ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯು ನವೆಂಬರ್ 20ರಿಂದ ಆರಂಭ
32 ಬಲಿಷ್ಠ ಫುಟ್ಬಾಲ್ ತಂಡಗಳು ಪ್ರಶಸ್ತಿಗಾಗಿ ಕಾದಾಟ
ತಲಾ 4 ತಂಡಗಳ 8 ಗುಂಪುಗಳನ್ನು ರಚಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶ
ಬೆಂಗಳೂರು(ನ.17): 2022ರ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ 32 ತಂಡಗಳು ಸೆಣಸಲಿದ್ದು, ತಲಾ 4 ತಂಡಗಳ 8 ಗುಂಪುಗಳನ್ನು ರಚಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಲಿವೆ. 8 ಪ್ರಿ ಕ್ವಾರ್ಟರ್ ಫೈನಲ್, 4 ಕ್ವಾರ್ಟರ್ ಫೈನಲ್, 2 ಸೆಮಿಫೈನಲ್‌ಗಳ ಬಳಿಕ ಫೈನಲ್‌ಗೇರುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಲಿದೆ. ವಿಶ್ವಕಪ್‌ಗೆ ಕಾಲಿಟ್ಟಿರುವ 32 ತಂಡಗಳು ಯಾವುವು, ಆ ತಂಡಗಳ ಬಲಾಬಲವೇನು ಎಂಬಿತ್ಯಾದಿ ವಿವರಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ ಇಂದು ನಿಮ್ಮ ಮುಂದಿಡುತ್ತಿದೆ.
ಗುಂಪು ‘ಎ’
undefined
ಕತಾರ್
ಚೊಚ್ಚಲ ಬಾರಿಗೆ ವಿಶ್ವಕಪ್‌ಗೆ ಕಾಲಿಟ್ಟಿದೆ. ಆತಿಥೇಯ ರಾಷ್ಟ್ರ ಎನ್ನುವ ಕಾರಣಕ್ಕೆ ನೇರ ಪ್ರವೇಶ ದೊರೆಯಿತು. ಏಷ್ಯನ್ ಕಪ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿತ್ತು. ಅಕ್ರಮ್ ಅಫೀಫ್, ಅಲ್ಮೊವಾಜ್ ಅಲಿ ಪ್ರಮುಖ ಆಟಗಾರರು. ದೊಡ್ಡ ತಂಡಗಳನ್ನು ಎದುರಿಸಿದ ಅನುಭವವಿಲ್ಲ.
ನಾಯಕ: ಹಸನ್ ಅಲ್-ಹೇಡೊಸ್, ಶ್ರೇಷ್ಠ ಸಾಧನೆ: ಚೊಚ್ಚಲ ಬಾರಿಗೆ ಕಣಕ್ಕೆ
ಇಕ್ವೆಡಾರ್
ಫಿಫಾ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ತಂಡದ ಡಿಫೆನ್ಸ್ ಅತ್ಯುತ್ತಮವೆನಿಸಿದ್ದು, ಫಾರ್ವರ್ಡ್ಸ್ ಹಾಗೂ ಮಿಡ್‌ಫೀಲ್ಡರ್‌ಗಳು ಬೆಂಬಲ ನೀಡಿದರೆ ಕೆಲ ಅಚ್ಚರಿಯ ಫಲಿತಾಂಶಗಳನ್ನು ನೀಡಬಲ್ಲ ತಂಡ. ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡುವ ಸಾಧ್ಯತೆ.
ನಾಯಕ: ಎನ್ನಾರ್ ವ್ಯಾಲೆನ್ಸಿಯಾ, ಶ್ರೇಷ್ಠ ಸಾಧನೆ: 2006ರಲ್ಲಿ ಪ್ರಿ ಕ್ವಾರ್ಟರ್
ಸೆನೆಗಲ್
ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿದೆ. ಆಫ್ರಿಕನ್ ಕಪ್ ವಿಜೇತ ತಂಡ. ಸಾಡಿಯೊ ಮಾನೆ, ಕಲಿಡೊ ಕೌಲಿಬಾಲಿ, ಎಡೊಯುರ್ಡ್ ಮೆಂಡಿಯಂತಹ ಆಟಗಾರರಿಗೆ ಪ್ರತಿಷ್ಠಿತ ಲೀಗ್‌ಗಳಲ್ಲಿ ಆಡಿದ ಅನುಭವವಿದೆ. ಆಕ್ರಮಣಕಾರಿ ಆಟಕ್ಕೆ ತಂಡ ಹೆಸರುವಾಸಿ.
