FIFA World Cup ಇಂಗ್ಲೆಂಡ್‌ಗಿಲ್ಲ ಅದೃಷ್ಟ, ಸೆಮೀಸ್‌ಗೆ ಫ್ರಾನ್ಸ್ ಲಗ್ಗೆ..!

Published : Dec 12, 2022, 09:37 AM IST
FIFA World Cup ಇಂಗ್ಲೆಂಡ್‌ಗಿಲ್ಲ ಅದೃಷ್ಟ, ಸೆಮೀಸ್‌ಗೆ ಫ್ರಾನ್ಸ್ ಲಗ್ಗೆ..!

ಸಾರಾಂಶ

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಫ್ರಾನ್ಸ್ ಸೆಮೀಸ್‌ ಪ್ರವೇಶ ಇಂಗ್ಲೆಂಡ್ ಎದುರು ರೋಚಕ ಜಯ ಸಾಧಿಸಿದ ಫ್ರಾನ್ಸ್‌ ತಂಡ ನಾಯಕ ಹ್ಯಾರಿ ಕೇನ್ ಎಡವಟ್ಟು, ಸೆಮೀಸ್‌ ಪ್ರವೇಶಿಸುವ ಇಂಗ್ಲೆಂಡ್ ಕನಸು ಭಗ್ನ

ಅಲ್‌-ಖೋರ್‌(ಡಿ.12): ಇಂಗ್ಲೆಂಡ್‌ ನಾಯಕ ಹ್ಯಾರಿ ಕೇನ್‌ ಒಂದೇ ಪಂದ್ಯದಲ್ಲಿ ತಮ್ಮ ತಂಡಕ್ಕೆ ಹೀರೋ ಹಾಗೂ ವಿಲನ್‌ ಎರಡೂ ಆದರು. ಫ್ರಾನ್ಸ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಮೊದಲು ಗೋಲು ಬಾರಿಸಿದ ಕೇನ್‌, ನಿರ್ಣಾಯಕ ಹಂತದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ವ್ಯರ್ಥ ಮಾಡಿ ತಮ್ಮ ಸಹ ಆಟಗಾರರು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

2-1 ಗೋಲುಗಳಲ್ಲಿ ಗೆದ್ದ ಹಾಲಿ ಚಾಂಪಿಯನ್‌ ಫ್ರಾನ್ಸ್‌, ಸತತ 2ನೇ ಹಾಗೂ ಒಟ್ಟಾರೆ 7ನೇ ಬಾರಿಗೆ ಸೆಮೀಸ್‌ಗೇರಿತು. 17ನೇ ನಿಮಿಷದಲ್ಲೇ ಉರೆಲಿಯನ್‌ ಚೌಮೇನಿ ಗೋಲು ಬಾರಿಸಿ ಫ್ರಾನ್ಸ್‌ಗೆ ಮುನ್ನಡೆ ಒದಗಿಸಿದರು. ಮೊದಲಾರ್ಧದ ಅಂತ್ಯಕ್ಕೆ ಮನ್ನಡೆ ಕಾಯ್ದುಕೊಂಡ ಫ್ರಾನ್ಸ್‌, ದ್ವಿತೀಯಾರ್ಧದ ಆರಂಭದಲ್ಲೇ ಇಂಗ್ಲೆಂಡ್‌ಗೆ ಪೆನಾಲ್ಟಿಬಿಟ್ಟುಕೊಟ್ಟಿತು. ಹ್ಯಾರಿ ಕೇನ್‌ ಇಂಗ್ಲೆಂಡ್‌ ಸಮಬಲ ಸಾಧಿಸುವಂತೆ ಮಾಡುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಆ ಬಳಿಕ ಮತ್ತೊಂದು ಗೋಲಿಗಾಗಿ ಉಭಯ ತಂಡಗಳ ನಡುವೆ ಪೈಪೋಟಿ ಹೆಚ್ಚಾಯಿತು.

