FIFA World Cup ಇಂಗ್ಲೆಂಡ್ ಸವಾಲಿಗೆ ಸಜ್ಜಾದ ಹಾಲಿ ಚಾಂಪಿಯನ್‌ ಫ್ರಾನ್ಸ್

By Kannadaprabha NewsFirst Published Dec 10, 2022, 4:21 PM IST
Highlights

ಫಿಫಾ ವಿಶ್ವಕಪ್ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್-ಫ್ರಾನ್ಸ್ ಸೆಣಸಾಟ
ಹಾಲಿ ಚಾಂಪಿಯನ್‌ ಫ್ರಾನ್ಸ್‌ಗೆ ಬಲಿಷ್ಠ ಇಂಗ್ಲೆಂಡ್ ಚಾಲೆಂಜ್ 
ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳು ಎನಿಸಿಕೊಂಡಿರುವ ಉಭಯ ತಂಡಗಳು

ಅಲ್‌-ಖೋರ್‌(ಡಿ.10): ಶನಿವಾರ 4ನೇ ಹಾಗೂ ಕೊನೆಯ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಫ್ರಾನ್ಸ್‌ಗೆ ಬಲಿಷ್ಠ ಇಂಗ್ಲೆಂಡ್‌ ಎದುರಾಗಲಿದೆ. ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳು ಎನಿಸಿಕೊಂಡು ಟೂರ್ನಿ ಪ್ರವೇಶಿಸಿದ್ದ ಎರಡು ತಂಡಗಳ ಪೈಕಿ ಒಂದು ತಂಡದ ಓಟ ಕೊನೆಗೊಳ್ಳಲಿದೆ.  ಪ್ರಿ ಕ್ವಾರ್ಟರ್‌ನಲ್ಲಿ ‘ತ್ರಿ ಲಯನ್ಸ್‌’ ಖ್ಯಾತಿಯ ಇಂಗ್ಲೆಂಡ್‌ 3-0 ಗೋಲುಗಳಲ್ಲಿ ಸೆನೆಗಲ್‌ ವಿರುದ್ಧ ಜಯಗಳಿಸಿದರೆ, ಹಾಲಿ ಚಾಂಪಿಯನ್‌ ಫ್ರಾನ್ಸ್‌ ಪೋಲೆಂಡ್‌ ವಿರುದ್ಧ 3-1ರಲ್ಲಿ ಗೆದ್ದು ಸತತ 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿತು.

ಇಂಗ್ಲೆಂಡ್‌ನ 19 ವರ್ಷದ ಜೂಡ್‌ ಬೆಲ್ಲಿಂಗ್‌ಹ್ಯಾಮ್‌ ಭರವಸೆ ಮೂಡಿಸಿದ್ದು, ರಹೀಂ ಸ್ಟರ್ಲಿಂಗ್‌ ಮರಳಿರುವುದು ತಂಡದ ಬಲ ಹೆಚ್ಚಿಸಲಿದೆ. ಫಿಲ್‌ ಫೋಡೆನ್‌, ಹ್ಯಾರಿ ಕೇನ್‌, ಜೊರ್ಡನ್‌ ಹೆಂಡರ್‌ಸನ್‌, ಬುಕಾಯೊ ಸಾಕರಂತಹ ಅನುಭವಿ ಹಾಗೂ ಪ್ರತಿಭಾನ್ವಿತ ಆಟಗಾರರು ಇಂಗ್ಲೆಂಡ್‌ ತಂಡದಲ್ಲಿದ್ದಾರೆ. ಆದರೆ ಇಂಗ್ಲೆಂಡ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದಿದ್ದಕ್ಕಿಂತ ಸೋತಿರುವುದೇ ಜಾಸ್ತಿ. 1954, 1962, 1970, 1986, 2002, 2006ರ ವಿಶ್ವಕಪ್‌ಗಳಲ್ಲಿ ಅಂತಿಮ 8ರ ಸುತ್ತಿನಲ್ಲಿ ಸೋತಿದ್ದ ಇಂಗ್ಲೆಂಡ್‌, 2018ರಲ್ಲಿ ಸೆಮೀಸ್‌ನಲ್ಲಿ ಮುಗ್ಗರಿಸಿತ್ತು.

FIFA World Cup ಮೊರಾಕ್ಕೊ ಕನಸಿನ ಓಟವನ್ನು ನಿಲ್ಲಿಸುತ್ತಾ ಪೋರ್ಚುಗಲ್‌?

ಮತ್ತೊಂಡೆದೆ ‘ಲೆಸ್‌ ಬ್ಲ್ಯೂಸ್‌’ ಫ್ರಾನ್ಸ್‌ ಕಳೆದ 7 ವಿಶ್ವಕಪ್‌ಗಳಲ್ಲಿ 5ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಆದರೆ ಈ ವಿಶ್ವಕಪ್‌ನಲ್ಲಿ ಫ್ರಾನ್ಸ್‌ ಅಡಿರುವ ಎಲ್ಲಾ ಪಂದ್ಯಗಳಲ್ಲೂ ಗೋಲು ಬಿಟ್ಟುಕೊಟ್ಟಿದೆ. ಇದು ಗೋಲ್‌ ಕೀಪರ್‌ ಹ್ಯುಗೊ ಲಾರಿಸ್‌ ಹಾಗೂ ರಕ್ಷಣಾ ಪಡೆಯ ಮೇಲೆ ಒತ್ತಡಕ್ಕೆ ಕಾರಣವಾಗಬಹುದು.

4 ಪಂದ್ಯಗಳಲ್ಲಿ ಫ್ರಾನ್ಸ್‌ 9 ಗೋಲು

ಗುಂಪು ಹಂತದಲ್ಲಿ ಆಡಿದ 3 ಪಂದ್ಯಗಳಲ್ಲಿ 6 ಗೋಲು ಬಾರಿಸಿದ್ದ ಫ್ರಾನ್ಸ್‌, ಟ್ಯುನೀಶಿಯಾ ವಿರುದ್ಧ 0-1ರಲ್ಲಿ ಸೋಲುಂಡಿತ್ತು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 3 ಗೋಲು ಬಾರಿಸಿ ತನ್ನ ಒಟ್ಟು ಗೋಲು ಗಳಿಕೆಯನ್ನು 9ಕ್ಕೆ ಏರಿಸಿಕೊಂಡಿತ್ತು. ತಂಡದ ತಾರಾ ಆಟಗಾರ ಕಿಲಿಯಾನ್‌ ಎಂಬಾಪೆ 5 ಗೋಲು ಬಾರಿಸಿ ಈ ಬಾರಿ ‘ಗೋಲ್ಡನ್‌ ಬೂಟ್‌’ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿದಾರೆ.

ಪಂದ್ಯ: ರಾತ್ರಿ 12.30ಕ್ಕೆ
ಪ್ರಸಾರ: ಸ್ಪೋರ್ಟ್ಸ್ 18/ಜಿಯೋ ಸಿನಿಮಾ

click me!