ನಾಯಕ: ಕಲಿಡೊ ಕೌಲಿಬಾಲಿ, ಶ್ರೇಷ್ಠ ಸಾಧನೆ: 2002ರಲ್ಲಿ ಕ್ವಾರ್ಟರ್ ಫೈನಲ್
ನೆದರ್‌ಲೆಂಡ್‌್ಸ
ಕಳೆದ 15 ಪಂದ್ಯಗಳಲ್ಲಿ ನೆದರ್‌ಲೆಂಡ್‌್ಸ ಸೋಲನ್ನೇ ಕಂಡಿಲ್ಲ. ಈ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿರುವ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದು. ವ್ಯಾನ್ ಡಿಕ್, ಮಥಿಸ್ ಡೆ ಲಿಟ್‌ರಂತಹ ವಿಶ್ವಶ್ರೇಷ್ಠ ಡಿಫೆಂಡರ್‌ಗಳಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿದೆ.
ನಾಯಕ: ವರ್ಜಿಲ್ ವ್ಯಾನ್ ಡಿಕ್, ಶ್ರೇಷ್ಠ ಸಾಧನೆ: 1974, 78, 2010ರಲ್ಲಿ ರನ್ನರ್-ಅಪ್
ಗುಂಪು ‘ಬಿ’
ಇಂಗ್ಲೆಂಡ್
ಹ್ಯಾರಿ ಕೇನ್‌ರಂತಹ ವಿಶ್ವಶ್ರೇಷ್ಠ ಸ್ಟೆ್ರೖಕರ್ ಇದ್ದಾರೆ. ಆದರೆ ತಂಡ ಲಯದಲಿಲ್ಲ. ಕಳೆದ 6 ಪಂದ್ಯಗಳಲ್ಲಿ ಗೆದ್ದಿಲ್ಲ. ಬಲ ಭಾಗದ ಡಿಫೆನ್ಸ್ ಬಗ್ಗೆ ಸ್ವಲ್ಪ ಅಳುಕಿದೆ. ತಂಡದ ರಣತಂತ್ರಗಳು ಇತ್ತೀಚೆಗೆ ಕೈಹಿಡಿದಿದ್ದಕ್ಕಿಂತ ಕೈಕೊಟ್ಟಿದ್ದೇ ಹೆಚ್ಚು. ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದೆ.
ನಾಯಕ: ಹ್ಯಾರಿ ಕೇನ್, ಶ್ರೇಷ್ಠ ಸಾಧನೆ: 1966ರಲ್ಲಿ ಚಾಂಪಿಯನ್
ಇರಾನ್
ಅರ್ಹತಾ ಸುತ್ತಲ್ಲಿ ಆಡಿದ 10 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋಲು. ಕೌಂಟರ್ ಅಟ್ಯಾಕ್‌ಗೆ ಹೆಸರುವಾಸಿಯಾಗಿರುವ ತಂಡ. ಹೆಚ್ಚಾಗಿ ಲಾಂಗ್ ಪಾಸ್‌ಗಳ ಮೇಲೆ ನಂಬಿಕೆ ಇಟ್ಟಿರುವುದು ಹಿನ್ನಡೆ ತರಬಹುದು. ವಿಶ್ವ ರ‍್ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿದೆ.
ನಾಯಕ: ಎಹ್ಸಾನ್ ಹಜ್‌ಸಫಿ, ಶ್ರೇಷ್ಠ ಸಾಧನೆ: 5 ಬಾರಿ ಕಣಕ್ಕೆ
ಅಮೆರಿಕ
ಯುವ, ಪ್ರತಿಭಾನ್ವಿತ ಆಟಗಾರರಿಂದ ಕೂಡಿರುವ ತಂಡ. ತಂಡದಲ್ಲಿರುವ ಆಟಗಾರರ ಸರಾಸರಿ ವಯಸ್ಸು 24.5 ವರ್ಷ. ಪುಲಿಸಿಚ್ ಮೇಲೆ ಭಾರೀ ನಿರೀಕ್ಷೆ ಇದೆ. ಕಳೆದ 10 ಪಂದ್ಯದಲ್ಲಿ ಕೇವಲ 2ರಲ್ಲಿ ಸೋತಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿದೆ.
