಾಲ್‌ ಅಭಿಮಾನಿಗಳ ಕಿಕ್ಕೇರಿಸಿ ರಿಚಾರ್ಲಿಸನ್‌ ಬಾರಿಸಿದ ಬೈಸಿಕಲ್‌ ಕಿಕ್‌
ಬ್ರೆಜಿಲ್‌ ತಂಡಕ್ಕೆ ಸರ್ಬಿಯಾ ಎದುರು 2-0 ಅಂತರದ ಗೆಲುವು


ಲುಸೈಲ್‌(ನ.26): ಬ್ರೆಜಿಲ್‌ ಪಂದ್ಯ ಎಂದ ಮೇಲೆ ಅಲ್ಲಿ ಸ್ಟೈಲ್‌ ಇರಲೇಬೇಕು. ಸರ್ಬಿಯಾ ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ರಿಚಾರ್ಲಿಸನ್‌ ಬಾರಿಸಿದ ಬೈಸಿಕಲ್‌ ಕಿಕ್‌, ಜಗತ್ತಿನಾದ್ಯಂತ ಫುಟ್ಬಾಲ್‌ ಅಭಿಮಾನಿಗಳ ಕಿಕ್ಕೇರಿಸಿತು. ಚೊಚ್ಚಲ ವಿಶ್ವಕಪ್‌ ಪಂದ್ಯದಲ್ಲೇ ಎರಡು ಗೋಲು ಬಾರಿಸಿದ ರಿಚಾರ್ಲಿಸನ್‌, ಬ್ರೆಜಿಲ್‌ 2-0 ಅಂತರದಲ್ಲಿ ಜಯಿಸಿ ಶುಭಾರಂಭ ಮಾಡಲು ನೆರವಾದರು.

ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ದಾಖಲಿಸಲಿಲ್ಲ. ಕೆಲ ಅವಕಾಶಗಳು ಸಿಕ್ಕರೂ ಅವುಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಉಭಯ ತಂಡಗಳು ವಿಫಲವಾದವು. 50, 55ನೇ ನಿಮಿಷದಲ್ಲಿ ನೇಯ್ಮರ್‌ ತಮಗೆ ಸಿಕ್ಕ ಅವಕಾಶದ ಲಾಭವೆತ್ತಲಿಲ್ಲ. 60ನೇ ನಿಮಿಷದಲ್ಲಿ ಅಲೆಕ್ಸ್‌ ಸ್ಯಾಂಡ್ರೊ ಬಾರಿಸಿದ ಚೆಂಡು ಗೋಲು ಪೆಟ್ಟಿಗೆಯ ಕಂಬಕ್ಕೆ ಬಡಿಯಿತು. ಅಂತೂ 62ನೇ ನಿಮಿಷದಲ್ಲಿ ರಿಚಾರ್ಲಿಸನ್‌ ಬ್ರೆಜಿಲ್‌ನ ಖಾತೆ ತೆರೆದರು. ಆದರೆ 73ನೇ ನಿಮಿಷದಲ್ಲಿ ಅವರು ಬಾರಿಸಿದ ಗೋಲು ಫುಟ್ಬಾಲ್‌ ಅಭಿಮಾನಿಗಳನ್ನು ಮೂಖವಿಸ್ಮಿತಗೊಳಿಸಿತು. ಎರಡನೇ ಗೋಲಿಗೆ ವಿನಿಶಿಯಸ್‌ ಜೂನಿಯರ್‌ ಸಹಕಾರ ನೀಡಿದ್ದನ್ನು ಮರೆಯುವ ಹಾಗಿಲ್ಲ. ಸರ್ಬಿಯಾ ತಂಡದ ಸ್ಥಿತಿ ಹಲ್ಲು ಕಿತ್ತ ಹಾವಿನಂತಿತ್ತು. ದ್ವಿತೀಯಾರ್ಧದಲ್ಲಿ ಸರ್ಬಿಯಾ ಆಟಗಾರರು ಬ್ರೆಜಿಲ್‌ ಗೋಲು ಬಾರಿಸದಂತೆ ತಡೆಯುವುದರಲ್ಲೇ ಹೆಚ್ಚು ಸಮಯ ಕಳೆದರೆ ಹೊರತು ತಾವು ಗೋಲು ಗಳಿಸುವ ಯತ್ನಗಳನ್ನೇ ನಡೆಸಲಿಲ್ಲ.

🇧🇷 A Richarlison brace sees Brazil pick up three points against Serbia |

— FIFA World Cup (@FIFAWorldCup)

Tap to resize

Latest Videos

undefined

ಪಂದ್ಯಕ್ಕೂ ಮುನ್ನ ರಿಚಾರ್ಲಿ ಬೈಸಿಕಲ್‌ ಕಿಕ್‌ ಅಭ್ಯಾಸ!

ಯಾವುದೇ ಸಾಧನೆ ಹಿಂದೆ ಸತತ ಅಭ್ಯಾಸವಿರುತ್ತದೆ ಎನ್ನುವುದಕ್ಕೆ ರಿಚಾರ್ಲಿಸನ್‌ರ ಆಕರ್ಷಕ ಗೋಲೇ ತಾಜಾ ಉದಾಹರಣೆ. ಪಂದ್ಯ ಆರಂಭಕ್ಕೂ ಮುನ್ನ ಲುಸೈನ್‌ ಕ್ರೀಡಾಂಗಣದಲ್ಲಿ ರಿಚಾರ್ಲಿಸನ್‌ ಬೈಸಿಕಲ್‌ ಕಿಕ್‌ ಮೂಲಕ ಗೋಲು ಬಾರಿಸುವುದನ್ನು ಅಭ್ಯಾಸ ಮಾಡಿದ್ದರು. ಅವರ ಅಭ್ಯಾಸ ಪಂದ್ಯದಲ್ಲಿ ಉಪಯೋಗಕ್ಕೆ ಬಂತು.

