FIFA World Cup: ಕ್ರೊವೇಷಿಯಾ ಸವಾಲು ಗೆಲ್ಲುತ್ತಾ ಬಲಿಷ್ಠ ಬ್ರೆಜಿಲ್?

By Kannadaprabha News  |  First Published Dec 9, 2022, 11:12 AM IST

ಫಿಫಾ ವಿಶ್ವಕಪ್ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್-ಕ್ರೊವೇಷಿಯಾ ಕಾದಾಟ
ದಾಖಲೆಯ 6ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಬ್ರೆಜಿಲ್‌
ಕ್ರೊವೇಷಿಯಾ ವಿರುದ್ಧ ಬ್ರೆಜಿಲ್‌ ಕಳೆದ 4 ಮುಖಾಮುಖಿಗಳಲ್ಲಿ ಸೋತಿಲ್ಲ


ಅಲ್‌ ರಯ್ಯನ್‌(ಡಿ.09): ದಾಖಲೆಯ 6ನೇ ವಿಶ್ವಕಪ್‌ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಬ್ರೆಜಿಲ್‌ಗೆ ಶುಕ್ರವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಕ್ರೊವೇಷಿಯಾದ ಸವಾಲು ಎದುರಾಗಲಿದೆ. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಅಮೋಘ ಆಟವಾಡುವ ಮೂಲಕ ಬ್ರೆಜಿಲ್‌ ತನ್ನ ಎದುರಾಳಿಗಳಿಗೆ ಸ್ಪಷ್ಟಸಂದೇಶ ರವಾನಿಸಿದೆ. ಮತ್ತೊಂದೆಡೆ ಜಪಾನ್‌ ವಿರುದ್ಧ ಹೋರಾಡಿ ಪೆನಾಲ್ಟಿಶೂಟೌಟ್‌ನಲ್ಲಿ ಗೆದ್ದ ಕ್ರೊವೇಷಿಯಾ ಮತ್ತೊಂದು ಕಠಿಣ ಚಾಲೆಂಜ್‌ಗೆ ಸಿದ್ಧವಾಗಿದೆ.

ಸತತ 2ನೇ ಹಾಗೂ ಒಟ್ಟಾರೆ 3ನೇ ಬಾರಿಗೆ ಕ್ರೊವೇಷಿಯಾ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಲಿದೆ. ಜಪಾನ್‌ ವಿರುದ್ಧ ನಿಗದಿತ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಗೋಲು ಬಾರಿಸಲು ವಿಫಲವಾದರೂ, ಶೂಟೌಟ್‌ನಲ್ಲಿ ತಂಡದ ಗೋಲ್‌ಕೀಪರ್‌ ಲಾಟ್ಕೊ ಡಾಲಿಚ್‌ ತೋರಿದ ಹೋರಾಟ ತಂಡವನ್ನು ಅಂತಿಮ 8ರ ಸುತ್ತಿಗೇರಿಸಿತು. ದೊಡ್ಡ ವೇದಿಕೆಯಲ್ಲಿ ಹೈ ಡ್ರಾಮಾ ಕ್ರೊವೇಷಿಯಾಗೆ ಹೊಸದಲ್ಲ. ಪ್ರಮುಖ ಪಂದ್ಯಾವಳಿಗಳ ಕಳೆದ 8 ನಾಕೌಟ್‌ ಪಂದ್ಯಗಳನ್ನು ಕ್ರೊವೇಷಿಯಾ ಹೆಚ್ಚುವರಿ ಸಮಯಕ್ಕೆ ಕೊಂಡೊಯ್ದಿದೆ.

Tap to resize

Latest Videos

undefined

ಇನ್ನು ವಿಶ್ವಕಪ್‌ನಲ್ಲಿ ಕ್ರೊವೇಷಿಯಾದ ಕಳೆದ 5 ನಾಕೌಟ್‌ ಪಂದ್ಯಗಳಲ್ಲಿ 4 ಪಂದ್ಯಗಳು ಹೆಚ್ಚುವರಿ ಸಮಯವನ್ನು ಕಂಡಿವೆ. ಈ ಪೈಕಿ 3ರಲ್ಲಿ ಕ್ರೊವೇಷಿಯಾ ಶೂಟೌಟ್‌ನಲ್ಲಿ ಗೆದ್ದಿದೆ. 5 ಪಂದ್ಯಗಳ ಪೈಕಿ 2018ರ ಫೈನಲ್‌ನಲ್ಲಿ ಫ್ರಾನ್ಸ್‌ ವಿರುದ್ಧ 2-4 ಗೋಲುಗಳಲ್ಲಿ ಸೋತಿದ್ದೊಂದೇ 90 ನಿಮಿಷಗಳಲ್ಲಿ ನಿರ್ಧಾರವಾಗಿರುವ ಪಂದ್ಯ.

ಭರ್ಜರಿ ಲಯ: ಕ್ರೊವೇಷಿಯಾ ಕಳೆದ 10 ಅಂ.ರಾ. ಪಂದ್ಯಗಳಲ್ಲಿ ಸೋತಿಲ್ಲ. 2020ರ ಯುರೋ ಕಪ್‌ನಿಂದ ಈ ತನಕ 20 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋಲುಂಡಿದೆ. ಕ್ರೊವೇಷಿಯಾದ ಗುಣಮಟ್ಟದ ಫುಟ್ಬಾಲ್‌ ಕೌಶಲ್ಯಗಳು ಬ್ರೆಜಿಲ್‌ ವಿರುದ್ಧ ಪರೀಕ್ಷೆಗೆ ಒಳಗಾಗಲಿವೆ.