ನಾಯಕ: ಕ್ರಿಶ್ಚಿಯನ್ ಪುಲಿಸಿಚ್, ಶ್ರೇಷ್ಠ ಸಾಧನೆ: 1930ರಲ್ಲಿ 3ನೇ ಸ್ಥಾನ
ವೇಲ್ಸ್
ಗೆರಾತ್ ಬೇಲ್ ತಂಡದ ತಾರಾ ಆಕರ್ಷಣೆ. 2020ರ ಯುರೋ ಕಪ್‌ನಲ್ಲಿ ಪ್ರಿ ಕ್ವಾರ್ಟರ್‌ಗೇರಿತ್ತು. ಈ ವಿಶ್ವಕಪ್‌ನಲ್ಲೂ ನಾಕೌಟ್‌ಗೇರಬಹುದು. ಆದರೆ ಲಯದ ಸಮಸ್ಯೆ ಇದೆ. ಕಳೆದ 10 ಅರ್ಹತಾ ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ. ವಿಶ್ವ ರ‍್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದೆ.
ನಾಯಕ: ಗೆರಾತ್ ಬೇಲ್, ಶ್ರೇಷ್ಠ ಸಾಧನೆ: 1958ರಲ್ಲಿ ಕ್ವಾರ್ಟರ್ ಫೈನಲ್
ಗುಂಪು ‘ಸಿ’
ಅರ್ಜೆಂಟೀನಾ
ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು. ಮೆಸ್ಸಿ, ಮಾರ್ಟಿನೆಜ್, ರೊಡ್ರಿಗೊ ಪೌಲ್‌ರಂತಹ ತಾರಾ ಆಟಗಾರರಿದ್ದಾರೆ. ಆದರೆ ತಂಡದ ರಕ್ಷಣಾ ಪಡೆ ದುರ್ಬಲವಾಗಿ ತೋರುತ್ತಿದೆ. ಅಭಿಮಾನಿಗಳ ನಿರೀಕ್ಷೆಯ ಭಾರವೂ ಇದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನ.
ನಾಯಕ: ಲಿಯೋನೆಲ್ ಮೆಸ್ಸಿ, ಶ್ರೇಷ್ಠ ಸಾಧನೆ: 1978, 86ರಲ್ಲಿ ಚಾಂಪಿಯನ್
ಸೌದಿ ಅರೇಬಿಯಾ
ಸಾಧಾರಣ ಲಯದೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟಿದೆ. ಅರ್ಹತಾ ಸುತ್ತಿನ 12 ಪಂದ್ಯಗಳಲ್ಲಿ ಒಂದೂ ಗೋಲು ಬಿಟ್ಟುಕೊಟ್ಟಿರಲಿಲ್ಲ. ಬಲಿಷ್ಠ ತಂಡಗಳನ್ನು ಆಡಿದ ಅನುಭವವಿಲ್ಲ. ತಂಡ ಕಳೆದ 11 ಪಂದ್ಯಗಳಲ್ಲಿ ಕೇವಲ 2 ಗೋಲು ಗಳಿಸಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 51ನೇ ಸ್ಥಾನ.
ನಾಯಕ: ಸಲ್ಮಾನ್ ಅಲ್-ಫರಾಜ್, ಶ್ರೇಷ್ಠ ಸಾಧನೆ: 1994ರಲ್ಲಿ ಪ್ರಿ ಕ್ವಾರ್ಟರ್
ಮೆಕ್ಸಿಕೋ
ತಾಂತ್ರಿಕವಾಗಿ ಬಲಿಷ್ಠವಾಗಿರುವ ತಂಡ. ಕೋಚ್ ಜೆರಾರ್ಡೊ ಮಾರ್ಟಿನೆಜ್ ಮಾರ್ಗದರ್ಶನದಿಂದ ತಂಡದಲ್ಲಿ ಹಲವು ಬದಲಾವಣೆ. ಫಿಫಾ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೇರಿಕೆ. ಆದರೆ ಕಳೆದ 8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಜಯ. ಒಮ್ಮೆ ಮಾತ್ರ ಕ್ಲೀನ್‌ಶೀಟ್.