ಅರ್ಜೆಂಟೀನಾ ಮಣಿಸಿದ ಸೌದಿಗೆ ಭರ್ಜರಿ ಗಿಫ್ಟ್, ತಂಡದ ಪ್ರತಿಯೊಬ್ಬರಿಗೆ 9 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು!

20 ಬಾರಿ: ಬ್ರೆಜಿಲ್‌ ಸತತ 20ನೇ ಬಾರಿಗೆ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಜೇಯವಾಗಿ ಉಳಿದಿದೆ. 17 ಗೆಲುವು, 3 ಡ್ರಾಗಳನ್ನು ಕಂಡಿದೆ. ತಂಡ ಕೊನೆ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ ಮೊದಲ ಪಂದ್ಯವನ್ನು ಸೋತಿದ್ದು 1934ರಲ್ಲಿ. ಸ್ಪೇನ್‌ ವಿರುದ್ಧ 1-3ರಲ್ಲಿ ಸೋಲುಂಡಿತ್ತು.

ರಸ್ತೆಯಲ್ಲಿ ಐಸ್‌ ಕ್ಯಾಂಡಿ ಮಾರ್ತಿದ್ದ ಹುಡುಗ ಈಗ ಜಾಗತಿಕ ಸ್ಟಾರ್‌!

1997ರಲ್ಲಿ ಬಡತನ, ಅಪರಾಧಗಳಿಗೆ ಹೆಸರುವಾಸಿಯಾಗಿರುವ ಬ್ರೆಜಿಲ್‌ ನೊವಾ ವೆನೆಸಿಯಾ ಎಂಬ ಊರಿನಲ್ಲಿ ಕೂಲಿ ಕಾರ್ಮಿಕನ ಮಗನಾಗಿ ಜನಿಸಿದ ರಿಚಾರ್ಲಿಸನ್‌, ಬಾಲ್ಯದಲ್ಲಿ ತಮ್ಮ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಕಾರು ತೊಳೆಯುವುದು, ರಸ್ತೆಯಲ್ಲಿ ಐಸ್‌ ಕ್ಯಾಂಡಿ, ಚಾಕೋಲೆಟ್‌ಗಳನ್ನು ಮಾರುವ ಕೆಲಸ ಮಾಡುತ್ತಿದ್ದರು. ಹಲವು ಬಾರಿ ಕಿಡಿಗೇಡಿಗಳು ರಿಚಾರ್ಲಿಸನ್‌ಗೆ ಗನ್‌ ತೋರಿಸಿ ಅವರಿಂದ ಹಣ ಕಿತ್ತೊಯ್ದ ಪ್ರಕರಣಗಳು ನಡೆದಿದ್ದವು.

ಫುಟ್ಬಾಲ್‌ನತ್ತ ಅಪಾರ ಆಸಕ್ತಿ ಹೊಂದಿದ್ದ ರಿಚಾರ್ಲಿಸನ್‌ ಹಲವು ಸ್ಥಳೀಯ ಕ್ಲಬ್‌ಗಳಿಂದ ತಿರಸ್ಕಾರಕ್ಕೆ ಒಳಗಾದರೂ ಛಲ ಬಿಡದೆ ಹೋರಾಡಿ ಬ್ರೆಜಿಲ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದು ಚೊಚ್ಚಲ ಪಂದ್ಯದಲ್ಲೇ ಮಿಂಚಿದ್ದಾರೆ. ‘ನನ್ನ ಅನೇಕ ಬಾಲ್ಯ ಸ್ನೇಹಿತರು ಈಗ ಜೈಲಿನಲ್ಲಿದ್ದಾರೆ. ಫುಟ್ಬಾಲ್‌ನಿಂದಾಗಿ ನಾನು ಸರಿ ದಾರಿ ಹಿಡಿದೆ, ಇಲ್ಲವಾದರೆ ನಾನೂ ಜೈಲಿನಲ್ಲಿರುತ್ತಿದ್ದೆ’ ಎಂದು ಕೆಲ ವರ್ಷಗಳ ಹಿಂದೆ ರಿಚಾರ್ಲಿಸನ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ನೇಯ್ಮರ್‌ ಮೊಣಕಾಲಿಗೆ ಗಾಯ: ಬ್ರೆಜಿಲ್‌ಗೆ ಆತಂಕ

ಸರ್ಬಿಯಾ ವಿರುದ್ಧದ ಪಂದ್ಯದ ವೇಳೆ ಬ್ರೆಜಿಲ್‌ನ ತಾರಾ ಆಟಗಾರ ನೇಯ್ಮರ್‌ ಮೊಣಕಾಲು ಉಳುಕಿಸಿಕೊಂಡರು. ಅವರ ಕಾಲು ಊದಿದ್ದು ಚಿಕಿತ್ಸೆ ನೀಡುತ್ತಿರುವುದಾಗಿ ಬ್ರೆಜಿಲ್‌ ತಂಡದ ಕೋಚ್‌ ಹೇಳಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

click me!