78ನೇ ನಿಮಿಷದಲ್ಲಿ ಅಂಕಣದ ಎಡ ಭಾಗದಿಂದ ಆ್ಯಂಟೋನಿ ಗ್ರೀಝ್‌ಮನ್‌ ನೀಡಿದ ಪಾಸನ್ನು ಆಕರ್ಷಕ ಹೆಡ್ಡರ್‌ ಮೂಲಕ ಇಂಗ್ಲೆಂಡ್‌ ಗೋಲ್‌ಕೀಪರ್‌ ಜೋರ್ಡನ್‌ ಪಿಕ್‌ಫೋರ್ಡ್‌ರನ್ನು ವಂಚಿಸಿ ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಫ್ರಾನ್ಸ್‌ನ ಸಾರ್ವಕಾಲಿಕ ಅಧಿಕ ಗೋಲು ಸರದಾರ ಓಲಿವಿಯರ್‌ ಗಿರೌಡ್‌ ಯಶಸ್ವಿಯಾದರು.

ಕೇನ್‌ ಎಡವಟ್ಟು!: ಮುನ್ನಡೆ ಸಾಧಿಸಿದ ಬಳಿಕ ಫ್ರಾನ್ಸ್‌ ಮತ್ತಷ್ಟುಆಕ್ರಮಣಕಾರಿ ಆಟಕ್ಕಿಳಿಯಿತು. ಈ ನಡುವೆ 82ನೇ ನಿಮಿಷದಲ್ಲಿ ಚೌಮೇನಿ ಬಾಕ್ಸ್‌ನೊಳಗೆ ಪೌಲ್ ಮಾಡಿದ ಪರಿಣಾಮ ಇಂಗ್ಲೆಂಡ್‌ಗೆ ಮತ್ತೊಂದು ಪೆನಾಲ್ಟಿ ದೊರೆಯಿತು. ಈ ಬಾರಿ ಕೇನ್‌ ಎಡವಟ್ಟು ಮಾಡಿದರು. ಅವರು ಒದ್ದ ವೇಗಕ್ಕೆ ಚೆಂಡು ಗೋಲು ಪೆಟ್ಟಿಗೆಯ ಮೇಲೆ ಹಾರಿ ಹೋಗಿ ಪ್ರೇಕ್ಷಕರಿದ್ದ ಗ್ಯಾಲರಿ ತಲುಪಿತು. ಫ್ರಾನ್ಸ್‌ನ ತಾರಾ ಸ್ಟ್ರೈಕರ್‌ ಕಿಲಿಯಾನ್‌ ಎಂಬಾಪೆ ಜೋರಾಗಿ ನಗುತ್ತಾ ನಿಂತಿದ್ದು ಇಂಗ್ಲೆಂಡ್‌ ಪರಿಸ್ಥಿತಿಯನ್ನು ಬಹಳ ಅಚ್ಚುಕಟ್ಟಾಗಿ ವಿವರಿಸುವಂತಿತ್ತು.

FIFA World Cup ಇಂಗ್ಲೆಂಡ್ ಸವಾಲಿಗೆ ಸಜ್ಜಾದ ಹಾಲಿ ಚಾಂಪಿಯನ್‌ ಫ್ರಾನ್ಸ್

ಇದಾದ ಬಳಿಕವೂ ಇಂಗ್ಲೆಂಡ್‌ಗೆ ಒಂದೆರಡು ಅತ್ಯುತ್ತಮ ಅವಕಾಶ ದೊರೆಯಿತು. ಆದರೆ ಇದರ ಲಾಭವೆತ್ತಿ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ಯುವಲ್ಲಿ ಗೆರಾಥ್‌ ಸೌಥ್‌ಗೇಟ್‌ ಮಾರ್ಗದರ್ಶನದ ತಂಡ ವಿಫಲವಾಯಿತು.

ಸತತ 2 ಬಾರಿ ಫ್ರಾನ್ಸ್‌ ಸೆಮೀಸ್‌ಗೆ: 2ನೇ ಸಲ

ಫ್ರಾನ್ಸ್‌ ತಂಡ ಸತತ 2ನೇ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿರುವುದು ಇದು 2ನೇ ಬಾರಿ. 1982ರಲ್ಲಿ ಚಾಂಪಿಯನ್‌ ಆಗಿದ್ದ ಫ್ರಾನ್ಸ್‌, 1986ರ ವಿಶ್ವಕಪ್‌ನಲ್ಲೂ ಸೆಮಿಫೈನಲ್‌ಗೇರಿತ್ತು. 2018ರಲ್ಲಿ ಟ್ರೋಫಿ ಗೆದ್ದಿದ್ದ ಫ್ರಾನ್ಸ್‌ ಈ ಸಲವೂ ಉಪಾಂತ್ಯಕ್ಕೆ ಪ್ರವೇಶ ಪಡೆದಿದೆ. 1986ರ ಸೆಮೀಸ್‌ನಲ್ಲಿ ಸೋತು ಕೊನೆಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