ನಾಯಕ: ಆ್ಯಂಡ್ರೆಸ್ ಗುವಡಾರ್ಡೊ, ಶ್ರೇಷ್ಠ ಸಾಧನೆ: 1970, 86ರಲ್ಲಿ ಕ್ವಾರ್ಟರ್ ಫೈನಲ್
ಪೋಲೆಂಡ್
ಆಕ್ರಮಣಕಾರಿ ಆಟವೇ ತಂಡದ ಬಲ. ಲೆವಾಂಡೋವ್ಸಿ$್ಕ ಪ್ರಮುಖ ಆಟಗಾರ. ತಾಂತ್ರಿಕವಾಗಿ ಸ್ಥಿರ ಹಾಗೂ ರಕ್ಷಣಾತ್ಮಕವಾಗಿ ಬಲಿಷ್ಠವಾಗಿರುವ ತಂಡ. ಝೀಲೆನ್ಸಿ$್ಕ ಮೇಲೂ ಭಾರೀ ನಿರೀಕ್ಷೆ ಇದೆ. ಪೋಲೆಂಡ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 26ನೇ ಸ್ಥಾನದಲ್ಲಿದೆ.
ನಾಯಕ: ರಾಬರ್ಚ್ ಲೆವಾಂಡೋವ್ಸಿ$್ಕ, ಶ್ರೇಷ್ಠ ಸಾಧನೆ: 1974, 82ರಲ್ಲಿ 3ನೇ ಸ್ಥಾನ
ಗುಂಪು ‘ಡಿ’
ಫ್ರಾನ್ಸ್
ಹಾಲಿ ಚಾಂಪಿಯನ್. ಕೆಲ ಗಾಯಾಳುಗಳ ಸಮಸ್ಯೆ ಇದ್ದರೂ ಬಲಿಷ್ಠ ತಂಡ ಹೊಂದಿದೆ. ಕರೀಮ್ ಬೆನ್ಜೆಮಾ, ಕಿಲಿಯಾನ್ ಎಂಬಾಪೆ, ಸಲಿಬಾರಂತಹ ವಿಶ್ವಶ್ರೇಷ್ಠ ಆಟಗಾರರಿದ್ದಾರೆ. ಪೊಗ್ಬಾ, ಕಾಂಟೆ ಅನುಪಸ್ಥಿತಿ ಕಾಡಬಹುದು. ವಿಶ್ವ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದೆ.
ನಾಯಕ: ಹ್ಯುಗೊ ಲಾರಿಸ್, ಶ್ರೇಷ್ಠ ಸಾಧನೆ: 1998, 2018ರಲ್ಲಿ ಚಾಂಪಿಯನ್
ಆಸ್ಪ್ರೇಲಿಯಾ
ಅತ್ಯಂತ ಅಪಾಯಕಾರಿ ತಂಡಗಳಲ್ಲೊಂದು. ಎದುರಾಳಿಗಳಿಗೆ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಲು ಅವಕಾಶ ನೀಡುವುದಿಲ್ಲ. ಆದರೆ ವಿಶ್ವಕಪ್‌ನಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಒತ್ತಡಕ್ಕೆ ಮಣಿಯಬಹುದು. ವಿಶ್ವ ರ‍್ಯಾಂಕಿಂಗ್‌ನಲ್ಲಿ 38ನೇ ಸ್ಥಾನದಲ್ಲಿದೆ.
ನಾಯಕ: ಮ್ಯಾಟ್ ರಾರಯನ್, ಶ್ರೇಷ್ಠ ಸಾಧನೆ: 2006ರಲ್ಲಿ ಪ್ರಿ ಕ್ವಾರ್ಟರ್
ಡೆನ್ಮಾರ್ಕ್
ಹಲವು ಗುಣಮಟ್ಟದ ಆಟಗಾರರಿದ್ದಾರೆ. ಆದರೆ ಸಿಕ್ಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವ ಚಾಕಚಕ್ಯತೆ ಇರುವ ಸೆಂಟರ್ ಫಾರ್ವರ್ಡ್ ಆಟಗಾರನ ಕೊರತೆ ಎದ್ದು ಕಾಣುತ್ತಿದೆ. ಕೆಲ ಪ್ರಮುಖ ಆಟಗಾರರು ಲಯದಲಿಲ್ಲ. ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದೆ.