FIFA World Cup ವಿಶ್ವಕಪ್ ಕ್ವಾರ್ಟರ್‌ ಫೈನಲ್ ಕಣ ರೆಡಿ..!

ಬ್ರೆಜಿಲ್‌ಗೆ ಕ್ವಾರ್ಟರ್‌ ಕಂಟಕ?: ಕೊರಿಯಾ ವಿರುದ್ಧದ ಪಂದ್ಯದಲ್ಲಿ ಬ್ರೆಜಿಲ್‌ ತನ್ನ ಅಸಲಿ ಸಾಮರ್ಥ್ಯವನ್ನು ಪ್ರದರ್ಶಿಸಿತು. ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಹೇಗೆ, ಎದುರಾಳಿಯ ಮೇಲೆ ಆರಂಭದಲ್ಲೇ ಒತ್ತಡ ಹೇರಿ ಪುಟಿದೇಳದಂತೆ ಮಾಡುವುದು ಹೇಗೆ ಎನ್ನುವುದನ್ನು ಬ್ರೆಜಿಲ್‌ ಮತ್ತೆ ತೋರಿಸಿಕೊಟ್ಟಿತು. ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿ ಬ್ರೆಜಿಲ್‌ ಇದೆಯಾದರೂ, ಇತಿಹಾಸ ತಂಡದ ಪರವಿಲ್ಲ. ಕಳೆದ 4 ವಿಶ್ವಕಪ್‌ಗಳಲ್ಲಿ 3ರಲ್ಲಿ ಬ್ರೆಜಿಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದೆ. ಮೂರೂ ಬಾರಿ ಯುರೋಪಿಯನ್‌ ತಂಡಗಳ ವಿರುದ್ಧ ಸೋತಿರುವುದು ಮತ್ತೊಂದು ಗಮನಾರ್ಹ ಅಂಶ. ಫ್ರಾನ್ಸ್‌, ನೆದರ್‌ಲೆಂಡ್‌್ಸ ಹಾಗೂ ಬೆಲ್ಜಿಯಂ ವಿರುದ್ಧ ಕ್ರಮವಾಗಿ 2006, 2010, 2018ರಲ್ಲಿ ಸೋತ್ತಿತ್ತು.

ಇನ್ನು ಕ್ರೊವೇಷಿಯಾ ವಿರುದ್ಧ ಬ್ರೆಜಿಲ್‌ ಕಳೆದ 4 ಮುಖಾಮುಖಿಗಳಲ್ಲಿ ಸೋತಿಲ್ಲ ಎನ್ನುವುದನ್ನು ಮರೆಯುವ ಹಾಗಿಲ್ಲ. ಕಳೆದ ವಾರ ಕ್ಯಾಮರೂನ್‌ ವಿರುದ್ಧ ಅನುಭವಿಸಿದ ಸೋಲು, ಕಳೆದ 19 ಅಂ.ರಾ. ಪಂದ್ಯಗಳಲ್ಲಿ ಬ್ರೆಜಿಲ್‌ಗೆ ಎದುರಾದ ಮೊದಲ ಸೋಲು.

ಬ್ರೆಜಿಲ್‌ ಕ್ವಾರ್ಟರ್‌ ಹಾದಿ

ಗುಂಪು ಹಂತ

ಸರ್ಬಿಯಾ ವಿರುದ್ಧ 2-0 ಜಯ

ಸ್ವಿಜರ್‌ಲೆಂಡ್‌ ವಿರುದ್ಧ 1-0 ಜಯ

ಕ್ಯಾಮರೂನ್‌ ವಿರುದ್ಧ 0-1 ಸೋಲು

ಪ್ರಿ ಕ್ವಾರ್ಟರ್‌ ಫೈನಲ್‌

ಕೊರಿಯಾ ವಿರುದ್ಧ 6-1 ಜಯ

ಕ್ರೊವೇಷಿಯಾ ಕ್ವಾರ್ಟರ್‌ ಹಾದಿ

ಗುಂಪು ಹಂತ

ಮೊರಾಕ್ಕೊ ವಿರುದ್ಧ 0-0 ಡ್ರಾ

ಕೆನಡಾ ವಿರುದ್ಧ 4-1 ಜಯ

ಬೆಲ್ಜಿಯಂ ವಿರುದ್ಧ 0-0 ಡ್ರಾ

ಪ್ರಿ ಕ್ವಾರ್ಟರ್‌ ಫೈನಲ್‌

ಜಪಾನ್‌ ವಿರುದ್ಧ 3-1 ಜಯ(ಶೂಟೌಟ್‌)

ಪಂದ್ಯ ಆರಂಭ: ರಾತ್ರಿ 8.30ಕ್ಕೆ, 
ನೇರ ಪ್ರಸಾರ: ಸ್ಪೋರ್ಟ್ಸ್ 18/ಜಿಯೋ ಸಿನಿಮಾ

click me!