7ನೇ ಬಾರಿ ಕ್ವಾರ್ಟರ್‌ನಲ್ಲಿ ಸೋಲು: ಇಂಗ್ಲೆಂಡ್‌ ದಾಖಲೆ!

ಇಂಗ್ಲೆಂಡ್‌ 7ನೇ ಬಾರಿಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡಿದೆ. ಅಂತಿಮ 8ರ ಹಂತದಲ್ಲಿ ಅತಿಹೆಚ್ಚು ಸೋಲು ಕಂಡ ತಂಡ ಎನ್ನುವ ಅಪಖ್ಯಾತಿಗೆ ಒಳಗಾಗಿದೆ. 2018ರ ಆವೃತ್ತಿಯಲ್ಲಿ ಇಂಗ್ಲೆಂಡ್‌ ಸೆಮೀಸ್‌ನಲ್ಲಿ ಕ್ರೊವೇಷಿಯಾ ವಿರುದ್ಧ ಸೋತು ಹೊರಬಿದ್ದಿತ್ತು.

ನಾಳೆ, ನಾಡಿದ್ದು ಸೆಮೀಸ್‌

2022ರ ಫಿಫಾ ವಿಶ್ವಕಪ್‌ನಲ್ಲಿ ಇನ್ನು 4 ಪಂದ್ಯಗಳಷ್ಟೇ ಉಳಿದಿದೆ. ಸೆಮಿಫೈನಲ್‌ ಪಂದ್ಯಗಳು ಮಂಗಳವಾರ, ಬುಧವಾರ ನಡೆಯಲಿವೆ. ಡಿ.13ರಂದು ಮೊದಲ ಸೆಮೀಸ್‌ನಲ್ಲಿ ಕಳೆದ ಬಾರಿಯ ರನ್ನರ್‌-ಅಪ್‌ ಕ್ರೊವೇಷಿಯಾ ಹಾಗೂ ಎರಡು ಬಾರಿ ಚಾಂಪಿಯನ್‌ ಅರ್ಜೆಂಟೀನಾ ಸೆಣಸಲಿವೆ. ಡಿ.14ರಂದು 2ನೇ ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್‌ ಫ್ರಾನ್ಸ್‌ ಹಾಗೂ ಸೆಮೀಸ್‌ಗೇರಿದ ಆಫ್ರಿಕಾದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಿರುವ ಮೊರಾಕ್ಕೊ ಮುಖಾಮುಖಿಯಾಗಲಿವೆ.

ಸೆಮೀಸ್‌ ವೇಳಾಪಟ್ಟಿ

ಪಂದ್ಯ ದಿನಾಂಕ ಮುಖಾಮುಖಿ ಸಮಯ

ಮೊದಲ ಸೆಮೀಸ್‌ ಡಿ.13 ಅರ್ಜೆಂಟೀನಾ-ಕ್ರೊವೇಷಿಯಾ ರಾತ್ರಿ 12.30ಕ್ಕೆ

2ನೇ ಸೆಮೀಸ್‌ ಡಿ.14 ಫ್ರಾನ್ಸ್‌-ಮೊರಾಕ್ಕೊ ರಾತ್ರಿ 12.30ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇವಲ ₹10 ಲಕ್ಷ ಕೊಡಿ, ಮೆಸ್ಸಿ ಜತೆಗೆ ಒಂದು ಫೋಟೋ ತೆಗೆಸಿಕೊಳ್ಳಿ! ಕೇವಲ 100 ಮಂದಿಗಷ್ಟೇ ಈ ಚಾನ್ಸ್!
ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಸ್ವಾಗತಕ್ಕೆ ಕೋಲ್ಕತಾ ಸಜ್ಜು! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್