ನಾಯಕ: ಸೈಮನ್ ಕೇರ್, ಶ್ರೇಷ್ಠ ಸಾಧನೆ: 1998ರಲ್ಲಿ ಕ್ವಾರ್ಟರ್ ಫೈನಲ್
ಟ್ಯುನಿಶೀಯಾ
4-3-3 ರಚನೆ ತಂಡಕ್ಕೆ ಚೆನ್ನಾಗಿ ಒಗ್ಗಿದೆ. ಕಳೆದ 12 ಪಂದ್ಯಗಳಲ್ಲಿ ಕೇವಲ 3 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಗುಂಪಿನ ಅಂಡರ್ ಡಾಗ್‌್ಸ. ತಂಡದ ಅಟ್ಯಾಕಿಂಗ್ ಬಗ್ಗೆ ಸ್ವಲ್ಪ ಅನುಮಾನಗಳಿವೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 30ನೇ ಸ್ಥಾನದಲ್ಲಿದೆ.
ನಾಯಕ: ಯೂಸುಫ್ ಮಸೇಕ್ನಿ, ಶ್ರೇಷ್ಠ ಸಾಧನೆ: 5 ಬಾರಿ ಕಣಕ್ಕೆ
ಗುಂಪು ‘ಇ’
ಸ್ಪೇನ್
ಕಳೆದ 9 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋತಿದೆ. ತಂಡದಲ್ಲಿ ಸಮತೋಲನವಿದೆ. ಗುಣಮಟ್ಟದ ಮಿಡ್‌ಫೀಲ್ಡರ್‌ಗಳಿದ್ದಾರೆ. ಆದರೆ ವಿಶ್ವ ನಂ.7 ‘ಲಾ ರೋಜಾ’ ತಂಡ ಉತ್ತಮ ಫಿನಿಶರ್‌ನ ಕೊರತೆ ಎದುರಿಸುತ್ತಿದೆ. ಇದು ಹಿನ್ನಡೆಯಾಗಬಹುದು.
ನಾಯಕ: ಸರ್ಜಿಯೋ ಬಸ್ಕೆಟ್ಸ್, ಶ್ರೇಷ್ಠ ಸಾಧನೆ: 2010ರಲ್ಲಿ ಚಾಂಪಿಯನ್
ಕೋಸ್ಟಾರಿಕಾ
ಕೇಯ್ಲರ್ ನವಾಸ್ ತಂಡದ ತಾರಾ ಆಕರ್ಷಣೆ. ತಾಂತ್ರಿಕವಾಗಿ ತಂಡ ಮುಂದಿದೆ. ಕಳೆದ 9 ಪಂದ್ಯಗಳಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳನ್ನು ಒಳಗೊಂಡಂತೆ 7ರಲ್ಲಿ ಗೆದ್ದಿದೆ. ಆದರೆ ವಿಶ್ವ ನಂ. 31 ತಂಡದ ಡಿಫೆನ್ಸ್‌ಗೆ ಹೋಲಿಸಿದರೆ ಅಫೆನ್ಸ್ ಚುರುಕಾಗಿಲ್ಲ.
ನಾಯಕ: ಬ್ರಿಯಾನ್ ರೂಯಿಜ್, ಶ್ರೇಷ್ಠ ಸಾಧನೆ: 2014ರಲ್ಲಿ ಕ್ವಾರ್ಟರ್ ಫೈನಲ್
ಜರ್ಮನಿ
ಈ ಹಿಂದಿನ ಜರ್ಮನಿ ತಂಡಗಳಿಗೆ ಹೋಲಿಕೆ ಮಾಡುವಂತಿಲ್ಲ. ಇತ್ತೀಚೆಗೆ ತಾಂತ್ರಿಕತೆಗಿಂತ ಕಲಾತ್ಮಕ ಹಾಗೂ ಆಕಷರ್ಣೀಯ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ವಿಶ್ವ ಶ್ರೇಷ್ಠ ಗೋಲ್‌ಕೀಪರ್ ತಂಡದ ಬಲ. ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ.
ನಾಯಕ: ಮ್ಯಾನುಯಲ್ ನೋಯರ್, ಶ್ರೇಷ್ಠ ಸಾಧನೆ: 1954, 74, 90, 2014ರಲ್ಲಿ ಚಾಂಪಿಯನ್
ಜಪಾನ್
ಏಷ್ಯಾದ ಮಟ್ಟಿಗೆ ಅತ್ಯುತ್ತಮ ತಂಡ. ಕೆಲ ಅಚ್ಚರಿಯ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವಿದೆ. ಆದರೆ ವಿಶ್ವಕಪ್ ಒತ್ತಡ ನಿಭಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿದೆ.
ನಾಯಕ: ಮಾಯೆ ಯೋಶಿದಾ, ಶ್ರೇಷ್ಠ ಸಾಧನೆ: 2002, 10, 18ರಲ್ಲಿ ಪ್ರಿ ಕ್ವಾರ್ಟರ್
ಗುಂಪು ‘ಎಫ್’
ಬೆಲ್ಜಿಯಂ
ವಿಶ್ವ ನಂ.2 ಬೆಲ್ಜಿಯಂ ಒತ್ತಡ ನಿಭಾಯಿಸಿದರೆ ಖಂಡಿತ ಚಾಂಪಿಯನ್ ಆಗಬಹುದು. ಡೆ ಬ್ರುನೆ, ಲುಕಾಕು, ಹಜಾರ್ಡ್, ಟೈಲೆಮ್ಯಾನ್ಸ್ ಹಾಗೂ ವಿಶ್ವಶ್ರೇಷ್ಠ ಗೋಲ್‌ಕೀಪರ್ ಕೌರ್ಟಿಸ್ ತಂಡದ ಬಲ. ಆದರೆ ಕೆಲ ಗಾಯದ ಸಮಸ್ಯೆಗಳಿದ್ದು ಹಿನ್ನಡೆಯಾಗಬಹುದು.
ನಾಯಕ: ಎಡನ್ ಹಜಾರ್ಡ್, ಶ್ರೇಷ್ಠ ಸಾಧನೆ: 2018ರಲ್ಲಿ 3ನೇ ಸ್ಥಾನ
ಕೆನಡಾ
ಯುವ ಹಾಗೂ ಅನುಭವಿಗಳ ಮಿಶ್ರಿತ ತಂಡ. ಬುಕನನ್, ಡೇವಿಸ್‌ರಂತಹ ಗುಣಮಟ್ಟದ ಆಟಗಾರರ ಬಲವಿದೆ. 36 ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಕೆನಡಾ 41ನೇ ಸ್ಥಾನದಲ್ಲಿದೆ.
ನಾಯಕ: ಅತಿಬಾ ಹಚಿನ್ಸನ್, ಶ್ರೇಷ್ಠ ಸಾಧನೆ: 1986ರಲ್ಲಿ ಗುಂಪು ಹಂತ
ಮೊರೊಕ್ಕೊ
ಹಕಿಮಿ, ಬೌನೌ, ಝಿಯೆಚ್ ವಿದೇಶಿ ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೆ ಕೆಲವೇ ಕೆಲ ಆಟಗಾರರ ಮೇಲೆ ತಂಡ ಹೆಚ್ಚು ಅಲವಂಬಿತಗೊಂಡಿದೆ. ಇತ್ತೀಚಿನ ಲಯವೂ ವಿಶ್ವ ನಂ.22 ತಂಡಕ್ಕೆ ಹಿನ್ನಡೆಯಾಬಹುದು.
ನಾಯಕ: ರೋಮೈನ್ ಸೈಸ್, ಶ್ರೇಷ್ಠ ಸಾಧನೆ: 1986ರಲ್ಲಿ ಪ್ರಿ ಕ್ವಾರ್ಟರ್
ಕ್ರೊವೇಷಿಯಾ
ಅನುಭವಿ ಮಿಡ್‌ಫೀಲ್ಡರ್‌ಗಳಿಂದ ಕೂಡಿರುವ ತಂಡ. 2018ರ ವಿಶ್ವಕಪ್‌ನಲ್ಲಿ ಆಡಿದ ಬಹುತೇಕ ಆಟಗಾರರು ತಂಡದಲ್ಲಿದ್ದಾರೆ. ಆದರೆ ಡಿಫೆನ್ಸ್ ಹಾಗೂ ಅಫೆನ್ಸ್ ಎರಡರಲ್ಲೂ ಗುಣಮಟ್ಟದ ಕೊರತೆ ಇದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನ.
ನಾಯಕ: ಲೂಕಾ ಮೊಡ್ರಿಚ್, ಶ್ರೇಷ್ಠ ಸಾಧನೆ: 2018ರಲ್ಲಿ ರನ್ನರ್-ಅಪ್
ಗುಂಪು ‘ಜಿ’
ಬ್ರೆಜಿಲ್
ವಿಶ್ವ ನಂ.1 ತಂಡವಾಗಿ ಕಣಕ್ಕೆ. 2021ರ ಅಕ್ಟೋಬರ್‌ನಿಂದ 2022ರ ಸೆಪ್ಟೆಂಬರ್‌ವರೆಗೂ 13 ಪಂದ್ಯಗಳಲ್ಲಿ ಸೋತಿಲ್ಲ. ಈ ಅವಧಿಯಲ್ಲಿ 35 ಗೋಲು ಬಾರಿಸಿದ ತಂಡ, ಕೇವಲ 6 ಗೋಲು ಬಿಟ್ಟುಕೊಟ್ಟಿದೆ. ಕಪ್ ಗೆಲ್ಲಬಲ್ಲ ನೆಚ್ಚಿನ ತಂಡ.
ನಾಯಕ: ಥಿಯಾಗೋ ಸಿಲ್ವಾ, ಶ್ರೇಷ್ಠ ಸಾಧನೆ: 1958, 62, 70, 94, 2002ರಲ್ಲಿ ಚಾಂಪಿಯನ್
ಸರ್ಬಿಯಾ
ಅರ್ಹತಾ ಸುತ್ತಿನಲ್ಲಿ ಅಜೇಯವಾಗಿ ಉಳಿದ ತಂಡ. ತಂಡದ ಪ್ರಮುಖ ಆಟಗಾರರು ಉತ್ತಮ ಲಯದಲ್ಲಿದ್ದಾರೆ. 98ರ ವಿಶ್ವಕಪ್ ಬಳಿಕ ಗುಂಪು ಹಂತದಿಂದ ಮುನ್ನಡೆದಿಲ್ಲ. ಆ ದಾಖಲೆ ಈ ಬಾರಿ ಉತ್ತಮಗೊಳ್ಳಬಹುದು. ವಿಶ್ವ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನ.
ನಾಯಕ: ದುಸಾನ್ ತಡಿಚ್, ಶ್ರೇಷ್ಠ ಸಾಧನೆ: 1930, 62ರಲ್ಲಿ 4ನೇ ಸ್ಥಾನ
ಸ್ವಿಜರ್‌ಲೆಂಡ್
ಅರ್ಹತಾ ಸುತ್ತಿನಲ್ಲಿ ಅಜೇಯ ಓಟ. ಇತ್ತೀಚಿನ ವರ್ಷಗಳಲ್ಲಿ ಸ್ಥಿರ ಪ್ರದರ್ಶನ. ಕಳೆದ 4 ವಿಶ್ವಕಪ್‌ಗಳಲ್ಲಿ 3ರಲ್ಲಿ ಪ್ರಿ ಕ್ವಾರ್ಟರ್ ಪ್ರವೇಶ. ಗ್ರಾನಿಟ್ ಕ್ಸಾಕಾ ಪ್ರಮುಖ ಆಟಗಾರ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಸ್ವಿಜರ್‌ಲೆಂಡ್ 15ನೇ ಸ್ಥಾನದಲ್ಲಿದೆ.
ನಾಯಕ: ಗ್ರಾನಿಟ್ ಕ್ಸಾಕಾ, ಶ್ರೇಷ್ಠ ಸಾಧನೆ: 1934, 38, 54ರಲ್ಲಿ ಕ್ವಾರ್ಟರ್ ಫೈನಲ್
ಕ್ಯಾಮರೂನ್
ಯುರೋಪಿಯನ್ ಲೀಗ್‌ಗಳಲ್ಲಿ ಆಡುವ ಆಟಗಾರರ ಬಲ ತಂಡಕ್ಕಿದೆ. ಆಫ್ರಿಕನ್ಸ್ ಕಪ್‌ನಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಎರಿಕ್ ಮ್ಯಾಕ್ಸಿಮ್ ತಂಡದ ಪ್ರಮುಖ ಆಟಗಾರ. ವಿಶ್ವ ರ‍್ಯಾಂಕಿಂಗ್‌ನಲ್ಲಿ 43ನೇ ಸ್ಥಾನದಲ್ಲಿದೆ.
ನಾಯಕ: ವಿನ್ಸೆಂಟ್ ಅಬೂಬಕರ್, ಶ್ರೇಷ್ಠ ಸಾಧನೆ: 1990ರಲ್ಲಿ ಕ್ವಾರ್ಟರ್ ಫೈನಲ್
ಗುಂಪು ‘ಎಚ್’
ಪೋರ್ಚುಗಲ್
ಕ್ರಿಸ್ಟಿಯಾನೋ ರೊನಾಲ್ಡೋ ತಂಡದ ತಾರಾ ಆಕರ್ಷಣೆ. ಆದರೆ ಅವರಿಗೆ ತಕ್ಕ ಬೆಂಬಲ ನೀಡುವಲ್ಲಿ ತಂಡ ಪದೇಪದೇ ಎಡವಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ತಂಡ, ಇತ್ತೀಚೆಗೆ ಸ್ಪೇನ್, ಸ್ವಿಜರ್‌ಲೆಂಡ್ ವಿರುದ್ಧ ಸೋಲುಂಡಿತ್ತು.
ನಾಯಕ: ಕ್ರಿಸ್ಟಿಯಾನೋ ರೊನಾಲ್ಡೋ, ಶ್ರೇಷ್ಠ ಸಾಧನೆ: 1966ರಲ್ಲಿ 3ನೇ ಸ್ಥಾನ
ಘಾನಾ
ಅನಿರೀಕ್ಷಿತ ಫಲಿತಾಂಶಗಳನ್ನು ನೀಡಬಲ್ಲ ಸಾಮರ್ಥ್ಯವಿರುವ ತಂಡ. ವಿಶ್ವ ರಾರಯಂಕಿಂಗ್‌ನಲ್ಲಿ 61ನೇ ಸ್ಥಾನ. ಈ ವಿಶ್ವಕಪ್‌ನಲ್ಲಿ ಆಡಲಿರುವ ಅತಿ ಕಡಿಮೆ ರಾರಯಂಕ್ ಹೊಂದಿರುವ ತಂಡ. ಕಳೆದೊಂದು ವರ್ಷದಲ್ಲಿ ಅಸ್ಥಿರ ಪ್ರದರ್ಶನ.
ನಾಯಕ: ಆ್ಯಂಡ್ರೆ ಅಯೆವ್, ಶ್ರೇಷ್ಠ ಸಾಧನೆ: 2010ರಲ್ಲಿ ಕ್ವಾರ್ಟರ್ ಫೈನಲ್
ಉರುಗ್ವೆ
ಈ ವರ್ಷ ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಜಯ. ಆದರೆ ಇತ್ತೀಚೆಗೆ ಇರಾನ್ ವಿರುದ್ಧ ಸೋತಿದ್ದು, ತಂಡದ ತಂತ್ರಗಾರಿಕೆ ಬಗ್ಗೆ ಪ್ರಶ್ನೆಗಳು ಮೂಡುವಂತೆ ಮಾಡಿತ್ತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ತಂಡ.
ನಾಯಕ: ಡೀಗೊ ಗಾಡಿನ್, 1930, 50ರಲ್ಲಿ ಚಾಂಪಿಯನ್
ದಕ್ಷಿಣ ಕೊರಿಯಾ
ಮತ್ತೊಂದು ಅನಿರೀಕ್ಷಿತ ಫಲಿತಾಂಶಗಳನ್ನು ನೀಡಬಲ್ಲ ಸಾಮರ್ಥ್ಯವಿರುವ ತಂಡ. ಉತ್ತಮ ಆಟಗಾರರನ್ನು ಹೊಂದಿದ್ದರೂ ವಿಶ್ವಕಪ್‌ನಲ್ಲಿ ಕಳಪೆ ದಾಖಲೆ. ಈ ವರ್ಷ ಅಸ್ಥಿರ ಪ್ರದರ್ಶನ. ವಿಶ್ವ ರ‍್ಯಾಂಕಿಂಗ್‌ನಲ್ಲಿ 28ನೇ ಸ್ಥಾನದಲ್ಲಿರುವ ದ.ಕೊರಿಯಾ.
ನಾಯಕ: ಸಾನ್ ಹ್ಯೊಂಗ್-ಮಿನ್, ಶ್ರೇಷ್ಠ ಸಾಧನೆ: 2002ರಲ್ಲಿ 4ನೇ ಸ್ಥಾನ